ಪೋಲಾಗುತ್ತಿರುವ ಕೃಷಿ ನೀರು

7

ಪೋಲಾಗುತ್ತಿರುವ ಕೃಷಿ ನೀರು

Published:
Updated:
ಪೋಲಾಗುತ್ತಿರುವ ಕೃಷಿ ನೀರು

ಲಿಂಗಸುಗೂರ: ನಾರಾಯಣಪುರ ಬಲದಂಡೆ ನಾಲೆ ವ್ಯಾಪ್ತಿಯಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಉಲ್ಬಣಿಸುತ್ತಲೆ ಇರುತ್ತವೆ. ಕೊನೆಯ ಭಾಗದ ರೈತರಿಗೆ ನೀರು ಸಮಪರ್ಕವಾಗಿ ತಲುಪುತ್ತಿಲ್ಲ. ನೀರು ಸಂಗ್ರಹಣೆ ಸಮಸ್ಯೆ ಮಧ್ಯೆ ವಾರಾಬಂದಿ ಪದ್ಧತಿಯಿಂದ ರೈತರ ಬೆಳೆ ಒಣಗುತ್ತಿವೆ.ಈ ಎಲ್ಲ ಸಮಸ್ಯೆ ಮಧ್ಯೆ 6(ಬಿ) ವಿತರಣಾ ನಾಲೆಯ ಬಲ ಕಾಲುವೆಯ ಸೈಫನ್‌ನಲ್ಲಿ ತೊಂದರೆ ಕಾಣಿಸಿಕೊಂಡು ವ್ಯರ್ಥ ನೀರು ಪೋಲಾಗುತ್ತಿದ್ದರು ಕೂಡ ಯಾವೊಬ್ಬ ಅಧಿಕಾರಿಗಳು ಕಾಳಜಿ ವಹಿಸದ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾರಾಯಣಪುರ ಬಲದಂಡೆ ನಾಲೆ 29ನೇ ಕಿ.ಮೀ.ನ 6(ಬಿ) ವಿತರಣಾ ನಾಲೆ ಬಲಭಾಗದ ನಾಲೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ ಎಂಬ ಆರೋಪಗಳು ನಿರ್ಮಾಣ ಹಂತದಲ್ಲಿಯೆ ಜರುಗಿದವು. ರೈತರ ವಿರೋಧ ಲೆಕ್ಕಿಸದೆ ಭಾರಿ ಪ್ರಮಾಣದ ಇಳಿಜಾರು ಪ್ರದೇಶದಲ್ಲಿ ಎರಡು ಎತ್ತರದ ಪ್ರದೇಶಗಳ ಮಧ್ಯೆ ಎರಡು ಬದಿಗಳಲ್ಲಿ ಟ್ಯಾಂಕ್ ನಿರ್ಮಿಸಿ, ಭೂಮಿಯಲ್ಲಿ ಪೈಪಲೈನ್ ಹಾಕಿ ಸೈಫನ್ ಮಾದರಿ ನಾಲೆ ನಿರ್ಮಿಸಿರುವುದು ಕೇವಲ 6ತಿಂಗಳಲ್ಲಿಯೆ ರೈತರ ಜಮೀನಿಗೆ ನೀರು ಹರಿಸುವಲ್ಲಿ ವಿಫಲವಾಗಿರುವುದು ವ್ಯರ್ಥ ನೀರು ಪೋಲಾಗಲು ಕಾರಣವಾಗಿದೆ ಎಂದು ಹನುಮಂತ ಪೂಜಾರಿ ದೂರಿದ್ದಾರೆ.ಸೈಫನ್ ಮುಂಭಾಗದಲ್ಲಿ ಅಂದಾಜು 5ಸಾವಿರ ಎಕರೆ ಜಮೀನು ನೀರಾವರಿಗೆ ಒಳಪಡುತ್ತದೆ. ಆದರೆ, ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಲಕ್ಷಾಂತರ ಹಣ ಖರ್ಚು ಮಾಡಿ ಅವೈಜ್ಞಾನಿಕ ಪೈಪಲೈನ್ ಅಳವಡಿಕೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ನಾಲ್ಕು ದಿನಗಳಿಂದ ಸೈಫನ್‌ನಲ್ಲಿ ತೊಂದರೆ ಕಾಣಿಸಿಕೊಂಡು ನೀರು ಹರಿಯದೆ, ಟ್ಯಾಂಕ್‌ನ ಒಂದು ಭಾಗದಲ್ಲಿ ನೀರು ಹರಿದು ಹಳ್ಳ ಸೇರುತ್ತಿದೆ. ವಾರಬಂದಿ ಮಾಡಿ ನೀರು ಹರಿಸುವ ಅಧಿಕಾರಿಗಳು ವ್ಯರ್ಥ ಪೋಲಾಗುವ ನೀರಿನ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಪೀರಸಾಬ, ಅಹ್ಮದಸಾಬ, ಅಮರೇಶ ಬೇಸರ ವ್ಯಕ್ತಪಡಿಸಿದರು.ಕಳೆದ ತಿಂಗಳು ಈ ಪ್ರದೇಶದ ಕೆಳಭಾಗದ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ದುಬಾರಿ ಬೆಲೆ ತೆತ್ತು ಶೇಂಗಾ ಬಿತ್ತನೆ ಮಾಡಿಕೊಂಡಿದ್ದೇವೆ. ನಾಲ್ಕು ದಿನಗಳಿಂದ ಸೈಫನ್ ಮುಂಭಾಗದ ರೈತರಿಗೆ ನೀರು ಹರಿಯುತ್ತಿಲ್ಲ. ತೊಂದರೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು ಸ್ಪಂದಿಸುತ್ತಿಲ್ಲ.ನಾಲ್ಕಾರು ದಿನಗಳಲ್ಲಿ ದುರಸ್ತಿ ಮಾಡದೆ ಹೋದರೆ ಆತ್ಮಹತ್ಯೆಯೊಂದ ನಮಗೆ ದಾರಿ. ಬರಗಾಲದ ಕರಿನೆರಳಲ್ಲಿ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಅಲ್ಪಸ್ವಲ್ಪ ಬೆಳೆ ಕನಸು ಕಮರುತ್ತಿದೆ. ಅಧಿಕಾರಿಗಳು ಭೇಟಿ ನೀಡಿ ನ್ಯಾಯ ಕೊಡದೆ ಹೋದರೆ ಬೀದಿಗಳಿದು ಹೋರಾಟ ಮಾಡುವುದಾಗಿ ಮುರಿಗೆಯ್ಯಸ್ವಾಮಿ, ಹುಸೇನಸಾಬ, ಅಹ್ಮದಖಾನ, ಅಮೀರಬಾಷ ಎಚ್ಚರಿಕೆ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry