ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಸರ್ಕಾರ ಮುಂದಾಗಲಿ

7
ಚಿತ್ರದುರ್ಗ: ನಗರಸಭೆ ಅಧ್ಯಕ್ಷ ಬಿ.ಕಾಂತರಾಜು ಒತ್ತಾಯ

ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಸರ್ಕಾರ ಮುಂದಾಗಲಿ

Published:
Updated:

ಚಿತ್ರದುರ್ಗ: ನಗರಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕ ಕುಟುಂಬಗಳು, ವಸತಿ, ಶಿಕ್ಷಣ, ವೈದ್ಯಕೀಯ ಸೇವೆಯಂಥ ಮೂಲಸೌಲಭ್ಯಗಳಿಂದ ವಂಚಿತರಾಗಿವೆ. ಸರ್ಕಾರ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಹೆಚ್ಚು ಗಮನ

ನೀಡಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಗರಸಭೆ ಹಾಗೂ ಜಿಲ್ಲಾ ಪೌರಕಾರ್ಮಿಕರ ಸಂಘದ ಸಹಯೋಗದಲ್ಲಿ ನಡೆದ 'ಪೌರಕಾರ್ಮಿಕರ ದಿನಾಚರಣೆ'  ಉದ್ಘಾಟಿಸಿ ಅವರು ಮಾತನಾಡಿದರು.ಮಾಧ್ಯಮಗಳ ಸಮೀಕ್ಷೆ ಪ್ರಕಾರ 30 ವರ್ಷಗಳಲ್ಲಿ ಹಳ್ಳಿಗಳಿಂದ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಜನಸಂಖ್ಯೆಗೆ ತಕ್ಕಂತೆ ನಗರಗಳನ್ನು ಅಣಿಗೊಳಿಸಲು ಪೌರಕಾರ್ಮಿಕರ ಅಗತ್ಯವಿದೆ. ಆದರೆ, ಎರಡು ದಶಕಗಳಿಂದ ಪೌರಕಾರ್ಮಿಕರ ನೇಮಕ ಸ್ಥಗಿತಗೊಂಡಿದೆ. ಶೀಘ್ರದಲ್ಲೇ ಸರ್ಕಾರ ಪೌರಕಾರ್ಮಿಕರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.'ನಿಯಮದಂತೆ 700 ಜನರಿಗೆ ಒಬ್ಬ ಪೌರಕಾರ್ಮಿಕ ಇರಬೇಕು. ಸದ್ಯ ನಗರದ ಜನಸಂಖ್ಯೆ 2 ಲಕ್ಷ ದಾಟುತ್ತಿದೆ.  ಹಾಗಾಗಿ ನಗರಕ್ಕೆ ಕನಿಷ್ಠ ಒಂದೂವರೆ ಸಾವಿರದಷ್ಟು ಪೌರಕಾರ್ಮಿಕರ ಅಗತ್ಯವಿದೆ. ಆದರೆ, ಅಷ್ಟು ಮಂದಿ ನಗರಸಭೆಯಲ್ಲಿ ಇಲ್ಲ. ನಗರಗಳಲ್ಲಿ ಪೌರಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆ' ಇದೆ

ಎಂದರು.ವೈಜ್ಞಾನಿಕ ಕಸ ವಿಲೇವಾರಿ ಆಗುತ್ತಿಲ್ಲ. ವಿದೇಶಗಳಲ್ಲಿರುವಂತೆ ಕಸ ಬೇರ್ಪಡಿಸುವ ವಿಧಾನ ಇಲ್ಲೂ ಅಳವಡಿಕೆಯಾಗಬೇಕು. ಇದಕ್ಕಾಗಿ ಪೌರಕಾರ್ಮಿಕರಿಗೂ ತರಬೇತಿ ನೀಡಬೇಕು. ಕಸ ವಿಲೇವಾರಿ ಕೇವಲ `ಸರ್ಕಾರದ ಜವಾಬ್ದಾರಿಯಲ್ಲ. ಇದಕ್ಕೆ ನಾಗರಿಕರೂ ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.ನಿವೃತ್ತ ಪೌರನೌಕರರ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಮಾತನಾಡಿ, ‘ಸರ್ಕಾರದ ಸೌಲಭ್ಯಗಳನ್ನು ಪೌರಕಾರ್ಮಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡಿಸಿ’ ಎಂದು ಸಲಹೆ ನೀಡಿದರು. 50 ವರ್ಷಗಳ ಹಿಂದೆಯೇ ಸರ್ಕಾರ ಪೌರಕಾರ್ಮಿಕರ ದಿನಾಚರಣೆಗಾಗಿ ಒಂದು ದಿನ ರಜೆ ಘೋಷಿಸಬೇಕಿತ್ತು. 2011ರಲ್ಲಿ ಬಾಲಚಂದ್ರ ಜಾರಕಿಹೊಳಿ ಪೌರಾಡಳಿತ ಸಚಿವರಾಗಿದ್ದಾಗ ಈ ದಿನಚಾರಣೆ ವಿಚಾರ ಅಂತಿಮಗೊಂಡಿತ್ತು.  ಕನಿಷ್ಠ ಈಗಲಾದರೂ ಅದು ಈಡೇರಿದೆ. ಅದಕ್ಕಾಗಿ ಸರ್ಕಾರವನ್ನು ಅಭಿನಂದಿಸುವುದಾಗಿ ತಿಳಿಸಿದರು.‘ಸರ್ಕಾರ ಸೌಲಭ್ಯಗಳನ್ನು ನೀಡುತ್ತದೆ. ಆದರೆ, ಆದೇಶಗಳನ್ನು ಸರಿಯಾಗಿ ತಲುಪಿಸುವುದಿಲ್ಲ. ಇವತ್ತಿನ ಪೌರನೌಕರರ ದಿನಾಚರಣೆಯ ಆದೇಶ ಕೂಡ ಎಲ್ಲ ಜಿಲ್ಲೆಗಳಿಗೂ ತಲುಪಿಲ್ಲ. ಈಗಷ್ಟೇ ಮಧುಗಿರಿಯಿಂದ ಪೌರನೌಕರರ ಸಂಘದವರು ಕರೆ ಮಾಡಿ, ದಿನಾಚರಣೆ ಬಗ್ಗೆ ಖಚಿತಪಡಿಸಿಕೊಂಡರು’ ಎಂದು ಹೇಳಿದರು.ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ ಮಾತನಾಡಿ, ‘ವೇತನ ವಿತರಣೆಯಲ್ಲಿ ಸರ್ಕಾರ ನಗರಸಭೆ ಸಿಬ್ಬಂದಿ ಮತ್ತು ಪೌರಕಾರ್ಮಿಕರ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಎಲ್ಲ ಪೌರನೌಕರರಿಗೆ ತಿಂಗಳ 1ನೇ ತಾರೀಖು ಸಂಬಳ ನೀಡುವಂತಾಗಬೇಕು’ ಎಂದು ಆಗ್ರಹಿಸಿದರು. ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ರಜೆ

ಹಾಗೂ ಭತ್ಯೆಗಳನ್ನು ನೀಡಬೇಕು. ಪೌರಕಾರ್ಮಿಕರು ಕುಡಿತ ಬಿಟ್ಟು, ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.ನಗರಸಭೆ ಅಧ್ಯಕ್ಷ ಬಿ.ಕಾಂತರಾಜು ಮಾತನಾಡಿ, ‘ಪೌರನೌಕರರಿಗೆ ಮೂಲಸೌಲಭ್ಯದ ಬಗ್ಗೆ ಎಲ್ಲ ಗಣ್ಯರೂ ಮಾತನಾಡಿದ್ದಾರೆ. ಅವರ ಬೇಡಿಕೆಯನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.‘ಪೌರಕಾರ್ಮಿಕರ ಉತ್ತಮ ಕಾರ್ಯವೈಖರಿಯೇ, ನಗರಸಭೆಯ ಅಧ್ಯಕ್ಷರ ಯಶಸ್ವಿ ಆಡಳಿತದ ಶಕ್ತಿ.  ಉತ್ತಮವಾಗಿ ಕೆಲಸ ಮಾಡಿ, ಒಳ್ಳೆಯ ಆಡಳಿತ ನೀಡೋಣ’ ಎಂದು ಪೌರಕಾರ್ಮಿಕರಲ್ಲಿ ಮನವಿ ಮಾಡಿದರು.ನಗರಸಭೆ ಉಪಾಧ್ಯಕ್ಷ ಖಾದರ್ ಖಾನ್, ವಾರ್ಡ್ ಸದಸ್ಯ ಪ್ರಕಾಶ್ ಗರಡಿ, ಪೌರನೌಕರರ ಸಂಘದ ಶಾಖಾ ಅಧ್ಯಕ್ಷ ರಾಮಚಂದ್ರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕ್ರೀಡಾಕೂಟದಲ್ಲಿ ಜಯ ಗಳಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಪೌರನೌಕರರಾದ ದುರ್ಗಮ್ಮ, ಮಾರಕ್ಕ, ಓಬಮ್ಮ, ಚಂದ್ರಪ್ಪಹಾಗೂ ಬಸಪ್ಪ ಅವರನ್ನು ಗಣ್ಯರು ಸನ್ಮಾನಿಸಿದರು. ನಗರಸಭೆ ವ್ಯವಸ್ಥಾಪಕ ಮಹಾಂತೇಶ್ ಪ್ರಾಸ್ತಾವಿಕ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry