ಪೊಲೀಸ್ ವ್ಯವಸ್ಥೆ ಸದೃಢ: ಗೃಹ ಸಚಿವ ಅಶೋಕ ಸಭೆ

7

ಪೊಲೀಸ್ ವ್ಯವಸ್ಥೆ ಸದೃಢ: ಗೃಹ ಸಚಿವ ಅಶೋಕ ಸಭೆ

Published:
Updated:

ಬೆಂಗಳೂರು: ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಬೆಂಗಳೂರು ನಗರಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡುವ ಸಂಬಂಧ ಗೃಹ ಸಚಿವರೂ ಆದ ಉಪ ಮುಖ್ಯಮಂತ್ರಿ ಆರ್.ಅಶೋಕ ಅವರು ಶನಿವಾರ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದರು.ಪೊಲೀಸ್ ಮಹಾನಿರ್ದೇಶಕ ಲಾಲ್ ರೊಕುಮಾ ಪಚಾವೊ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಉಮೇಶ್, ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿಪಿನ್ ಗೋಪಾಲಕೃಷ್ಣ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಮೊದಲು ವಿಧಾನಸೌಧದಲ್ಲಿ ನಂತರ ಸಚಿವರ ನಿವಾಸದಲ್ಲಿ ಸಭೆ ನಡೆಯಿತು.ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿದೆ. ಈಗಿನ ವ್ಯವಸ್ಥೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟ ಎಂಬ ಕಾರಣಕ್ಕೆ ವಿವಿಧ ವಿಭಾಗಗಳಿಗೆ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ಒಬ್ಬರೇ ಡಿಸಿಪಿ ಇದ್ದು, ಆ ಸಂಖ್ಯೆಯನ್ನು ಕನಿಷ್ಠ ಮೂರಕ್ಕೆ ಹೆಚ್ಚಿಸಬೇಕು. ನಗರವನ್ನು ಮೂರು ವಿಭಾಗ ಮಾಡಿ, ಅಪರಾಧ ಪ್ರಕರಣಗಳ ಪತ್ತೆಗೆ ಜವಾಬ್ದಾರಿ ನೀಡುವುದು ಇದರ ಹಿಂದಿನ ಉದ್ದೇಶ ಎಂದು ಸಚಿವ ಅಶೋಕ ಅವರು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.ಕಾನೂನು ಸುವ್ಯವಸ್ಥೆಗೆ ಒಬ್ಬರು ಹೆಚ್ಚುವರಿ ಪೊಲೀಸ್ ಕಮಿಷನರ್ ಇದ್ದಾರೆ. ಅವರ ಜತೆ ಮತ್ತೊಬ್ಬರನ್ನು ನೇಮಿಸುವುದರಿಂದ ಅನುಕೂಲವೋ ಅಥವಾ ಡಿಸಿಪಿ ದರ್ಜೆಯ ಇಬ್ಬರು ಅಧಿಕಾರಿಗಳನ್ನು ನಿಯೋಜಿವುದು ಹೆಚ್ಚು ಅನುಕೂಲವೋ ಎಂಬುದರ ಬಗ್ಗೆ ಚರ್ಚೆಯಾಗಿದೆ. ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದ್ದು, ಈಗಿನ ಇಬ್ಬರು ಡಿಸಿಪಿಗಳ ಜತೆಗೆ ಮತ್ತಿಬ್ಬರನ್ನು ನೇಮಿಸುವ ಅಗತ್ಯ ಇದೆ ಎಂದು ಅವರು ಹೇಳಿದರು. ಅಧಿಕಾರಿಗಳ ಜತೆಗಿನ ಸಭೆ ಬಳಿಕ ಸರ್ಕಾರದ ಮಟ್ಟದಲ್ಲಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry