ಪೊಲೀಸ್ ವಶದಲ್ಲಿ ವ್ಯಕ್ತಿ ಸಾವು: ಲಾಕಪ್‌ಡೆತ್ ಶಂಕೆ

ಶುಕ್ರವಾರ, ಜೂಲೈ 19, 2019
28 °C

ಪೊಲೀಸ್ ವಶದಲ್ಲಿ ವ್ಯಕ್ತಿ ಸಾವು: ಲಾಕಪ್‌ಡೆತ್ ಶಂಕೆ

Published:
Updated:

ಬೆಂಗಳೂರು: ಜೇಬುಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ಬಂಧಿಸಿದ್ದ ವ್ಯಕ್ತಿಯೊಬ್ಬ ಠಾಣೆಯಲ್ಲಿ ಅಸ್ವಸ್ಥನಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.ಆರೋಪಿ ಮಹಮ್ಮದ್ ಅಮಿನ್ (30) ಮೃತಪಟ್ಟವನು. ಪೇಂಟರ್ ಆಗಿದ್ದ ಆತ, ತಾಯಿ ಕಾಂಚನಾ ಜತೆ ಹಳೆ ಗುಡ್ಡದಹಳ್ಳಿಯಲ್ಲಿ ವಾಸವಾಗಿದ್ದ. ಅಮಿನ್ ತನ್ನ ಸಂಬಂಧಿ ರಿಜ್ವಾನ್ ಎಂಬಾತನ ಜತೆ ಸೇರಿ ಗಿರಿನಗರದ ಬಳಿ ಶುಕ್ರವಾರ (ಜು.13) ಜೇಬುಗಳವು ಮಾಡುವ ಯತ್ನದಲ್ಲಿದ್ದಾಗ ಆತನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.`ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿದ್ದ ಆರೋಪಿಗಳು ಗಿರಿನಗರ ಬಳಿಯ ಕೆಇಬಿ ಜಂಕ್ಷನ್‌ನಲ್ಲಿ ಮೆಹಬೂಬ್ ಎಂಬುವರ ಪರ್ಸ್ ಕದಿಯಲು ಯತ್ನಿಸಿದ್ದರು. ಆಗ ಮೆಹಬೂಬ್ ಸಾರ್ವಜನಿಕರ ಸಹಾಯದಿಂದ ಆರೋಪಿಗಳನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಮಧ್ಯಾಹ್ನ   ಅಮಿನ್‌ಗೆ ಮೂರ್ಛೆಯ ಲಕ್ಷಣ ಕಾಣಿಸಿ ಕೊಂಡಿತು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಸ್ಥಿತಿ ಗಂಭೀರವಾಗಿದ್ದು, ಜಯದೇವೆ ಆಸ್ಪತ್ರೆಗೆ ವರ್ಗಾಯಿಸುವಂತೆ ಶಿಫಾರಸು ಮಾಡಿದರು.ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಅಮಿನ್ ಸಾವನ್ನಪ್ಪಿದನು~ ಎಂದು ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ `ಪ್ರಜಾವಾಣಿ~ಗೆ ತಿಳಿಸಿದರು.`ಜಯದೇವ ಆಸ್ಪತ್ರೆಯ ವೈದ್ಯರು ಅಮಿನ್ ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ವಾಸ್ತವಾಂಶ ತಿಳಿಯಲಿದೆ. ಅಮಿನ್ ಸಾವಿನಲ್ಲಿ ಪೊಲೀಸ್ ಸಿಬ್ಬಂದಿ ಪಾತ್ರವಿದ್ದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ~ ಎಂದು ಅವರು ಹೇಳಿದರು.`ನನ್ನ ಅಣ್ಣ ರಿಜ್ವಾನ್ ಮತ್ತು ಅಮಿನ್ ಪೇಂಟರ್ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಕೆಲಸ ಮುಗಿಸಿ ಇಬ್ಬರು ಮದ್ಯ ಕುಡಿಯಲು ಹೋಗಿದ್ದರು. ಆಗ ಪೊಲೀಸರು ಅವರಿಬ್ಬರ ಮೇಲೆ ಕಳ್ಳತನದ ಆರೋಪ ಹೊರಿಸಿ ಠಾಣೆಗೆ ಕರೆದುಕೊಂಡು ಹೋದರು. ಇಂದು ಮಧ್ಯಾಹ್ನ ಪೊಲೀಸರು ಕರೆ ಮಾಡಿ ಅಮಿನ್‌ಗೆ ಮೂರ್ಛೆಯ ಲಕ್ಷಣ ಕಾಣಿಸಿಕೊಂಡಿದೆ ಎಂದರು. ಮಾತ್ರೆ ತೆಗೆದುಕೊಂಡು ಬರುವುದಾಗಿ ಹೇಳಿದರೆ ಬೇಡ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದರು. ಆತನ ಕೈ ಕಾಲುಗಳೆಲ್ಲಾ ಊದಿಕೊಂಡಿದ್ದು ಪೊಲೀಸರು ರಾತ್ರಿಪೂರ ಅವನಿಗೆ ಹೊಡೆದಿದ್ದಾರೆ. ಇದೇ ಭಯದಿಂದ ಆತ ಸಾವನ್ನಪಿದ್ದಾನೆ~ ಎಂದು ಅಮಿನ್‌ರ ನಾದಿನಿ ಸುಲ್ತಾನ ಆರೋಪಿಸಿದರು.`ಹನ್ನೊಂದು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದೆವು. ಅವರಿಗೆ ಮೂರ್ಛೆ ರೋಗವಿತ್ತು. ಆದರೆ, ಬೇಗನೆ ಗುಣಮುಖರಾಗುತ್ತಿದ್ದರು. ಸಂಜೆ ನಾಲ್ಕು ಗಂಟೆಗೆ ಅವರ ಪ್ರಾಣ ಹೋಗಿತ್ತು. ಪೊಲೀಸರ ದೌರ್ಜನ್ಯದಿಂದಲೇ ನನ್ನ ಗಂಡ ಸಾವನ್ನಪ್ಪಿದ್ದಾರೆ~ ಎಂದು ಅಮಿನ್ ಪತ್ನಿ ಶಬಾನ ತಿಳಿಸಿದರು.`ಮಗ ಶಬಾನಳನ್ನು ಮದುವೆಯಾಗಿ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿದ್ದ. ಆತನಿಗೆ ಮೂರು ಮಕ್ಕಳಿದ್ದು ಇನ್ನೂ ಅವರಿಗೆ ಯಾರು ದಿಕ್ಕು?~ ಎಂದು ಕಾಂಚನಾ ರೋದಿಸಿದರು.ಹಿಂದಿನ ಲಾಕಪ್ ಡೆತ್ ಪ್ರಕರಣಗಳು


ಠಾಣೆ                             ಮೃತರ ಹೆಸರು                                          ದಿನಾಂಕ

ಹನುಮಂತನಗರ                   ವಿ.ಭಾಸ್ಕರ                                    2008 ಡಿಸೆಂಬರ್ 28

ಫ್ರೇಜರ್‌ಟೌನ್                        ಅರುಣ್                                        2009 ಜನವರಿ 16

ಆರ್.ಟಿ.ನಗರ                    ಮಂಜುನಾಥ್                                          2009 ಜುಲೈ 11

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry