ಪೋರ್ಚುಗೀಸ್ ಸಚಿವರ ಭಾಷಣ ಓದಿದ ಕೃಷ್ಣ: ವಿಶ್ವಸಂಸ್ಥೆಯಲ್ಲಿ ನಗೆಪಾಟಲು

7

ಪೋರ್ಚುಗೀಸ್ ಸಚಿವರ ಭಾಷಣ ಓದಿದ ಕೃಷ್ಣ: ವಿಶ್ವಸಂಸ್ಥೆಯಲ್ಲಿ ನಗೆಪಾಟಲು

Published:
Updated:
ಪೋರ್ಚುಗೀಸ್ ಸಚಿವರ ಭಾಷಣ ಓದಿದ ಕೃಷ್ಣ: ವಿಶ್ವಸಂಸ್ಥೆಯಲ್ಲಿ ನಗೆಪಾಟಲು

ವಿಶ್ವಸಂಸ್ಥೆ (ಪಿಟಿಐ): ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ. ಕೃಷ್ಣ ಅವರು ಕಣ್ತಪ್ಪಿನಿಂದ ಪೋರ್ಚುಗಲ್ ವಿದೇಶಾಂಗ ಸಚಿವರ ಭಾಷಣದ ಸ್ವಲ್ಪ ಭಾಗ ಓದಿದ ಪ್ರಮಾದ ನಡೆದಿದೆ.

ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಭದ್ರತೆ ಮತ್ತು ಅಭಿವೃದ್ಧಿ ವಿಚಾರದ ಮೇಲೆ ನಡೆದ ಚರ್ಚೆಯ ಸಂದರ್ಭದಲ್ಲಿ ಕೃಷ್ಣ ಅವರು ಮೂರು ನಿಮಿಷಗಳ ಕಾಲ ಪೋರ್ಚುಗೀಸ್ ವಿದೇಶಾಂಗ ಸಚಿವ ಲೂಯಿಸ್ ಅಮಾಡೊ ಅವರ ಭಾಷಣ ಓದಿದರು. ತಕ್ಷಣ ತಪ್ಪನ್ನು ಅರಿತುಕೊಂಡ ವಿಶ್ವಸಂಸ್ಥೆಯಲ್ಲಿರುವ ಭಾರತದ ಪ್ರತಿನಿಧಿ ಹರ್ದೀಪ್ ಸಿಂಗ್ ಪುರಿ ಅವರು ತಪ್ಪನ್ನು ಸಚಿವರ ಗಮನಕ್ಕೆ ತಂದು ಆಗಬಹುದಾಗಿದ್ದ ಮತ್ತಷ್ಟು ದೊಡ್ಡ ಪ್ರಮಾದವನ್ನು ತಪ್ಪಿಸಿದರು.

ಕೃಷ್ಣ ಅವರ ಭಾಷಣಕ್ಕೆ ಮೊದಲು ಪೋರ್ಚುಗಲ್ ಸಚಿವರು ಮಾತನಾಡಿದ್ದರು. ಸಾಮಾನ್ಯವಾಗಿ ಎಲ್ಲರ ಭಾಷಣದ ಮೊದಲ ಭಾಗದಲ್ಲಿ ವಿಶ್ವಸಂಸ್ಥೆ, ಅಭಿವೃದ್ಧಿ, ಭದ್ರತೆ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ವಿಚಾರಗಳೇ ಇರುತ್ತವೆ. ಹೀಗಾಗಿ ತಾವು ಓದುತ್ತಿರುವುದು ಮತ್ತೊಬ್ಬರ ಭಾಷಣ ಎಂಬುದು ಕೃಷ್ಣ ಅವರಿಗೆ ಗೊತ್ತಾಗಲಿಲ್ಲ.

ಆದರೂ ಒಂದು ದೇಶದ ಭಾಷಣಕ್ಕೂ, ಮತ್ತೊಂದು ದೇಶದ ಭಾಷಣಕ್ಕೂ ವ್ಯತ್ಯಾಸ ಇದ್ದೇ ಇರುತ್ತದೆ. ಮೊದಲ ಕೆಲವು ಸಾಲುಗಳಲ್ಲೇ ಅದು ಸ್ಟಷ್ಟವಾಗಿತ್ತು ಕೂಡ. ಅದನ್ನು ಓದುತ್ತಿರುವಾಗಲೂ ಸಚಿವರಿಗೆ ತಮ್ಮ ತಪ್ಪಿನ ಅರಿವು ಆಗಿರಲಿಲ್ಲ. ಆ ಸಾಲು ಹೀಗೆ ಸಾಗಿತ್ತು...

‘ಪೋರ್ಚುಗೀಸ್ ಭಾಷೆ ಮಾತನಾಡುವ ಎರಡು ದೇಶಗಳಾದ (ಸಿಪಿಎಲ್‌ಪಿ) ಬ್ರೆಜಿಲ್ ಮತ್ತು ಪೋರ್ಚುಗಲ್‌ಗಳು ಇಲ್ಲಿ ಜತೆಯಾಗಿರುವ ಕಾಕತಾಳೀಯ ಪ್ರಸಂಗವೂ ನಡೆದಿರುವುದಕ್ಕೆ ವೈಯಕ್ತಿಕವಾಗಿ ನನಗೆ ಅತೀವ ತೃಪ್ತಿ ಇದೆ...’ ಎಂದು ಅವರು ಓದಿ ಮುಗಿಸಿದ್ದರು.

ಸದ್ಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಬ್ರೆಜಿಲ್ ಇದೆ. ಹೀಗಾಗಿ ಈ ವಾಕ್ಯದಲ್ಲಿ ಸಚಿವ ಕೃಷ್ಣ ಅವರಿಗೆ ಅಂತಹ ವ್ಯತ್ಯಾಸ ಕಾಣಿಸಲಿಲ್ಲವೋ ಏನೋ. ಅವರು ತಮ್ಮ ಭಾಷಣವನ್ನು ಮುಂದುವರಿಸಿ...’ ವಿಶ್ವಸಂಸ್ಥೆಯ ಆಶಯಕ್ಕೆ ತಕ್ಕಂತೆ ಐರೋಪ್ಯ ಸಮುದಾಯವೂ ಸ್ಪಂದಿಸುತ್ತಿದೆ...’ ಎಂದು ಓದುತ್ತ ಸಾಗಿದ್ದರು. ಈ ಹಂತದಲ್ಲಿ ಪುರಿ ಅವರು ಮಧ್ಯಪ್ರವೇಶಿಸಿ ಭಾಷಣಕ್ಕೆ ತಡೆ ಒಡ್ಡಿದರು. ಆವಾಗಲೇ ಮೂರು ನಿಮಿಷ ಭಾಷಣ ಓದಿ ಆಗಿತ್ತು.

‘ಕಣ್ತಪ್ಪಿನಿಂದಾಗಿ ಬೇರೊಬ್ಬರ ಭಾಷಣ ನಿಮ್ಮ ಕೈಗೆ ಸಿಕ್ಕಿದೆ, ಇಲ್ಲಿದೆ ನಿಮ್ಮ ಭಾಷಣದ ಪ್ರತಿ, ನೀವೀಗ ಮೊದಲಿನಿಂದ ಭಾಷಣ ಆರಂಭಿಸಬಹುದು’ ಎಂದು ಪುರಿ ಅವರು ತಿಳಿಸಿದ ಬಳಿಕ ಎಸ್.ಎ.ಕೃಷ್ಣ ಅವರು ಮತ್ತೆ ಆರಂಭದಿಂದ ತಮ್ಮ ಭಾಷಣ ಓದಲಾರಂಭಿಸಿದರು.

ಭದ್ರತಾ ಮಂಡಳಿಯ ಸುಧಾರಣೆಯಲ್ಲಿ ಭಾರತದ ನಿಲುವುಗಳನ್ನು ತಿಳಿಸುವ ಸಲುವಾಗಿ ಕೃಷ್ಣ ಅವರು ಎರಡು ದಿನಗಳ ಭೇಟಿಗಾಗಿ ನ್ಯೂಯಾರ್ಕ್‌ಗೆ ಬಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry