ಶುಕ್ರವಾರ, ಆಗಸ್ಟ್ 6, 2021
25 °C

ಪೊಲೀಸ್ ಕಮಿಷನರ್ ಆಗಿ ಜ್ಯೋತಿಪ್ರಕಾಶ್ ಮಿರ್ಜಿ ಅಧಿಕಾರ ಸ್ವೀಕಾರ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಅವರು ಬೆಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ನಿರ್ಗಮಿತ ಪೊಲೀಸ್ ಕಮಿಷನರ್ ಶಂಕರ ಬಿದರಿ ಅವರು ಬೇಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.ಆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿರ್ಜಿ ಅವರು, ‘ಬೆಂಗಳೂರಿನ ಜನ ಶಾಂತಿ ಮತ್ತು ನಿರ್ಭೀತಿಯಿಂದ ಜೀವನ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಕಾನ್‌ಸ್ಟೆಬಲ್‌ನಿಂದ ಹಿಡಿದು ಕಮಿಷನರ್‌ವರೆಗೆ ಎಲ್ಲರೂ ದಿನದ 24 ಗಂಟೆಗಳ ಕಾಲ ಕೆಲಸ ಮಾಡಿ ಅಪರಾಧ ತಡೆಗಟ್ಟಲು ಮತ್ತು ಕಾನೂನು- ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತೇವೆ. ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುವುದು ನಮ್ಮ ಗುರಿ’ ಎಂದರು.‘ಆಯಾ ಪೊಲೀಸ್ ಠಾಣೆಗಳ ಠಾಣಾಧಿಕಾರಿ ತಮ್ಮ ವ್ಯಾಪ್ತಿಯಲ್ಲಿನ ಜವಾಬ್ದಾರಿಯನ್ನು ವಹಿಸಬೇಕು. ಯಾವುದೇ ಲೋಪವಾದರೂ ಠಾಣಾಧಿಕಾರಿಯನ್ನೇ ಹೊಣೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಸಿಬ್ಬಂದಿಗೂ ಅಗತ್ಯ ಬೆಂಬಲ ಮತ್ತು ಸಹಕಾರ ಹಿರಿಯ ಅಧಿಕಾರಿಗಳಿಂದ ಸಿಗಲಿದೆ. ಅದನ್ನು ಸಿಬ್ಬಂದಿ ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.‘ಸಂಚಾರ ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯತ್ನಿಸಲಾಗುತ್ತದೆ. ಕಾನೂನು ಮೀರಿ ವರ್ತಿಸುವ ಸಮಾಜ ಘಾತುಕ ಶಕ್ತಿಗಳು ಹಾಗೂ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.ಉತ್ತಮ ಕೆಲಸ ಮುಂದುವರಿಕೆ: ವಾರಕ್ಕೆ ಮೂರು ದಿನ ಜನತಾ ದರ್ಶನ ಮಾಡುವ ಮೂಲಕ ಶಂಕರ ಬಿದರಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಜನತಾ ದರ್ಶನವನ್ನು ಮುಂದುವರೆಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಗರದಲ್ಲಿ ಕೆಲಸ ಮಾಡಿದ ಎಲ್ಲ ಕಮಿಷನರ್‌ಗಳು ತಮ್ಮದೇ ಆದ ಛಾಪನ್ನೂ ಮೂಡಿಸಿ ಹೋಗಿದ್ದಾರೆ. ನಾನು ಸಹ ಉತ್ತಮವಾಗಿ ಕೆಲಸ ಮಾಡುವ ಮೂಲಕ ಛಾಪು ಮೂಡಿಸುತ್ತೇನೆ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು. ಬಿದರಿ ಅವರು ಮಾಡಿರುವ ಉತ್ತಮ ಕೆಲಸಗಳನ್ನೂ ಮುಂದುವರೆಸಿಕೊಂಡು ಹೋಗಲಾಗುತ್ತದೆ.ಜನತಾ ದರ್ಶನವನ್ನು ಮುಂದುವರೆಸಬೇಕೇ, ವಾರಕ್ಕೆ ಮೂರು ದಿನ ನಡೆಸಬೇಕೆ ಅಥವಾ ಇನ್ನೂ ಹೆಚ್ಚಿಸಬೇಕೆ ಎಂಬ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇನೆ’ ಎಂದರು. 1982ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಮಿರ್ಜಿ ಅವರು ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಕಮಾಂಡರ್ ಆಗಿಯೂ ಅವರು ಕೆಲಸ ಮಾಡಿದ್ದರು. ಗುಪ್ತದಳ ವಿಭಾಗದ ಐಜಿಪಿಯಾಗಿ ಮತ್ತು ರೈಲ್ವೆ ವಿಭಾಗದ ಎಡಿಜಿಪಿ ಆಗಿ ಕೆಲಸ ಮಾಡಿದ ಅನುಭವ ಅವರಿಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.