ಬುಧವಾರ, ಏಪ್ರಿಲ್ 21, 2021
24 °C

ಪೋಲ್‌ವಾಲ್ಟ್‌ನಲ್ಲಿ ಇಸಿನ್‌ಬಯೆವಾಗೆ ನಿರಾಸೆ: ಜೆನಿಫರ್, ಕಿರನಿ ಜೇಮ್ಸಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಪೋಲ್‌ವಾಲ್ಟ್‌ನಲ್ಲಿ ಸತತ ಮೂರು ಒಲಿಂಪಿಕ್ ಚಿನ್ನ ಗೆಲ್ಲಬೇಕೆಂಬ ಕನಸಿನಲ್ಲಿದ್ದ ರಷ್ಯಾದ ಎಲೆನಾ ಇಸಿನ್‌ಬಯೆವಾ ನಿರಾಸೆ ಅನುಭವಿಸಿದ್ದಾರೆ. ಲಂಡನ್ ಕೂಟದಲ್ಲಿ ಅವರು ಕಂಚು ಗೆಲ್ಲಲಷ್ಟೇ ಯಶಸ್ವಿಯಾದರು.

ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮಹಿಳೆಯರ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ ಅಮೆರಿಕದ ಜೆನಿಫರ್ ಸುರ್ ಚಿನ್ನ ಗೆದ್ದು ಅಚ್ಚರಿಗೆ ಕಾರಣರಾದರು. ಅವರು 4.75 ಮೀ. ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. ಕ್ಯೂಬಾದ ಯರಿಸ್ಲೆ ಸಿಲ್ವ ಬೆಳ್ಳಿ ತಮ್ಮದಾಗಿಸಿಕೊಂಡರು.

ಯರಿಸ್ಲೆ ಕೂಡಾ 4.75 ಮೀ. ಎತ್ತರ ಜಿಗಿದಿದ್ದರು. ಆದರೆ ಮೊದಲ ಪ್ರಯತ್ನವನ್ನು (4.45 ಮೀ.) ದಾಟುವ ಸಂದರ್ಭ ಅವರು ಹೆಚ್ಚುವರಿ ಅವಕಾಶಗಳನ್ನು ತೆಗೆದುಕೊಂಡಿದ್ದರು. ಇದರಿಂದ ಚಿನ್ನ ಜೆನಿಫರ್‌ಗೆ ಒಲಿಯಿತು. 4.70 ಮೀ. ಎತ್ತರ ಜಿಗಿದ ಇಸಿನ್‌ಬಯೆವಾ ಮೂರನೇ ಸ್ಥಾನ ಪಡೆದರು.

ರಷ್ಯಾದ ಸ್ಪರ್ಧಿ ಅಥೆನ್ಸ್ ಹಾಗೂ ಬೀಜಿಂಗ್‌ನಲ್ಲಿ ಬಂಗಾರ ಜಯಿಸಿದ್ದರು. ಪೋಲ್‌ವಾಲ್ಟ್‌ನಲ್ಲಿ ವಿಶ್ವದಾಖಲೆ (5.06 ಮೀ) ಕೂಡಾ ಇಸಿನ್‌ಬಯೆವಾ ಹೆಸರಿನಲ್ಲಿದೆ. ಆದರೆ ಮಂಗಳವಾರ ಅವರಿಗೆ ನೈಜ ಸಾಮರ್ಥ್ಯ ತೋರಲು ಆಗಲಿಲ್ಲ. ಬೀಜಿಂಗ್‌ನಲ್ಲಿ ಬೆಳ್ಳಿ ಜಯಿಸಿದ್ದ ಜೆನಿಫರ್ ಈ ಬಾರಿ ಅಗ್ರಸ್ಥಾನ ಪಡೆಯುವಲ್ಲಿ ಯಶ ಕಂಡರು.

ಕಿರನಿಗೆ ಬಂಗಾರ: ಪುರುಷರ 400 ಮೀ. ಓಟದಲ್ಲಿ ಗ್ರೆನಾಡದ ಕಿರನಿ ಜೇಮ್ಸ ಬಂಗಾರ ಜಯಿಸಿದರು. 19ರ ಹರೆಯದ ಕಿರನಿ 43.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅಮೆರಿಕದ ಹೊರಗಿನ ಅಥ್ಲೀಟ್ ಒಬ್ಬ ಒಲಿಂಪಿಕ್ಸ್‌ನಲ್ಲಿ 44 ಸೆಕೆಂಡ್‌ಗಳ ಒಳಗಾಗಿ ಸ್ಪರ್ಧೆ ಕೊನೆಗೊಳಿಸಿದ್ದು ಇದೇ ಮೊದಲು.

ಕಿರನಿಗೆ ಇತರ ಸ್ಪರ್ಧಿಗಳಿಂದ ತಕ್ಕ ಪೈಪೋಟಿ ಎದುರಾಗಲೇ ಇಲ್ಲ. ಡೊಮಿನಿಕನ್ ರಿಪಬ್ಲಿಕ್‌ನ ಲುಗುಲಿನ್ ಸಂಟೋಸ್ (44.46 ಸೆ.) ಬೆಳ್ಳಿ ಗೆದ್ದರೆ, ಟ್ರಿನಿಡ್ಯಾಡ್ ಮತ್ತು ಟೊಬ್ಯಾಗೊದ ಲಲೊಂಡೆ ಗೋರ್ಡನ್ (44.52) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಗ್ರೆನಾಡಕ್ಕೆ ದೊರೆತ ಮೊದಲ ಚಿನ್ನ ಇದಾಗಿದೆ. ಈ ಕಾರಣ ಕಿರನಿ ಅವರ ಸಾಧನೆ ಈ ಪುಟ್ಟ ದೇಶದಲ್ಲಿ ಸಂಭ್ರಮದ ಅಲೆ ಎಬ್ಬಿಸಿದೆ. ಕಳೆದ ವರ್ಷ ಡೇಗುವಿನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಕಿರನಿ ಸುದ್ದಿಯಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.