`ಪೌರಾಣಿಕ ಚಿತ್ರ ನಿರ್ಮಿಸುವ ಆಸೆ'

7
`ಮಹಾಶರಣ ಹರಳಯ್ಯ' ಚಿತ್ರದಲ್ಲಿ ರಮೇಶ್ ಅರವಿಂದ್

`ಪೌರಾಣಿಕ ಚಿತ್ರ ನಿರ್ಮಿಸುವ ಆಸೆ'

Published:
Updated:
`ಪೌರಾಣಿಕ ಚಿತ್ರ ನಿರ್ಮಿಸುವ ಆಸೆ'

ಚಿತ್ರದುರ್ಗ: ತ್ಯಾಗರಾಜ, ಭಗ್ನಪ್ರೇಮಿ, ಪ್ಲೇಬಾಯ್ ಹೀರೋ... ಹೀಗೆ ನಟ ರಮೇಶ್ ಅರವಿಂದ್‌ಗೆ ಹತ್ತಾರು ಅನ್ವರ್ಥನಾಮಗಳು. ಅಂಥ ವಿಭಿನ್ನ ಶೈಲಿಯಲ್ಲಿ ಖ್ಯಾತಿಗಳಿಸಿ, ಯುವತಿಯರ ಹೃದಯಕ್ಕೆ ಲಗ್ಗೆ ಇಟ್ಟ ರಮೇಶ್, ಈಗ `ಮಹಾಶರಣ ಹರಳಯ್ಯ' ಎಂಬ ಧಾರ್ಮಿಕ/ಪೌರಾಣಿಕ ಚಿತ್ರವೊಂದರಲ್ಲಿ ಕ್ರಾಂತಿಯೋಗಿ ಬಸವಣ್ಣನ ಪಾತ್ರ ಮಾಡುತ್ತಿದ್ದಾರೆ.ನಗರದ ಮುರುಘಾಮಠದಲ್ಲಿ ಈಚೆಗೆ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಬಿಡುವಿನ ವೇಳೆಯಲ್ಲಿ `ಪ್ರಜಾವಾಣಿ'ಯೊಂದಿಗೆ ಮಾತಿಗೆ ಸಿಕ್ಕ ರಮೇಶ್ ಅರವಿಂದ್ ಒಂದಷ್ಟು ಚುಟುಕು ಪ್ರಶ್ನೆಗಳಿಗೆ ಪಟಾಪಟ್ ಅಂತ ಉತ್ತರಿಸಿದ್ದಾರೆ.*ಚಿತ್ರದುರ್ಗ ಎಂದ ಕೂಡಲೆ...

ನಾಗರಹಾವು ಚಿತ್ರ ಕಣ್ಣೆದುರು ನಿಲ್ಲುತ್ತದೆ. ರಾಮಾಚಾರಿ ಚಾಮಯ್ಯ ಮೇಷ್ಟ್ರನ್ನು ಕೂಗಿದ್ದು ಕಿವಿಯಲ್ಲಿ ಗುಂಯ್‌ಗುಟ್ಟುತ್ತದೆ. ವಿಷ್ಣು, ಪುಟ್ಟಣ್ಣ, ಜಯಂತಿ ಮೇಡಮ್.. ಎಲ್ಲಾ ನೆನಪಾಗುತ್ತಾರೆ.*ಕೋತಿ.. ಕುರಿ... ಆಗಿದ್ದವರೂ ಶರಣರಾಗಿದ್ದು..

ಒಬ್ಬ ಅನುಭವಿ ನಟ ಹೇಗೆ ಬೇಕಾದರೂ ನಟಿಸಬಲ್ಲ. ಅಂಥ ಶಕ್ತಿ ನನ್ನೊಳಗಿದೆ. ಒಂದು ವಿಷಯ ಗೊತ್ತಾ. ನಾನೀಗ `ಮಂಗನ ಕೈಗೆ ಮಾಣಿಕ್ಯ' ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡುತ್ತೇನೆ. ಮಾರನೆಯ ದಿನವೇ `ಬಸವಣ್ಣ'ನ ಪಾತ್ರ ಮಾಡುತ್ತೇನೆ. ಹಾಸ್ಯ-ಗಂಭೀರ ಎರಡಕ್ಕೂ ಸ್ವಿಚ್ ಓವರ್ ಆಗುವುದು ನನಗೆ ಅಭ್ಯಾಸವಾಗಿಬಿಟ್ಟಿದೆ.* ಈ ಚಿತ್ರದ ಗೆಲುವಿನ ಬಗ್ಗೆ...

ಪೌರಾಣಿಕ ಚಿತ್ರಗಳನ್ನು ಪ್ರೇಕ್ಷಕನಿಗೆ ಕೊಡುವ ರೀತಿ ಬದಲಾದರೆ, ಇಂಥ ಸಿನಿಮಾಗಳೂ ಜನಪ್ರಿಯವಾಗುತ್ತವೆ. ಇತ್ತೀಚೆಗೆ ದರ್ಶನ್ ಅಭಿನಯದ `ಸಂಗೊಳ್ಳಿ ರಾಯಣ್ಣ' ಚಿತ್ರ ಗೆಲ್ಲಲ್ಲಿಲ್ಲವೇ. ಈ ಚಿತ್ರವೂ ಗೆಲ್ಲುವ ವಿಶ್ವಾಸವಿದೆ.* ಚಿತ್ರೀಕರಣದ ಅನುಭವ ಹೇಳಿ...

