ಸೋಮವಾರ, ಮೇ 10, 2021
26 °C

ಪೊಲೀಸ್ ವರ್ಗಾವಣೆಗೊಂದು ನೀತಿ

ಎಸ್. ಮರಿಸ್ವಾಮಿ Updated:

ಅಕ್ಷರ ಗಾತ್ರ : | |

ರ್ನಾಟಕ ಪೊಲೀಸ್ ಅಧಿನಿಯಮ 1963ಕ್ಕೆ ರಾಜ್ಯದ ಹೊಸ ಸರ್ಕಾರ ತನ್ನ ಮೊದಲ ಅಧಿವೇಶನದಲ್ಲಿಯೇ ತಿದ್ದುಪಡಿ ತಂದಿದೆ. ಕಾನೂನಿನ ಮಟ್ಟಿಗಾದರೂ ಸಮಂಜಸ ಎಂದುಕೊಂಡಿದ್ದ ಪೊಲೀಸ್ ವರ್ಗಾವಣಾ ನೀತಿಗೆ ಇದರಿಂದ ಹಿನ್ನಡೆಯಾಗಿದೆ. ಒಂದು ವರ್ಷದ ಹಿಂದಷ್ಟೇ ತಿದ್ದುಪಡಿಯಾಗಿದ್ದ ನಿಯಮಗಳಿಗೆ ತರಾತುರಿಯಲ್ಲಿ ಮರು ತಿದ್ದುಪಡಿ ತರಲು ಕಾರಣವೇನು? ಪೊಲೀಸ್ ಇಲಾಖೆಯ ವರ್ಗಾವಣೆಗಳಲ್ಲಿನ ತನ್ನ ಅಧಿಕಾರದ ಹೆಚ್ಚು ಭಾಗವನ್ನು ಕಳೆದುಕೊಂಡ ಸರ್ಕಾರಕ್ಕೆ ಅದನ್ನು ಸಹಿಸಿಕೊಳ್ಳುವುದು ಕಷ್ಟವಾಗಿರಬಹುದು. ಜತೆಗೆ ಹೊಸ ಸರ್ಕಾರದಿಂದ ಪ್ರಯೋಜನ ಪಡೆಯಬಹುದು ಎಂದು ಆಶಿಸಿರುವ ದೊಡ್ಡಗುಂಪಿನ ಒತ್ತಡ ಇರಲಿಕ್ಕೂ ಸಾಕು.1975-1977ರ ತುರ್ತು ಪರಿಸ್ಥಿತಿಯ ಕಾಲದ ಪೊಲೀಸ್ ಅತಿರೇಕಗಳ ಹಿನ್ನೆಲೆಯಲ್ಲಿ ಪೊಲೀಸ್ ಕಾರ್ಯಚಟುವಟಿಕೆಯಲ್ಲಿ ಸಮಗ್ರ ಸುಧಾರಣೆ ತರಲು ಅಂದಿನ ಕೇಂದ್ರ ಸರ್ಕಾರ ನಿರ್ಧರಿಸಿತು. ಅದರ ಫಲವೇ 1977ರಲ್ಲಿ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ಪೊಲೀಸ್ ಕಮಿಷನ್ ಅಥವಾ ಧರ್ಮವೀರ ಪೊಲೀಸ್ ಕಮಿಷನ್. ಇದು 1979ರಲ್ಲಿ ನೀಡಿದ ತನ್ನ ವರದಿಯಲ್ಲಿ, ಪೊಲೀಸ್ ಕ್ಷೇತ್ರಾಧಿಕಾರಿಗಳಿಗೆ ಒಂದು ಸ್ಥಳದಲ್ಲಿ ಕನಿಷ್ಠ ಎರಡು ವರ್ಷಗಳ ಸೇವಾ ಖಾತರಿ  ಇರಬೇಕೆಂದು ಶಿಫಾರಸು ಮಾಡಿತು. ಜೊತೆಗೆ ವರ್ಗಾವಣೆ, ಬಡ್ತಿ ವಿಚಾರಗಳನ್ನು ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿ ಮಂಡಳಿಯ ಸ್ಥಾಪನೆಗೆ ಸಲಹೆ ನೀಡಿತು.ಕೇಂದ್ರ ಸರ್ಕಾರ ಮೊದಲ್ಗೊಂಡು ಯಾವುದೇ ಸರ್ಕಾರ ಪೊಲೀಸ್ ಪಡೆಯಲ್ಲಿ ಸುಧಾರಣೆ ತಂದು ಅಂತಹ ಸೂಕ್ಷ್ಮ ಇಲಾಖೆಯ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳಲಿಚ್ಛಿಸದಿದ್ದಾಗ ಉತ್ತರ ಪ್ರದೇಶದ ನಿವೃತ್ತ ಡಿ.ಜಿ.ಪಿ ಪ್ರಕಾಶ್ ಸಿಂಗ್ ಅವರು ಈ ಶಿಫಾರಸುಗಳ ಜಾರಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಪೊಲೀಸ್ ಸುಧಾರಣೆಯ ಮಹತ್ವವನ್ನು ಅರಿತ ನ್ಯಾಯಾಲಯವು ಕಾಲಾನುಕಾಲದ ಪರಿಶೀಲನೆ ಮತ್ತು ಶಿಫಾರಸುಗಳ ಜಾರಿಯ ಪ್ರಗತಿ ಕೇಳುವುದರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ತಂದಿತು.

ಕರ್ನಾಟಕ ಪೊಲೀಸ್ ಅಧಿನಿಯಮಕ್ಕೆ 2012ರ ತಿದ್ದುಪಡಿ ಮತ್ತು ಪೊಲೀಸ್ ಸಿಬ್ಬಂದಿ ಮಂಡಳಿಯ ಸ್ಥಾಪನೆ ಈ ಒತ್ತಡದ ಫಲ. ಕರ್ನಾಟಕ ಪೊಲೀಸ್ ಅಧಿನಿಯಮಕ್ಕೆ ನಿಯಮ `20 ಬಿ' ಅನ್ನು ಸೇರಿಸುವುದರ ಮೂಲಕ ಸರ್ಕಾರ ಪೊಲೀಸ್ ವರ್ಗಾವಣೆ, ಬಡ್ತಿ ಮುಂತಾದುವುಗಳಲ್ಲಿ ಒಂದು ರೀತಿಯ ನಿಯಮಬದ್ಧತೆ ತರಲು ಇಚ್ಛಿಸಿತ್ತು. ಇದು ಪೊಲೀಸ್ ವರ್ಗಾವಣೆ , ಬಡ್ತಿ ಮುಂತಾದುವುಗಳನ್ನು ನಿರ್ವಹಿಸಲು, ಪೊಲೀಸ್ ಸಿಬ್ಬಂದಿ ಮಂಡಳಿ ಸ್ಥಾಪನೆಗೆ ನಾಂದಿಯಾಯಿತು. ಇಲಾಖೆಯ ಮುಖ್ಯಸ್ಥರಾದ ಡಿ.ಜಿ ಮತ್ತು ಐ.ಜಿ.ಪಿ ಯವರು ಅಧ್ಯಕ್ಷರಾದ ಈ ಮಂಡಳಿಯಲ್ಲಿ ಅವರ ಜತೆಗೆ ಎ.ಡಿ.ಜಿ.ಪಿ ಹಂತಕ್ಕೆ ಕೆಳಗಿನವರಲ್ಲದ ಅತ್ಯಂತ ಹೆಚ್ಚು ಸೇವಾ ಹಿರಿತನವುಳ್ಳ ಮೂವರು ಅಧಿಕಾರಿಗಳು ಸದಸ್ಯರಾಗಿಯೂ ಮತ್ತು ಎ.ಡಿ.ಜಿ.ಪಿ (ಆಡಳಿತ) ಕಾರ್ಯದರ್ಶಿಯಾಗಿಯೂ ಇರಬೇಕು.ಪೊಲೀಸ್ ಉಪ ಅಧೀಕ್ಷಕರು ಮತ್ತು ಅವರಿಗಿಂತ ಕೆಳಹಂತದ ಸಿಬ್ಬಂದಿಯ ವರ್ಗಾವಣೆ ಮತ್ತು ಬಡ್ತಿ ಇವುಗಳನ್ನು ನಿರ್ವಹಿಸುವ ಜವಾಬ್ದಾರಿ ಈ ಮಂಡಳಿಯದಾಗಿತ್ತು. ಇಂತಹ ವರ್ಗಾವಣೆಗಳಲ್ಲಿ ಸರ್ಕಾರ ಬದಲಾವಣೆ ತರಬೇಕಾಗಿದ್ದಲ್ಲಿ ಅದು ಕಾರಣಗಳನ್ನು ನೀಡಬೇಕಿತ್ತು. ಎರಡನೆಯದಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಮೇಲಿನ ಹುದ್ದೆಗಳಿಗೂ ವರ್ಗಾವಣೆ ಮತ್ತು ಬಡ್ತಿಗೆ ಸಂಬಂಧಿಸಿದಂತೆ ಶಿಫಾರಸು ಮಾಡುವ ಹೊಣೆ ಸಹ ಈ ಮಂಡಳಿಗಿತ್ತು ಮತ್ತು ಅಂತಹ ಶಿಫಾರಸನ್ನು ಸರ್ಕಾರ ಸಾಮಾನ್ಯವಾಗಿ ಒಪ್ಪಬೇಕು ಎಂಬ ಸೂಚನೆ ಇತ್ತು.ಮಂಡಳಿಯ ರಚನೆ ಪೊಲೀಸ್ ಕಮಿಷನ್ ಹಾಗೂ ಸುಪ್ರೀಂಕೋರ್ಟ್  ನಿರ್ದೇಶನಕ್ಕೆ ಅನುಗುಣವಾಗಿತ್ತು. ಆದರೆ ಕ್ಷೇತ್ರಾಧಿಕಾರಿಗಳಿಗೆ ಒಂದು ಸ್ಥಳದಲ್ಲಿ ಎರಡು ವರ್ಷದ ಕನಿಷ್ಠ ಸೇವಾವಧಿ ನೀಡಬೇಕು ಎಂಬುದನ್ನು ಮಾತ್ರ ತಿದ್ದುಪಡಿಯಲ್ಲಿ ಒಂದು ವರ್ಷಕ್ಕೆ ಇಳಿಸಲಾಗಿತ್ತು. ಕಾನೂನು ತಿದ್ದುಪಡಿ ತಂದು ಪೊಲೀಸ್ ಸಿಬ್ಬಂದಿ ಮಂಡಳಿ ಸ್ಥಾಪನೆಯಾಗಿದ್ದರೂ ಪೊಲೀಸ್ ವರ್ಗಾವಣೆಯಲ್ಲಿ ಕೈ ಹಾಕುವ ಸರ್ಕಾರದ ಉದ್ದೇಶದಲ್ಲೇನೂ ಬದಲಾವಣೆಯಾಗಿರಲಿಲ್ಲ. ಹೀಗಾಗಿ ಸರ್ಕಾರ ಮತ್ತು ಮಂಡಳಿ ನಡುವಿನ ತಿಕ್ಕಾಟ ಮುಂದುವರೆದಿತ್ತು. ಸರ್ಕಾರ ಸೂಚಿಸಿದ ಕೆಲವರನ್ನು ವರ್ಗಾವಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಹಿಂದಿನ ಗೃಹ ಸಚಿವರೊಬ್ಬರು ನೀಡಿದ ಸಾರ್ವಜನಿಕ ಹೇಳಿಕೆ ಸರ್ಕಾರದ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.ಹೊಸ ಸರ್ಕಾರ ಯಾವ ಚರ್ಚೆಗೂ ಆಸ್ಪದ ಕೊಡದೆ ಹೊಸ ತಿದ್ದುಪಡಿಯನ್ನೇ ತಂದಿದೆ. ಇತ್ತೀಚಿನ ತಿದ್ದುಪಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಮೇಲಿನ ಹುದ್ದೆಗಳನ್ನು ಪೊಲೀಸ್ ಸಿಬ್ಬಂದಿ ಮಂಡಳಿಯ ಕಾರ್ಯಕ್ಷೇತ್ರದಿಂದ ಹೊರಗಿಟ್ಟಿದೆ. ಉಪಪೊಲೀಸ್ ಅಧೀಕ್ಷಕರು ಮತ್ತು ಕೆಳಗಿನ ಹಂತದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಮಂಡಳಿಗೆ ಸದಸ್ಯರನ್ನು ನೇಮಿಸುವಾಗ ಜೇಷ್ಠತಾ ಸೂತ್ರವನ್ನು ಕೈಬಿಡಲಾಗಿದೆ. ಇದರಿಂದ ಸರ್ಕಾರ ವರ್ಗಾವಣೆಯಲ್ಲಿ ಕೈ ಹಾಕುತ್ತದೆ ಎಂದು ಅನ್ನಲಾಗದಿದ್ದರೂ ಅದಕ್ಕೆ ಹೆಚ್ಚು ಆಸ್ಪದವಾಗಿದೆ.ಆಡಳಿತದ ಕಾರ್ಯಕ್ಷಮತೆಯಲ್ಲಿ ವರ್ಗಾವಣೆಯ ಪಾತ್ರ ಮಹತ್ತರವಾದುದು. ವರ್ಗಾವಣೆ ಶಿಕ್ಷೆಯಲ್ಲ ಎಂದು ಸರ್ಕಾರ ಹೇಳಿಕೊಂಡಾಗ ಸಹ ಅಲ್ಲೊಂದಿಲ್ಲೊಂದು ಕಡೆ ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಕ್ಷೇತ್ರಕ್ಕೆ ಹಾಕಿಸಿಕೊಳ್ಳುವ ಪರಿಪಾಠ ಹಿಂದಿನಿಂದ ಇತ್ತಾದರೂ ಇದೊಂದು ದಂಧೆಯಾಗಿ ಮಾರ್ಪಟ್ಟಿದ್ದು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದ. ರಾಜಕಾರಣಿಗಳು ತಮಗೆ ಬೇಕಾದವರನ್ನು ತಮ್ಮ ಕ್ಷೇತ್ರಕ್ಕೆ ಹಾಕಿಸಿಕೊಳ್ಳುವ ಕಾರ್ಯ ದೊಡ್ಡಮಟ್ಟದಲ್ಲಿ ಆಗ ಪ್ರಾರಂಭವಾಯಿತು. ಇದರಿಂದ ತನಗೆ ಬೇಕಾದ, ತಾನು ಹೇಳಿದ್ದನ್ನು ಮಾಡುವ ತಹಶೀಲ್ದಾರ್, ಇನ್‌ಸ್ಪೆಕ್ಟರ್ ಮತ್ತು ಎಂಜಿನಿಯರ್‌ಗಳನ್ನು ಹೊಂದುವ ರಾಜಕಾರಣಿಗಳ ದಬ್ಬಾಳಿಕೆ ಸಂಸ್ಕೃತಿಗೆ ಅನುವುಮಾಡಿಕೊಟ್ಟಂತಾಗುತ್ತದೆ.ರಾಜಕಾರಣಿಗೆ ಪ್ರತಿ ತಿಂಗಳು ಹಣ ನೀಡುವುದರಿಂದ ಹಿಡಿದು, ಅವನ ಮನೆಯ ಸಮಾರಂಭಗಳು ಮುಂತಾದುವನ್ನು ನಿಭಾಯಿಸುವುದು, ಅವರು ಹೇಳಿದಂತೆ ಕೇಸುಗಳನ್ನು ಕೈಬಿಡುವುದು ಹೀಗೆ ಅನೇಕ ರೀತಿಯಲ್ಲಿ ರಾಜಕಾರಣಿಗಳು ಪೊಲೀಸ್ ಠಾಣೆಗಳ ಕೆಲಸದಲ್ಲಿ ಏರುಪೇರು ಮಾಡಿದ್ದಾರೆ. ಕೆಲವು ಕಡೆ ಯಾವುದೇ ಕೇಸು ಠಾಣೆಯಲ್ಲಿ ದಾಖಲಾಗಬೇಕಾದರೆ ಅದು ಮೊದಲು ಶಾಸಕನ ಅನುಮತಿ ಪಡೆದಿರಬೇಕಾದ ಸಂದರ್ಭಗಳೂ ಗಮನಕ್ಕೆ ಬಂದಿರುತ್ತವೆ.ಮತ್ತೊಂದು ಕಡೆ ತಾವೇ ಅಲ್ಲಿಗೆ ತಂದಿರುವ ಅಧಿಕಾರಿಯಾದುದರಿಂದ ರಾಜಕಾರಣಿಗಳು ಅಂತಹ ಅಧಿಕಾರಿಗಳ ದಕ್ಷತೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಚಿಂತಿಸುವುದಿಲ್ಲ. ಹೆಚ್ಚು ವೇಳೆ ಅವರೆಲ್ಲರ ಕುಂದು ಕೊರತೆಗಳನ್ನೂ, ವಿಫಲತೆಗಳನ್ನೂ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಇದು ಇಲಾಖೆಯಲ್ಲಿ ಅದಕ್ಷತೆಯನ್ನು ತಂದಿರುತ್ತದೆ ಮತ್ತು ಠಾಣೆಗಳಲ್ಲಿ ಹೆಚ್ಚು ಲಂಚಕೋರತನಕ್ಕೆ ಎಡೆಮಾಡಿಕೊಟ್ಟಿರುತ್ತದೆ.ಮೂರನೆಯದಾಗಿ ರಾಜಕೀಯ ವರ್ಗಾವಣೆಗಳು ಮೇಲಧಿಕಾರಿಗಳ ಆತ್ಮಗೌರವವನ್ನು ತಗ್ಗಿಸುತ್ತವೆ. ಒಂದು ಲಕ್ಷಕ್ಕೂ ಹೆಚ್ಚು ಸೂಕ್ಷ್ಮ ಸಿಬ್ಬಂದಿಯನ್ನು ಮುನ್ನಡೆಸುವ ಒಬ್ಬ ಡಿ.ಜಿ ಮತ್ತು ಐ.ಜಿ.ಪಿ, ಸರ್ಕಾರ ಸೂಚಿಸುವ ವರ್ಗಾವಣೆಗೆ ದಸ್ಕತ್ತು ಹಾಕುವ ಗುಮಾಸ್ತನಾಗಿ ಬಿಡುತ್ತಾನೆ. ಅವನ ಇತರ ಕೆಲಸಗಳಲ್ಲಿಯೂ ಇದು ತನ್ನ ಪರಿಣಾಮ ಬೀರುತ್ತದೆ. ಅವನು ಹೆಚ್ಚು ವಿಷಯಗಳಲ್ಲಿ ಯಾವುದೇ ನಿಲುವು ತಾಳಲು ಹೆದರುತ್ತಾನೆ.ನಾಲ್ಕನೆಯದಾಗಿ ಸಿಬ್ಬಂದಿಯ ದಕ್ಷತೆ, ಕಾರ್ಯಕ್ಷಮತೆ, ಪ್ರಾಮಾಣಿಕತೆ, ವಿಶೇಷ ಪರಿಣತಿ ಮುಂತಾದುವುಗಳನ್ನು ಸೂಚಿಸುವ ಕಾಲದಿಂದ ಕಾಲಕ್ಕೆ ವಾಸ್ತವಾಂಶದ ಮೇಲೆ ದಾಖಲಾದ ಪೊಲೀಸ್ ವೈಯಕ್ತಿಕ ದಾಖಲೆಗಳು ತಮ್ಮ ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತವೆ. ಆಗ ಇಲಾಖೆಯಲ್ಲಿ ಕತ್ತೆ, ಕುದುರೆ ಎಲ್ಲವೂ ಒಂದೇ ಆಗಿಬಿಡುತ್ತದೆ. ತಮ್ಮ ಸುತ್ತ ತಾವು ಹೇಳಿದುದಕ್ಕೆ ಗೋಣು ಆಡಿಸುತ್ತಾ ಓಡಾಡುವವರು ಆಳುವವರಿಗೆ ತುಂಬಾ ಹಿಡಿಸಬಹುದು.

ಆದರೆ ಸಮಾಜದ ಗತಿ ಏನು? ಆಳುವ ವರ್ಗ ಇದನ್ನು ಯೋಚಿಸಬೇಕು. ತಮ್ಮ ಸದ್ಯದ ಹಿತಾಸಕ್ತಿಯ ಇತಿಮಿತಿಗಳನ್ನು ಮೀರಬೇಕು. ವರ್ಗಾವಣೆ ಮುಂತಾದ ದೈನಂದಿನ ಕರ್ತವ್ಯಗಳನ್ನು ಇಲಾಖಾ ಅಧಿಕಾರಿಗಳಿಗೆ ಬಿಟ್ಟುಕೊಡಬೇಕು. ಇದರಿಂದ ರಾಜಕಾರಣಿಗಳಿಗೆ ಇಲಾಖೆಯ ತಪ್ಪುನೆಪ್ಪುಗಳನ್ನು ಬೊಟ್ಟುಮಾಡಿ ತೋರಿಸುವ ಅಧಿಕಾರ ದೊರೆಯುತ್ತದೆ. ವಾಸ್ತವವಾಗಿ ಇದು ವರ್ಗಾವಣೆಗಳಿಗಿಂತ ಹೆಚ್ಚಿನ ಅಧಿಕಾರ.

(ಲೇಖಕರು ನಿವೃತ್ತ ಪೊಲೀಸ್ ಮಹಾನಿರ್ದೇಶಕರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.