ಪೋಲಿಯೊ ಲಸಿಕೆ ಹಾಕಿಸಲು ಸಲಹೆ

7

ಪೋಲಿಯೊ ಲಸಿಕೆ ಹಾಕಿಸಲು ಸಲಹೆ

Published:
Updated:

ಶಿವಮೊಗ್ಗ: ಜಿಲ್ಲೆಯಲ್ಲಿನ ಐದು ವರ್ಷಗಳ ಒಳಗಿನ ಮಕ್ಕಳಿಗೆ ಭಾನುವಾರ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನ ನಡೆಯಿತು.ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಬೆಳಿಗ್ಗೆ 8ಗಂಟೆಯಿಂದಲೇ ಆರಂಭವಾದ ಅಭಿಯಾನಕ್ಕೆ ಟಿಪ್ಪು ನಗರದ ಉರ್ದು ಶಾಲೆಯಲ್ಲಿ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಪೋಲಿಯೊ ಮುಕ್ತ ದೇಶವನ್ನಾಗಿ ಮಾಡುವ ಸದುದ್ದೇಶದಿಂದ ನಡೆಸಲಾಗುತ್ತಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಸಿಬ್ಬಂದಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಬೇಕು. ಅಲ್ಲದೇ, ಪೋಷಕರೂ ಇದಕ್ಕೆ ಸ್ಪಂದಿಸಬೇಕು. ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಸಲಹೆ ಮಾಡಿದರು.ಶೇ 90ರಷ್ಟು ಲಸಿಕೆ: ಜಿಲ್ಲೆಯಲ್ಲಿ ಒಟ್ಟು 1,64,934 ಐದು ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.ಇದಕ್ಕಾಗಿ 825 ಲಸಿಕಾ ಬೂತ್‌ಗಳನ್ನು ತೆರೆಯಲಾಗಿದ್ದು, ಇದರಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 197 ಬೂತ್‌ಗಳಿವೆ. ಸಂಚಾರಿ ತಂಡಗಳು 65, ಸಾರ್ವಜನಿಕ ಸ್ಥಳಗಳಲ್ಲಿ 53 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.ಒಟ್ಟಾರೆ ಒಂದೇ ದಿನದಲ್ಲಿ ಅಂದಾಜು ಶೇ 90ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚನ್ನಬಸಪ್ಪ ಹೇಳಿದರು.ಇನ್ನೂ ಮೂರು ದಿನ ಮನೆ ಮನೆಗೆ ತೆರಳಿ ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ದಿನದ 24ಗಂಟೆಯೂ ಲಸಿಕೆ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಅನುಷ್ಠಾನ ಕಾರ್ಯಕ್ರಮದ ಉಪಾಧ್ಯಕ್ಷ ಡಾ.ಪಿ.ನಾರಾಯಣ್, ರೋಟರಿ ಸಂಸ್ಥೆ ಪದಾಧಿಕಾರಿಗಳು, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry