ಶುಕ್ರವಾರ, ಫೆಬ್ರವರಿ 26, 2021
19 °C
ಬೆಂಗಳೂರಿನಿಂದ ಅಪಹರಿಸಲಾಗಿದ್ದ ಬಾಲಕಿ ಆಂಧ್ರದಲ್ಲಿ ಪತ್ತೆ

ಪೋಷಕರ ಮಡಿಲು ಸೇರಿದ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋಷಕರ ಮಡಿಲು ಸೇರಿದ ಬಾಲಕಿ

ಬೆಂಗಳೂರು: ನಗರದ ದೊಡ್ಡ ಬಾಣಸವಾಡಿಯಿಂದ ಅಪಹರಣಗೊಂಡಿದ್ದ ಬಾಲಕಿ ನಿಖಿತಾ (9) ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿ.ಕೋಟಾ ನಾರಾಯಣನಗರದಲ್ಲಿ ಭಾನುವಾರ ಸಂಜೆ ಪತ್ತೆಯಾಗಿದ್ದು, ಬಾಲಕಿಯನ್ನು ರಕ್ಷಿಸಿದ ಸ್ಥಳೀಯರು ಸೋಮವಾರ ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.ನಾರಾಯಣನಗರದ ಸಾಯಿಬಾಬಾ ಮಂದಿರ ರಸ್ತೆಯ ಬಳಿ ಅಳುತ್ತಾ ನಿಂತಿದ್ದ ಬಾಲಕಿ ನಿಖಿತಾಳನ್ನು ಕಂಡ ಸ್ಥಳೀಯ ಕಾರು ಚಾಲಕರಾದ ಶಂಕರ್ ಮತ್ತು ಪರಂಧಾಮ ಎಂಬುವರು ಆಕೆಯನ್ನು ವಿಚಾರಿಸಿದ್ದಾರೆ. `ತಂದೆಯ ಜತೆ ಬೆಂಗಳೂರಿನಿಂದ ಬಂದಿದ್ದೇನೆ.ಇಲ್ಲೇ ನಿಂತಿರುವಂತೆ ಹೇಳಿ ಹೋದ ತಂದೆ ಇನ್ನೂ ಬಂದಿಲ್ಲ' ಎಂದು ನಿಖಿತಾ ಹೇಳಿದ್ದಾಳೆ. ಅದೇ ವೇಳೆಗೆ ಅಲ್ಲಿಗೆ ಬಂದ ವ್ಯಕ್ತಿ ತನ್ನನ್ನು ಪ್ರವೀಣ್‌ಕುಮಾರ್ ಎಂದು ಪರಿಚಯಿಸಿಕೊಂಡು, ಬಾಲಕಿಯ ತಂದೆ ಎಂದು ಹೇಳಿಕೊಂಡಿದ್ದಾನೆ. `ಮಗಳ ಜತೆ ಬೆಂಗಳೂರಿನಿಂದ ಬಂದಿದ್ದು, ಹಣ ಹಾಗೂ ಮೊಬೈಲ್ ಕಳವಾಗಿದೆ. ಬೆಂಗಳೂರಿಗೆ ಹಿಂದಿರುಗಲು ಹಣವಿಲ್ಲ ಎಂದು ಪ್ರವೀಣ್ ಹೇಳಿಕೊಂಡ.ಆತನ ವರ್ತನೆ ಬಗ್ಗೆ ಅನುಮಾನ ಬಂತು. ಆದ ಕಾರಣ ಆತನಿಗೆ ಥಳಿಸಿ ವಿಚಾರಿಸಿದೆವು. ಆಗ ಆತ ನನ್ನ ಮೊಬೈಲ್‌ನಿಂದ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ. ಕರೆ ಸ್ವೀಕರಿಸಿದ ಮಹಿಳೆ ತಾನು ಬಾಲಕಿಯ ತಾಯಿ ಎಂದು ಹೇಳಿದಳು. ಅಲ್ಲದೇ, ಮಗಳನ್ನು ಪತಿಯ ಜತೆ ಕಳುಹಿಸಿಕೊಡುವಂತೆ ತಿಳಿಸಿದಳು. ಆಕೆಯ ಮಾತಿನ ಮೇಲೂ ನಂಬಿಕೆ ಬಾರದಿದ್ದರಿಂದ ಬಾಲಕಿ ಹಾಗೂ ಪ್ರವೀಣ್ ಜತೆ ಕಾರಿನಲ್ಲಿ ಬೆಂಗಳೂರಿಗೆ ಹೊರಟೆವು' ಎಂದು ಬಾಲಕಿಯನ್ನು ರಕ್ಷಿಸಿದ ಶಂಕರ್ `ಪ್ರಜಾವಾಣಿ'ಗೆ ತಿಳಿಸಿದರು.`ಕಾರು ಕೋಲಾರ ಜಿಲ್ಲೆಯ ನರಸಾಪುರದ ಬಳಿ ಬರುತ್ತಿದ್ದಂತೆ ಪ್ರವೀಣ್, ಬಹಿರ್ದೆಸೆಗೆ ಹೋಗಬೇಕೆಂದು ಹೇಳಿದ. ಕಾರಿನಿಂದ ಇಳಿದು ಪೊದೆಯ ಮರೆಗೆ ಹೋದ ಆತ ಹತ್ತು ನಿಮಿಷವಾದರೂ ವಾಪಸ್ ಬರಲಿಲ್ಲ. ನಂತರ ಪೊದೆಯ ಬಳಿ ಹೋಗಿ ನೋಡಿದಾಗ ಆತ ಪರಾರಿಯಾಗಿರುವುದು ಗೊತ್ತಾಯಿತು.

