ಶನಿವಾರ, ಮೇ 15, 2021
28 °C

ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಉಚಿತ ಆರೋಗ್ಯ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಯಾವುದೇ ಹಬ್ಬ ಹರಿದಿನಗಳನ್ನು ಲೆಕ್ಕಿಸದೇ ಶ್ರಮಿಸುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯ. ಈ ಕಾರ್ಯಕ್ಕಾಗಿ ಅವರೆಲ್ಲರೂ ಅಭಿನಂದನಾರ್ಹರು ಎಂದು ಜಿಲ್ಲಾಧಿಕಾರಿ ಎಂ.ವಿ ಸಾವಿತ್ರಿ ಅವರು ಹೇಳಿದರು.ಜಿಲ್ಲಾ ಪೊಲೀಸ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪೊಲೀಸರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳದೇ ಇರಲು ಅವರ ಮತ್ತು ಅವರ ಕುಟುಂಬ ವರ್ಗದವರಿಗೆ  ಜಿಲ್ಲಾಡಳಿತದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಪೊಲೀಸ್ ಧ್ವಜ ದಿನಾಚರಣೆಯ ಧ್ವಜಗಳನ್ನು ಎಲ್ಲ ಇಲಾಖೆಗಳಿಗೆ ಕಳುಹಿಸಿ ಅದರಿಂದ ಬರುವ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.ನಿವೃತ್ತ ಪೊಲೀಸ್ ಅಧಿಕಾರಿ ರಾಯ್ಕರ ಮಾತನಾಡಿ, ತಮ್ಮ ಜೀವನದ ಮಹದಾಸೆಯೇ ಶಿಸ್ತು ಬದ್ಧ ಜೀವನಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದಾಗಿತ್ತು ಎಂದು ಹೇಳಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿಷ್ಠೆಯಿಂದೆ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ ಬಿಸ್ನಳ್ಳಿ ಮಾತನಾಡಿ, ಪೊಲೀಸ್ ಸಿಬ್ಬಂದಿ ದಿನದ 24ಗಂಟೆಯೂ ಕಾರ್ಯನಿರ್ವಹಿಸಿ ಸಾರ್ವಜನಿಕ ರಕ್ಷಣೆಗೆ ನಿಂತಿರುತ್ತಾರೆ. ಅವರ ಕಲ್ಯಾಣ ಬಯಸಿ ಸಹಕಾರ ನೀಡುವುದು ಸಮಾಜದ ಕರ್ತವ್ಯವಾಗಿದೆ. ಪೊಲೀಸ್ ಸಿಬ್ಬಂದಿ ಅಪಘಾತಕ್ಕೀಡಾದಾಗ  ಅವರ ವಿಮಾ ಹಣವನ್ನು 3 ಲಕ್ಷದಿಂದ 10 ಲಕ್ಷಕ್ಕೆ ಇಲಾಖೆ ಹೆಚ್ಚಿಸಿದೆ ಎಂದು ವಿವರಿಸಿದರು.2011-12ನೇ ಸಾಲಿನಲ್ಲಿ 18 ನಿವೃತ್ತ ಪೊಲೀಸ್ ಅಧಿಕಾರಿಗಳ ವೈದ್ಯಕೀಯ ಚಿಕಿತ್ಸೆಗೆ 78 ಸಾವಿರ, ಪೊಲೀಸ್ ಕುಟುಂಬ ವರ್ಗದ ವಿದ್ಯಾಭ್ಯಾಸಕ್ಕೆ 90,850, ಇತರ ಕಲ್ಯಾಣ ಕಾರ್ಯಕ್ಕೆ 69,400 ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ 2011ನೇ ಸಾಲಿನ ರಾಷ್ಟ್ರಪತಿ ಪದಕ ಪಡೆದ ಸದರ ಬಜಾರ ಪೊಲೀಸ್ ಠಾಣೆ ಸಿಪಿಐ ಎಂ.ಪಾಷಾ,2011ರ ಮುಖ್ಯಮಂತ್ರಿ ಪದಕ ಪಡೆದ ಮಾನ್ವಿಯ ಸಿಪಿಐ ಶ್ರೀಧರ ದೊಡ್ಡಿ, ಪಿಐಡಿಎಸ್‌ಬಿ ಘಟಕದ ಜಿ.,ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮನೋಜ ಜೈನ್, ಪೊಲೀಸ್ ಅಧಿಕಾರಿಗಳಾದ ಸೂರ್ಯವಂಶಿ,  ಡಿಎಸ್ಪಿ ಸಿ.ಕೆ ಬಾಬಾ, ನಗರಸಭೆ ಸದಸ್ಯರಾದ ಶಿವಮೂರ್ತಿ, ಕೆ.ಶಾಂತಪ್ಪ ಹಾಗೂ ನವಾಬ್‌ಚೌದರಿ, ನಜೀರ್ ಪಂಜಾಬಿ ಮತ್ತಿತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.