ಶೂಟಿಂಗಾಗಿ ಕಾರಲ್ಲಿ ಬರ್ತೀನಿ.. ಇಲ್ಲಿ ಬಂದು ಕುದುರೆ ಏರ್ತೀನಿ. ಜೀನ್ಸ್, ಟೀಷರ್ಟ್ ತೊಟ್ಟಿದ್ದವನು ಒಮ್ಮೆಗೇ ಧೋತಿ, ಜುಬ್ಬಾ ತೊಡ್ತೀನಿ. ಮೊಬೈಲ್ ಹಿಡಿದ ಕೈಯಲ್ಲಿ, ಇದಕ್ಕಿದ್ದಂತೆ ಪಾರಿವಾಳ, ತಾಳೆಗರಿಗಳು ಹರಿದಾಡುತ್ತವೆ. ನಾಲಿಗೆಯ ಮೇಲೆ ಹೈ-ಫೈ ಇಂಗ್ಲಿಷ್ ಭಾಷೆ ಹೋಗಿ, ಗ್ರಾಂಥಿಕ,  ಪೌರಾಣಿಕ ಭಾಷೆಗಳು ನಲಿದಾಡುತ್ತವೆ. ಇದಕ್ಕಿಂತ ವಿಶಿಷ್ಟ ಅನುಭವ ಬೇಕೇ ?

* ಚಿತ್ರ ವಿಶೇಷ ಎನ್ನಿಸಲು ಕಾರಣ...

ಮೊದಲ ಅಂತರ್ಜಾತಿ ವಿವಾಹವನ್ನು ಪ್ರಸ್ತುತ ಪಡಿಸುವ ಚಿತ್ರ ಇದು. ಸಮಾನತೆ ಸಾರಲು ಬಸವಣ್ಣ ಬಳಸುವ ಮಾರ್ಗಗಳು ಅದ್ಭುತ. ನನ್ನ ಮಕ್ಕಳಿಗೆ ಮನೆಯಲ್ಲಿ ಈ ಕಥೆ ಹೇಳಿದರೆ, ಹ್ಯಾರಿ ಪಾಟರ್ ಚಿತ್ರ ನೋಡಿದಷ್ಟು ಅಚ್ಚರಿಯಿಂದ ಕೇಳುತ್ತಾರೆ. ಬಹುಶಃ ಮುಂದಿನ ಪೀಳಿಗೆಗೆ ಇಂಥ ಕಥೆಗಳೇ ಇಷ್ಟವಾಗಬಹುದು. ಆದರೆ ಹೇಳುವ ರೀತಿ ಸರಿ ಇರಬೇಕು.* `ಹರಳಯ್ಯ' ಸಿನಿಮಾದಿಂದ ಕಲಿತಿದ್ದು..

ಇಷ್ಟಲಿಂಗ ಪೂಜೆಯಿಂದ ಮನಸ್ಸಿಗಾಗುವ ಸಮಾಧಾನ ಕಲಿತೆ. ಸಾಕಷ್ಟು ಪುಸ್ತಕಗಳನ್ನು ಓದಿದೆ. ಬಸವಣ್ಣ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದೇನೆ. ಮನಸ್ಸು ವಿಕಸನಗೊಳ್ಳುತ್ತಿದೆ. ನನ್ನ ಚಟುವಟಿಕೆಗಳಲ್ಲಿ ಕೆಲವನ್ನು ಬದಲಾಯಿಸಿಕೊಳ್ಳಬೇಕೆನಿಸುತ್ತಿದೆ. ಇದೊಂದು ಅದ್ಭುತ ಅನುಭವ.* ಸಹ ನಟರ ಸಹಕಾರ...

`ಪಂಚಮವೇದ' ಚಿತ್ರದಲ್ಲಿ  ನಟ ರಾಮಕೃಷ್ಣ ಜೊತೆ ನಟಿಸಿದ್ದೆ. ನನ್ನ ಮೊದಲ ಚಿತ್ರ ಸುಂದರ ಸಪ್ನದಲ್ಲಿ  ನಟ ಶ್ರೀಧರ್ ಜೊತೆ ನಟಿಸಿದ್ದೆ. ಆ ಮಹಾನ್ ಕಲಾವಿದರೊಂದಿಗೆ ಮತ್ತೊಮ್ಮೆ ನಟಿಸುವ ಅವಕಾಶವನ್ನು ನಿರ್ದೇಶಕರು ಕಲ್ಪಿಸಿದ್ದಾರೆ. ಕಲಿಯುವದಕ್ಕೆ ಕೊನೆಯಿಲ್ಲ, ಅಲ್ಲವೇ ?* ಮುಂದಿನ ಚಿತ್ರ..?

ಅವಕಾಶ ಸಿಕ್ಕರೆ, ಇಂಥದ್ದೇ ಪೌರಾಣಿಕ ಸಿನಿಮಾವನ್ನು ನಿರ್ಮಿಸುವ ಆಸೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry