ಪೋಸ್ಕೊ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

7

ಪೋಸ್ಕೊ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ಗದಗ: ಜಿಲ್ಲೆಯ ಹಳ್ಳಿಗುಡಿಯಲ್ಲಿ ಪೋಸ್ಕೊ ಸೇರಿದಂತೆ ವಿವಿಧ ಉದ್ದಿಮೆಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಅಭಿವೃದ್ಧಿ ವೇದಿಕೆ ನೇತೃತ್ವದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಮಂದಿ ಪಹಣಿ ಪತ್ರದೊಂದಿಗೆ ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಗಾಂಧಿ ವೃತ್ತದಿಂದ ಹಳ್ಳಿಗುಡಿ, ಹರ್ಲಾಪುರ, ಜಂತ್ಲಿ- ಶಿರೂರ ಗ್ರಾಮದ ನೂರಾರು ಮಂದಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, `ವಿ ವಾಂಟ್ ಪೋಸ್ಕೊ, ಕೈಗಾರಿಕೆ ಸ್ಥಾಪನೆಗಾಗಿ ರಕ್ತವನ್ನು ಚೆಲ್ಲುತ್ತವೆ~ ಎಂಬ ಘೋಷಣೆಗಳನ್ನು ಮೊಳಗಿಸಿದರು.ಸರ್ಕಾರ ಘೋಷಣೆ ಮಾಡಿದಂತೆ ಹಳ್ಳಿಗುಡಿ ವ್ಯಾಪ್ತಿಯಲ್ಲಿ ಪೋಸ್ಕೊ, ಹರ್ಲಾಪುರ ವ್ಯಾಪ್ತಿಯಲ್ಲಿ ಕಲಾವತಿ ಆಧುನಿಕ ಮೆಟಾಲಿಕ್, ಜಂತ್ಲಿ-ಶಿರೂರಿನಲ್ಲಿ ಎಸ್.ಆರ್.ಗ್ರುಪ್ ಇಂಡಸ್ಟ್ರೀಸ್ ಹಾಗೂ ಮೇವುಂಡಿ ವ್ಯಾಪ್ತಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಕಾರ್ಖನೆ ಸ್ಥಾಪನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಈಗಾಗಲೇ ಸರ್ಕಾರ ಈ ಭಾಗದಲ್ಲಿ ಉದ್ದಿಮೆ ಸ್ಥಾಪನೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದದಲ್ಲಿ ಮಾಡಿಕೊಂಡ ಒಡಂಬಡಿಕೆ ಪ್ರಕಾರ ನೋಟಿಫೈ ಮಾಡಿದ್ದು, ಆಯಾ ಪ್ರದೇಶದ ಶೇಕಡಾ 80ರಷ್ಟು ರೈತರು ಜಮೀನು ನೀಡಲು ಸಿದ್ದ ಎಂದು ಪಹಣಿ ಪತ್ರವನ್ನು ಪ್ರದರ್ಶಿಸಿದರು.ಉದ್ದಿಮೆಗಳ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 2.50 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಪೋಸ್ಕೊ ಸ್ಥಾಪನೆಯಿಂದ 40 ಸಾವಿರ ಕೋಟಿ ಬಂಡವಾಳ ಹರಿದು ಬರಲಿದೆ. ಕೂಡಲೇ ಸರ್ಕಾರ ಉದ್ದಿಮೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.

 

2-3 ವಾರದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ.ರುದ್ರೇಗೌಡ ಅವರಿಗೆ ರೈತರು ಮನವಿ ಪತ್ರದ ಜತೆ ಪಹಣಿ ಪತ್ರವನ್ನು ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಅಭಿವೃದ್ಧಿ ವೇದಿಕೆ ಸಂಚಾಲಕ ವೆಂಕಟೇಶ ಕುಲಕರ್ಣಿ, ಹಿರಿಯವಡ್ಡಟಹಳ್ಳಿ ಶಿವಾಚಾರ್ಯ ಸ್ವಾಮೀಜಿ, ಮುಖಂಡರಾದ ಸೋಮಣ್ಣ, ಯಲ್ಲಪ್ಪ, ಬಿ.ಜಿ. ಪುರದ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry