ಪೊಲೀಸ್ ದೌರ್ಜನ್ಯ: ಪತ್ರಕರ್ತರ ಖಂಡನೆ

7

ಪೊಲೀಸ್ ದೌರ್ಜನ್ಯ: ಪತ್ರಕರ್ತರ ಖಂಡನೆ

Published:
Updated:

ಸವಣೂರು : ಸ್ಥಳೀಯ ಪುರಸಭೆಯ ವಿರುದ್ಧ ಸಾರ್ವಜನಿಕರ ಪ್ರತಿಭಟನೆಯ ಸಂದರ್ಭದಲ್ಲಿ ನಗರದ ಪೊಲೀಸ್ ಠಾಣಾಧಿಕಾರಿಗಳು ದೌರ್ಜನ್ಯ ಹಾಗೂ ಅಹಂಕಾರದ ವರ್ತನೆಯನ್ನು ತೋರಿದ್ದಾರೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆರೋಪಿಸಿದೆ.ಪೊಲೀಸ್ ಅಧಿಕಾರಿಗಳ ಅಹಂಕಾರದ ವರ್ತನೆಯನ್ನು ಖಂಡಿಸಿ ತಹಶೀಲ್ದಾರರಾದ ಡಾ. ನಾಗೇಂದ್ರ ಹೊನ್ನಳ್ಳಿ ಅವರಿಗೆ ಮನವಿ ಅರ್ಪಿಸಿರುವ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಮಾಧ್ಯಮ ಪ್ರತಿನಿಧಿಗಳ ವೃತ್ತಿಗೌರವಕ್ಕೆ ಧಕ್ಕೆ ತಂದಿರುವ ಅಧಿಕಾರಿಗಳ ಮೇಲೆ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.ಇತ್ತೀಚೆಗೆ ಸವಣೂರಿನ 19 ನೇ ವಾರ್ಡಿನ ಸಾರ್ವಜನಿಕರು ಪುರಸಭೆ ಎದುರಿನಲ್ಲಿ ಪ್ರತಿಭಟನೆ ಕೈಗೊಂಡಿದ್ದರು. ಸತತ 5 ಗಂಟೆಗಳ ಕಾಲ ಸಾರ್ವಜನಿಕರು ಪ್ರತಿಭಟನೆ ಧರಣಿ ಕೈಗೊಂಡು ಪುರಸಭೆ ಕಛೇರಿಗೆ ಕೀಲಿ ಹಾಕಿದರೂ, ಇಲಾಖೆಯ ಅಧಿಕಾರಿಗಳಾಗಲಿ, ಸದಸ್ಯರಾಗಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡದೆ ನಾಪತ್ತೆಯಾಗಿದ್ದರು. ಇಂತಹ ಸಂದರ್ಭದಲ್ಲಿ ಘಟನೆಯ ಬಗ್ಗೆ ವರದಿ ಮಾಡುವ ಉದ್ದೆೀಶದೊಂದಿಗೆ ಸವಣೂರಿನ ಎಲ್ಲ ಮಾಧ್ಯಮ ಪ್ರತಿನಿಧಿಗಳು ಪುರಸಭೆಯ ಬಳಿ ತೆರಳಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಹೊಸಮನಿ ಎಂಬುವವರು, ಪ್ರತಿಭಟನಾ ಕಾರರೊಂದಿಗೂ ದೌರ್ಜನ್ಯದ ವರ್ತನೆ ತೋರಲು ಮುಂದಾದರು. ಪರಿಸ್ಥಿತಿಯನ್ನು ತಾಳ್ಮೆಯಿಂದ ತಿಳಿಗೊಳಿಸದೆ, ಏಕಾಏಕಿ ತಮ್ಮ ಅಧಿಕಾರ ದರ್ಪ ತೋರಲು ಮುಂದಾದ ಪೊಲೀಸ್ ಅಧಿಕಾರಿಗಳು, ಪ್ರತಿಭಟನಾ ನಿರತರನ್ನು ಎಳೆದಾಡಲು ಮುಂದಾದರು.ಯಾರದೋ ಚಿತಾವಣೆಗೆ ಒಳಗಾದಂತೆ ಪ್ರತಿಭಟನೆಯನ್ನು ಏಕಾಏಕಿ ನಿಲ್ಲಿಸಲು ಮುಂದಾಗಿದ್ದ ಪೊಲೀಸ್ ಅಧಿಕಾರಿ, ತಮ್ಮ ವ್ಯಾಪ್ತಿ ಮೀರಿದ ವರ್ತನೆ ತೋರಿದರು. ಸ್ವತಃ ಸಮವಸ್ತ್ರ ಧರಿಸದೆ (ಸಿವಿಲ್ ವಸ್ತ್ರ) ಸಾಮಾನ್ಯ ಉಡುಪಿನಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಧಿಕಾರ ದರ್ಪ ತೋರಿದ್ದಾರೆ ಎಂದು ಸಂಘದ ಸದಸ್ಯರು ಮನವಿಯಲ್ಲಿ ಆರೋಪಿಸಿದ್ದಾರೆ.