ಭಾನುವಾರ, ಆಗಸ್ಟ್ 25, 2019
27 °C

ಪೊಲೀಸ್ ಇಲಾಖೆಯಿಂದ ಮೀಡಿಯಾ ಸ್ಟಿಕ್ಕರ್ ವಿತರಣೆ

Published:
Updated:

ಮಡಿಕೇರಿ: ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆಯ ಅಂಗವಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪತ್ರಕರ್ತರ ವಾಹನಗಳಿಗಾಗಿ ಒದಗಿಸಲಾಗುವ ಅಧಿಕೃತ ಮೀಡಿಯಾ ಸ್ಟಿಕ್ಕರ್ ವಿತರಣಾ ಕಾರ್ಯಕ್ರಮ ಭಾನುವಾರ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಅನುಚೇತ್ ಅವರು `ಮೀಡಿಯಾ ಸ್ಟೀಕರ್'ನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿ, ಪತ್ರಿಕೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಈ ಕ್ರಮ ಅನುಸರಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ನೈಜ ಪತ್ರಕರ್ತರಿಗೆ ಪೊಲೀಸ್ ಇಲಾಖೆಯಿಂದ ಸ್ಟಿಕ್ಕರ್ ವಿತರಣೆ ಮಾಡಲಾಗುವುದು. ಪತ್ರಕರ್ತರು ತಮ್ಮ ವಾಹನಗಳಲ್ಲಿ ಅಳವಡಿಸಿರುವ `ಪ್ರೆಸ್' ಎಂಬ ಫಲಕವನ್ನು ಒಂದು ತಿಂಗಳ ಅವಧಿಯಲ್ಲಿ ತೆಗೆದು ಹಾಕಬೇಕು ಎಂದು ಅವರು ಹೇಳಿದರು.ರಾಷ್ಟ್ರೀಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಿಕೋದ್ಯಮದ ಹೆಸರಿನಲ್ಲಿ ಬೇರಾವುದೋ ವ್ಯಕ್ತಿ ತಪ್ಪು ಮಾಡಿದರೆ ಇಡೀ ಪತ್ರಿಕಾ ರಂಗಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಜಾರಿಗೆ ತಂದಿರುವ  ಸ್ಟಿಕ್ಕರ್  ಪದ್ಧತಿ ಸ್ವಾಗತಾರ್ಹ ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶ್ರೀಧರ ಹೂವಲ್ಲಿ, ಸೈಯದ್ ಇರ್ಫಾನ್, ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು.ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರಿಧರ ನೆಲ್ಲಿತ್ತಾಯ, ಪ್ರಧಾನ ಕಾರ್ಯದರ್ಶಿ ರಮೇಶ್ ಕುಟ್ಟಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Post Comments (+)