ಬಳಿಕ ನಿಖಿತಾಳನ್ನು ವಿಚಾರಿಸಿದಾಗ, ಪ್ರವೀಣ್ ತನ್ನ ತಂದೆಯಲ್ಲ. ಈ ಸತ್ಯ ಸಂಗತಿಯನ್ನು ಹೇಳಿದರೆ ಕೊಲ್ಲುತ್ತೇನೆ ಎಂದು ಆತ ಬೆದರಿಸಿದ್ದ ಎಂದು ಹೇಳಿದಳು. ನಂತರ ನಡೆದ ನಿಜ ಸಂಗತಿಯನ್ನು ವಿವರಿಸಿದ ಆಕೆ, ಕೆ.ಆರ್.ಪುರಕ್ಕೆ ಬರುತ್ತಿದ್ದಂತೆ ಮನೆಯ ವಿಳಾಸ ತಿಳಿಸಿದಳು. ಬಳಿಕ ಆಕೆಯನ್ನು ಪೋಷಕರಿಗೆ ಒಪ್ಪಿಸಲಾಯಿತು' ಎಂದು ಅವರು ವಿವರಿಸಿದರು.`ಶನಿವಾರ ಸಂಜೆ ಮನೆಯ ಬಳಿ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ ವ್ಯಕ್ತಿ, ತಾಯಿಗೆ ಸೀರೆ ಕೊಡಿಸುವುದಾಗಿ ಹೇಳಿ ನನ್ನನ್ನು ಕರೆದುಕೊಂಡು ಹೋದ. ನನ್ನನ್ನು ಬೆದರಿಸಿದ ಆತ, ಯಾರಾದರೂ ಕೇಳಿದರೆ ತಂದೆಯ ಜತೆಗೆ ಬಂದಿರುವುದಾಗಿ ಹೇಳುವಂತೆ ಸೂಚಿಸಿದ. ನಂತರ ನನ್ನನ್ನು ಬಸ್‌ನಲ್ಲಿ ಕರೆದುಕೊಂಡು ಹೋದ' ಎಂದು ನಿಖಿತಾ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಚಾಕೊಲೇಟ್ ತರಲು ಶನಿವಾರ (ಜುಲೈ 6) ಸಂಜೆ ಮನೆಯ ಸಮೀಪದ ಅಂಗಡಿಗೆ ಹೋಗಿದ್ದ ನಿಖಿತಾ ವಾಪಸ್ ಬಂದಿರಲಿಲ್ಲ. ಈ ಸಂಬಂಧ ಆಕೆಯ ಪೋಷಕರು, `ಮಗಳು ಕಾಣೆಯಾಗಿದ್ದಾಳೆ' ಎಂದು ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೊಬೈಲ್ ಕರೆಯ ಸುಳಿವು

ಪ್ರಕರಣ ಸಂಬಂಧ `ಪ್ರಜಾವಾಣಿ' ಜತೆ ಮಾತನಾಡಿದ ಕೆ.ಆರ್.ಪುರ ಉಪ ವಿಭಾಗದ ಎಸಿಪಿ ಡಾ.ನಾರಾಯಣಸ್ವಾಮಿ, `ಬಾಲಕಿಯನ್ನು ಅಪಹರಿಸಿದ್ದ ವ್ಯಕ್ತಿಯ ಪೂರ್ವಾಪರ ಗೊತ್ತಾಗಿಲ್ಲ. ಆತನ ಹೆಸರು ಪ್ರವೀಣ್ ಎಂಬ ಬಗ್ಗೆಯೂ ಅನುಮಾನವಿದೆ. ಆತ ಯಾವ ಉದ್ದೇಶಕ್ಕಾಗಿ ಬಾಲಕಿಯನ್ನು ಅಪಹರಿಸಿದ್ದ ಎಂಬುದು ತನಿಖೆ ನಂತರವಷ್ಟೇ ಗೊತ್ತಾಗಲಿದೆ.

ಆ ವ್ಯಕ್ತಿ ಶಂಕರ್ ಅವರ ಮೊಬೈಲ್‌ನಿಂದ ಬೆಂಗಳೂರಿನ ಮಹಿಳೆಯೊಬ್ಬರ ಮೊಬೈಲ್‌ಗೆ ಮಾಡಿರುವ ಕರೆಯ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಆ ಮೊಬೈಲ್ ಸಂಖ್ಯೆ ಪತ್ತೆಯಾಗಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುತ್ತೇವೆ' ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.