ಈ ಹಂತದಲ್ಲಿ ಘಟನಾ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೂ ಅನವಶ್ಯಕವಾಗಿ ಏರಿಬಂದ ಪೊಲೀಸ್ ಅಧಿಕಾರಿ, ಮಾಧ್ಯಮ ಪ್ರತಿನಿಧಿಗಳ ಕೊರಳ ಪಟ್ಟಿಯನ್ನು ಹಿಡಿದು ಎಳೆದಾಡಿದರು. ಏಕವಚನ ಪ್ರಯೋಗ ಮಾಡಿ ಅಗೌರವಯುತವಾದ ವರ್ತನೆ ತೋರಿದ್ದಾರೆ. ನಮ್ಮ ಪರಿಚಯ ಹೇಳಿಕೊಂಡರೂ ಅದಕ್ಕೆ ಸ್ಪಂದಿಸದೆ ಉದ್ಧಟತನ ತೋರುವ ಮೂಲಕ ನೂರಾರು ಸಾರ್ವಜನಿಕರು ಹಾಗೂ ದಂಡಾಧಿಕಾರಿಗಳ ಸಮ್ಮುಖದಲ್ಲಿ ಅಹಂಕಾರದ ವರ್ತನೆ ಪ್ರದರ್ಶಿಸಿದರು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಪ್ರತಿಭಟನಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಬಗ್ಗೆ ಮಾತ್ರ ಗಮನ ನೀಡದೆ, ಪೊಲೀಸ್ ಅಧಿಕಾರಿಗಳೇ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರ ಮಾಡಿದರು.  ಇಡೀ ಪ್ರಕರಣದ ಉದ್ದಕ್ಕೂ ಅಹಂಕಾರದ ವರ್ತನೆ ತೋರಿದರು. ಘಟನೆಯ ಬಳಿಕವೂ ಮಾಧ್ಯಮದ ಪ್ರತಿನಿಧಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪುನಃ ತಮ್ಮ ಮನಬಂದಂತೆ ಮಾತನಾಡಿದರು. ಹೀಗೆ ಈ ಪ್ರಕರಣವನ್ನು ಇನ್ನಷ್ಟು ತೀವ್ರಗೊಳಿಸುವ ಯತ್ನ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ನಗರದಲ್ಲಿ ಪ್ರತಿನಿತ್ಯ ಸಾವಿರಾರು ಕಾನೂನು ಬಾಹಿರವಾದ ಚಟವಟಿಕೆಗಳು ನಡೆಯುತ್ತಿದ್ದರೂ ಅದನ್ನು ನಿಯಂತ್ರಿಸಲು ಮುಂದಾಗದೆ, ಅಮಾಯಕರ ಮೇಲೆ, ಕರ್ತವ್ಯ ನಿರ್ವಹಣೆಯಲ್ಲಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ತಮ್ಮ ಪೌರುಷ ತೋರಲು ಮುಂದಾಗಿರುವ ಪೊಲೀಸ್ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.ಈ ಮನವಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯಾದ್ಯಂತ ಖಂಡನಾ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry