ಬುಧವಾರ, ಮೇ 12, 2021
24 °C
ಇಲಾಖಾ ಪರಿಶೀಲನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮತ

ಪೊಲೀಸ್ ವ್ಯವಸ್ಥೆ ಭ್ರಷ್ಟಾಚಾರದಿಂದ ಮುಕ್ತವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್ ವ್ಯವಸ್ಥೆ ಭ್ರಷ್ಟಾಚಾರದಿಂದ ಮುಕ್ತವಾಗಲಿ

ಬೆಂಗಳೂರು: `ಅಕ್ರಮ, ಅನೈತಿಕ ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ವ್ಯವಸ್ಥೆ ಭ್ರಷ್ಟಾಚಾರದಿಂದ ಮುಕ್ತಗೊಂಡು ಬಲಗೊಳ್ಳಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಗುರುವಾರ ನಡೆದ ಪೊಲೀಸ್ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.`ಆಯಾ ಠಾಣಾ ವ್ಯಾಪ್ತಿಯ ಪೊಲೀಸರಿಗೆ ಗೊತ್ತಿಲ್ಲದೇ ಯಾವ ಅಕ್ರಮ, ಅನೈತಿ ಚಟುವಟಿಕೆಗಳೂ ನಡೆಯುವುದಿಲ್ಲ. ಅನಧಿಕೃತವಾಗಿ ವಿಡಿಯೊ ಗೇಮ್ ಪಾರ್ಲರ್, ಲೈವ್‌ಬ್ಯಾಂಡ್, ಹಾಗೂ ಡ್ಯಾನ್ಸ್ ಬಾರ್‌ಗಳು ನಡೆಯುತ್ತಿರುವುದು ಆಯಾ ವ್ಯಾಪ್ತಿಯ ಪೊಲೀಸರಿಗೆ ಗೊತ್ತಿರುತ್ತದೆ. ಪೊಲೀಸರು ಭ್ರಷ್ಟರಾಗಿ ಇಂತಹ ಚಟುವಟಿಕೆಗಳು ನಡೆಯಲು ಅವಕಾಶ ಮಾಡಿಕೊಟ್ಟರೆ ಅಂತಹ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳು ಬೆಳಕಿಗೆ ಬಂದರೆ ಆಯಾ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು' ಎಂದು ಅವರು ಎಚ್ಚರಿಕೆ ನೀಡಿದರು.`ಠಾಣೆಗೆ ಬರುವ ಪ್ರತಿಯೊಬ್ಬರ ಜತೆಗೂ ಪೊಲೀಸರು ಮಾನವೀಯತೆಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕರೊಂದಿಗೆ ಗೌರವದಿಂದ ಮಾತನಾಡಿದರೆ ಪೊಲೀಸರ ಗಂಟೇನೂ ಹೋಗುವುದಿಲ್ಲ. ಈ ಬಗ್ಗೆ ಪೊಲೀಸರು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದರು.`ಠಾಣೆಗೆ ಬರುವ ಬಹಳಷ್ಟು ಪ್ರಕರಣಗಳಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳುವುದಿಲ್ಲ. ಇದು ತಪ್ಪಬೇಕು. ಯಾರ ಪ್ರಭಾವಕ್ಕೂ ಒಳಗಾಗದೇ ದೂರು ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಸ್ಥಳೀಯ ಶಾಸಕರ ಪ್ರಭಾವಕ್ಕೂ ಪೊಲೀಸರು ಒಳಗಾಗಬಾರದು. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಪೊಲೀಸ್ ಇಲಾಖೆಯಲ್ಲೂ ಭ್ರಷ್ಟ ಅಧಿಕಾರಿಗಳಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು' ಎಂದು ಸೂಚನೆ ನೀಡಿದರು.`ರೌಡಿ ಚಟುವಟಿಕೆಗಳಿಗೆ ಕಟ್ಟುನಿಟ್ಟಾಗಿ ಕಡಿವಾಣ ಬೀಳಬೇಕು. ರಿಯಲ್ ಎಸ್ಟೇಲ್ ವ್ಯವಹಾರದಲ್ಲಿ ಪೊಲೀಸರೂ ಭಾಗಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಕಾನೂನು ಕಾಯಬೇಕಾದ ಪೊಲೀಸರು ತಾವೇ ಅಕ್ರಮಗಳಲ್ಲಿ ಭಾಗಿಯಾದರೆ ಇನ್ನು ಕಾನೂನು ಸುವ್ಯವಸ್ಥೆ ಬಲಗೊಳ್ಳಲು ಹೇಗೆ ಸಾಧ್ಯ' ಎಂದು ಅವರು ಪ್ರಶ್ನಿಸಿದರು.`ನಕ್ಸಲರು ಶರಣಾದರೆ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸಲಾಗುವುದು. ನಕ್ಸಲರು ಹಿಂಸಾಚಾರಕ್ಕೆ ಮುಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ನಕ್ಸಲ್ ಚಟುವಟಿಕೆಗಳ ನಿಯಂತ್ರಣಕ್ಕಾಗಿ ನಕ್ಸಲ್ ನಿಗ್ರಹ ಪಡೆಯನ್ನು ಬಲಪಡಿಸಲಾಗುವುದು' ಎಂದರು.`ಕಾರಾಗೃಹಗಳ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಕಾರಾಗೃಹದೊಳಗಿಂದಲೇ ರೌಡಿಗಳು ತಮ್ಮ ವ್ಯವಹಾರಗಳನ್ನು ನಡೆಸುವುದು ನನ್ನ ಅನುಭವಕ್ಕೇ ಬಂದಿದೆ. 2005ರಲ್ಲಿ ಗುಲ್ಬರ್ಗದ ಕಾರಾಗೃಹದಿಂದ ರೌಡಿಯೊಬ್ಬ ನನಗೆ ಬೆದರಿಕೆ ಕರೆ ಮಾಡಿದ್ದ. ಕಾರಾಗೃಹದೊಳಕ್ಕೆ ಮೊಬೈಲ್‌ಗಳು ಹೇಗೆ ಹೋಗುತ್ತವೆ. ರೌಡಿಗಳೊಂದಿಗೆ ಸೇರಿಕೊಂಡು ಕಾರಾಗೃಹದ ಅಧಿಕಾರಿಗಳು ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡುತ್ತಾ ಹೋದರೆ ಅವರನ್ನು ಕಾರಾಗೃಹದಲ್ಲೇಕೆ ಬಂಧಿಸಿಡಬೇಕು' ಎಂದು ಕಾರಾಗೃಹಗಳ ಇಲಾಖೆಯ ಎಡಿಜಿಪಿ ಕೆ.ವಿ.ಗಗನ್‌ದೀಪ್ ಅವರನ್ನು ತರಾಟೆಗೆ ತೆಗೆದುಕೊಂಡರು.`ಕಾರಾಗೃಹಗಳ ಸ್ಥಿತಿಗತಿ ಕುರಿತು ಸಾರ್ವಜನಿಕ ಸಲಹಾ ಸಮಿತಿ ನೀಡಿರುವ ವರದಿಯನ್ನು ನೀವು ನೋಡಿದ್ದೀರಾ' ಎಂದು ಗಗನ್‌ದೀಪ್ ಅವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ, `ಆ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಬಗ್ಗೆ ಕ್ರಮ ಕೈಗೊಳ್ಳಿ' ಎಂದು ಸೂಚನೆ ನೀಡಿದರು.ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, `ಪೊಲೀಸ್ ಇಲಾಖೆಯ ಸಿಬ್ಬಂದಿಗಾಗಿ ರಕ್ಷಣಾ ಇಲಾಖೆಯ ಮಾದರಿಯಲ್ಲಿ ತೆರಿಗೆ ರಿಯಾಯಿತಿಯುಳ್ಳ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಇಲಾಖೆಯ ಸಿಬ್ಬಂದಿಗೆ ವಸತಿ, ವಿಮೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಬದ್ಧವಾಗಿದೆ. ನಗರದ ಸಂಚಾರ ಸಮಸ್ಯೆಯನ್ನು ತಗ್ಗಿಸಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ನಗರದ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸಲು ವರದಿ ನೀಡಬೇಕು' ಎಂದರು.`ಬಹುತೇಕ ಠಾಣೆಗಳಲ್ಲಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಸಿದ್ಧಪಡಿಸುವುದರಿಂದ ಹಿಡಿದು ಆರೋಪಪಟ್ಟಿ ತಯಾರಿಸುವ ಸಂಪೂರ್ಣ ಜವಾಬ್ದಾರಿಯನ್ನು ಇನ್‌ಸ್ಪೆಕ್ಟರ್‌ಗಳು ರೈಟರ್‌ಗಳಿಗೆ ವಹಿಸಿರುತ್ತಾರೆ. ಇದು ತಪ್ಪಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಆಗಾಗ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು' ಎಂದು ಸೂಚಿಸಿದರು.ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ ಸೇರಿದಂತೆ ರಾಜ್ಯದ ಎಲ್ಲ ವಲಯಗಳ ಎಡಿಜಿಪಿ, ಕಮಿಷನರ್, ಡಿಸಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಗುಪ್ತಚರ ದಳಕ್ಕೆ ಪ್ರತ್ಯೇಕ ನೇಮಕಾತಿ

`ಗುಪ್ತಚರ ದಳಕ್ಕೆ ಪ್ರತ್ಯೇಕವಾಗಿ ನೇಮಕಾತಿ ಮಾಡಿಕೊಂಡು, ಆ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುವ ಚಿಂತನೆ ಸರ್ಕಾರದ ಮುಂದಿದೆ. ಮಹಾರಾಷ್ಟ್ರದಲ್ಲಿ ಈ ರೀತಿಯ ವ್ಯವಸ್ಥೆಯಿದೆ. ರಾಜ್ಯದಲ್ಲಿ ಗುಪ್ತಚರ ದಳ ಸಾಕಷ್ಟು ದುರ್ಬಲವಾಗಿದ್ದು, ಅದನ್ನು ಬಲಗೊಳಿಸಲು ಪ್ರಯತ್ನಿಸಲಾಗುವುದು' ಎಂದು ಸಿದ್ದರಾಮಯ್ಯ ತಿಳಿಸಿದರು.

`ಪೊಲೀಸ್ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 8,051 ಹುದ್ದೆಗಳ ನೇಮಕಕ್ಕೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ನೀಡಲಾಗಿದೆ. ಉಳಿದ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು. ಆದಿವಾಸಿ ಜನಾಂಗದ ಯುವಕರು ಹೆಚ್ಚು ಶಕ್ತಿಶಾಲಿಗಳಾಗಿರುತ್ತಾರೆ. ಆದರೆ, ಎತ್ತರ ಕಡಿಮೆ ಇರುವ ಕಾರಣಕ್ಕೆ ಅವರು ಪೊಲೀಸ್ ಸೇವೆಗೆ ಸೇರಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಆದಿವಾಸಿ ಜನಾಂಗದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಎತ್ತರದ ವಿನಾಯ್ತಿ ನೀಡಲು ಚಿಂತನೆ ನಡೆಸಲಾಗುವುದು' ಎಂದು ಅವರು ತಿಳಿಸಿದರು.ಉಪ್ಪಾರಪೇಟೆ ಠಾಣೆಯಲ್ಲೇನಿದೆ?

`ಬಹಳಷ್ಟು ಪೊಲೀಸ್ ಅಧಿಕಾರಿಗಳು ಉಪ್ಪಾರಪೇಟೆ ಠಾಣೆಗೆ ವರ್ಗಾಯಿಸುವಂತೆ ಕೋರಿಕೆ ಸಲ್ಲಿಸುತ್ತಾರೆ. ಹಿಂದೆ ನನಗೂ ಅನೇಕರು ಈ ಬಗ್ಗೆ ಮನವಿ ಸಲ್ಲಿಸಿದ್ದರು. ಉಪ್ಪಾರಪೇಟೆ ಠಾಣೆಯಲ್ಲಿ ಅಂಥದ್ದೇನಿದೆ' ಎಂದು ಸಿದ್ದರಾಮಯ್ಯ ಸಭೆಯಲ್ಲಿ ಪ್ರಶ್ನಿಸಿದರು.

`ಎಲ್ಲ ಸಿಬ್ಬಂದಿಯೂ ನಗರ ಪ್ರದೇಶದಲ್ಲೇ ಕೆಲಸ ಮಾಡಬೇಕೆಂದು ಬಯಸಿದರೆ ಸಾಧ್ಯವಿಲ್ಲ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಲು ಪೊಲೀಸರು ಸಿದ್ಧರಾಗಿರಬೇಕು. ಉಪ್ಪಾರಪೇಟೆ ಠಾಣೆಯಲ್ಲಿರುವ ಸೌಲಭ್ಯಗಳು ರಾಜ್ಯದ ಗ್ರಾಮೀಣ ಭಾಗದ ಠಾಣೆಗಳಲ್ಲೂ ಇವೆ. ಹೀಗಾಗಿ ಗ್ರಾಮಾಂತರ ಪ್ರದೇಶದ ಠಾಣೆಗಳಲ್ಲಿ ಸೇವೆ ಸಲ್ಲಿಸಲು ಸಿಬ್ಬಂದಿ ಹಿಂದೇಟು ಹಾಕಬಾರದು' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.