ಬುಧವಾರ, ಅಕ್ಟೋಬರ್ 16, 2019
28 °C

ಪೊಲೀಸ್ ಇಲಾಖೆಗೆ ಬುಡಕಟ್ಟು ತರುಣರ ನೇಮಕ: ಶಂಕರ ಬಿದರಿ

Published:
Updated:

ಉಡುಪಿ: `ಸೂರ್ಯಚಂದ್ರ ಇರುವವರೆಗೂ ನಮ್ಮ ರಾಜ್ಯದಲ್ಲಿ ಮಾವೋವಾದ ಯಶಸ್ವಿಯಾಗುವುದಿಲ್ಲ.  ಅಡ್ಡಹಾದಿ ತುಳಿದಿರುವ ನಕ್ಸಲರೇ ಆ ಮಾರ್ಗಬಿಟ್ಟು ಶರಣಾಗಿ, ಸಮಾಜದ ಮುಖ್ಯವಾಹಿನಿಗೆ ಬನ್ನಿ ಕಾನೂನು ಪರಿಧಿಯಲ್ಲಿ ನಿಮ್ಮ ಸಮಸ್ಯೆ ಪರಿಹಾರ ಮಾಡಿಕೊಳ್ಳಿ~ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ನಕ್ಸಲರಿಗೆ ಮನವಿ ಮಾಡಿದರು.ಕಾರ್ಕಳದ ಹೆಬ್ರಿ ಪೊಲೀಸ್‌ಠಾಣೆಗೆ ಗುರುವಾರ ಭೇಟಿ ನೀಡಿದ ಅವರು ಇತ್ತೀಚೆಗೆ ನಕ್ಸಲರಿಂದ ಹತರಾದ ಕಬ್ಬಿನಾಲೆಯ ಸದಾಶಿವ ಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿ, ಅವರ ತಾಯಿ ಗೋಪಿ ಅವರಿಗೆ ರೂ.3 ಲಕ್ಷ ಧನ ಸಹಾಯ ವಿತರಿಸಿ ಬಳಿಕ ಮಾಧ್ಯಮದ ಜತೆ ಮಾತನಾಡಿದರು. `ನೀವೂ ಕೂಡ ನಮ್ಮ ಸಹೋದರ ಸಹೋದರಿಯರು. ನೀವು 25-30 ಮಂದಿ ರಾಜ್ಯದಲ್ಲಿರಬಹುದು. ತಪ್ಪು ಹಾದಿಯಲ್ಲಿ ಸಾಗಿ ಜೀವನ ಹಾಳು ಮಾಡಿಕೊಳ್ಳದೇ,  ನಕ್ಸಲ್ ಶರಣಾಗತಿ ಪ್ಯಾಕೇಜ್ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬನ್ನಿ. ಇಲ್ಲದಿದ್ದರೆ ಪೊಲೀಸರು ಕೂಡ ನಿಮ್ಮ ಮೇಲೆ ಅನಿವಾರ್ಯ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ~ ಎಂದು ಅವರು ನಕ್ಸಲರಿಗೆ ಎಚ್ಚರಿಸಿದರು.`ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ~ ಎಂದು ಹೇಳಿದ ಬಿದರಿ, `ಈ ಭಾಗದ 100 ಮಂದಿ ಬುಡಕಟ್ಟು ತರುಣರನ್ನು ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲಾಗುವುದು. ಕಾರ್ಕಳ, ಬೆಳ್ತಂಗಡಿ ಹಾಗೂ ಶೃಂಗೇರಿ ಭಾಗದಿಂದ ಬುಡಕಟ್ಟು ಯುವಕರನ್ನು ಸೇರಿಸಿಕೊಂಡು ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಲಾಗುವುದು, ಈ ಪ್ರಕ್ರಿಯೆ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ~ ಎಂದರು.

 

Post Comments (+)