ಪೌರಾಣಿಕ ಯಕ್ಷರಾತ್ರಿ

7

ಪೌರಾಣಿಕ ಯಕ್ಷರಾತ್ರಿ

Published:
Updated:
ಪೌರಾಣಿಕ ಯಕ್ಷರಾತ್ರಿ

ಶೃಂಗೇರಿಯ ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನ, ಶ್ರೀ ಪೆರ್ಡೂರು ಮೇಳ ಹಾಗೂ ವೃತ್ತಿಪರ ಅತಿಥಿ ಕಲಾವಿದರ ತಂಡ ಶನಿವಾರ `ಪೌರಾಣಿಕ ಯಕ್ಷರಾತ್ರಿ~ ಎಂಬ ವಿಶಿಷ್ಟ ಪ್ರಾಯೋಗಿಕ ಯಕ್ಷಗಾನ ಪ್ರದರ್ಶಿಸಲಿದೆ.`ಶಲ್ಯ ಪರ್ವತ ಸಹಿತ ಗದಾಯುದ್ಧ, ರಕ್ತ ರಾತ್ರಿ ಮತ್ತು ಮಾರುತಿ ಪ್ರತಾಪ~ ಪೌರಾಣಿಕ ಆಖ್ಯಾನಗಳಲ್ಲಿ ಆಯಾ ಪಾತ್ರಗಳಲ್ಲಿ ಖ್ಯಾತಿ ಪಡೆದ ಹಿರಿಯ ಮತ್ತು ಯುವ ಕಲಾವಿದರೇ ಕಾಣಿಸಿಕೊಳ್ಳಲಿರುವುದು ಇದರ ಮತ್ತೊಂದು ವಿಶೇಷ. ಹೆಸರಾಂತ ವೃತ್ತಿ ತಂಡ ಶ್ರೀ ಪೆರ್ಡೂರು ಮೇಳ ಮತ್ತು ಆಹ್ವಾನಿತ ಜನಪ್ರಿಯ ಕಲಾವಿದರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ.ಶೃಂಗೇರಿಯ ಕ್ರಿಯಾಶೀಲ ರಂಗ ಮತ್ತು ಕಿರುತೆರೆ ನಿರ್ದೇಶಕ ಹಾಗೂ ಯಕ್ಷಗಾನ ಸಂಘಟಕ ರಮೇಶ್ ಬೇಗಾರ್ ಅವರ ಸಂಯೋಜನೆ-ಪರಿಕಲ್ಪನೆ, ಅನುಭವಿ ರಂಗಕರ್ಮಿ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿರ್ದೇಶನ, ಭಾಗವತಿಕೆಯಲ್ಲಿ ಈ ಪ್ರದರ್ಶನ ನಡೆಯಲಿದೆ. ಸಹ ಭಾಗವತರಾಗಿ ಕಿಗ್ಗಾ ಹಿರಿಯಣ್ಣಾಚಾರ್ ಭಾಗವಹಿಸಲಿದ್ದಾರೆ.ಮಾರ್ವಿ ಪರಂಪರೆಯ ಉಪ್ಪೂರರ ಹೆಮ್ಮೆಯ ಶಿಷ್ಯ, ವರ್ತಮಾನದ ಶ್ರೇಷ್ಠ ಗಾನತಾರೆ ಸುಬ್ರಹ್ಮಣ್ಯ ಧಾರೇಶ್ವರ ಅವರು 25 ವರ್ಷಗಳ ಹಿಂದೆ ತಾವು ವೃತ್ತಿ ನಡೆಸುತ್ತಿದ್ದ ಮೇಳದಲ್ಲಿ ಬಳಕೆಯಲ್ಲಿದ್ದ ಶಲ್ಯಪರ್ವ ಸಹಿತ ಗದಾಯುದ್ಧ ಪ್ರಸಂಗವನ್ನು ಅತಿ ಅಪರೂಪ ಎಂಬಂತೆ ಪ್ರದರ್ಶಿಸುತ್ತಿದ್ದಾರೆ.ಕಪ್ಪೆಕೆರೆ ಮಹಾದೇವ ಹೆಗಡೆ ಉತ್ತರ ಕನ್ನಡದ ಹೆಮ್ಮೆಯ ಕಲಾವಿದರಲ್ಲಿ ಒಬ್ಬರು. ಒಂದು ಕಾಲದ ವೃತ್ತಿ ಮೇಳಗಳ 2ನೇ ವೇಷಧಾರಿ. ಸಿಂಹ ಘರ್ಜನೆಯಂತಹ ಧ್ವನಿ. ಇವರ ಅಭಿನಯದ ವಿಶ್ವರೂಪ ಸಹ ಇಲ್ಲಿ ಅನಾವರಣಗೊಳ್ಳಲಿದೆ.ಪಾತ್ರವರ್ಗದಲ್ಲಿ ಗದಾಯುದ್ಧದ ಕೌರವನಾಗಿ ಆ ಪಾತ್ರಕ್ಕೆ ಹೊಸ ವ್ಯಾಖ್ಯಾನವನ್ನೇ ರೂಪಿಸಿದ ಗೋಡೆ ನಾರಾಯಣ ಹೆಗಡೆ, ಭೀಮನಾಗಿ ಉತ್ತರ ಕನ್ನಡದ ಖ್ಯಾತ ಕಲಾವಿದ ಕೆಪ್ಪೆಕೆರೆ ಮಹಾದೇವ ಹೆಗಡೆ, ಅಶ್ವತ್ಥಾಮನಾಗಿ ಯುವ ಕಲಾವಿದ ಕಣ್ಣಿಮನಿ ಗಣಪತಿ ಭಟ್, ಕೃಷ್ಣನಾಗಿ ತೀರ್ಥಹಳ್ಳಿ ಗೋಪಾಲಾಚಾರ್, ಬಲರಾಮನಾಗಿ ಥಂಡಿಮನೆ ಶ್ರೀಪಾದ ಭಟ್ಟ, ನಾರದನ ಪಾತ್ರದಲ್ಲಿ ಯಲಗುಪ್ಪ ಸುಬ್ರಹ್ಮಣ್ಯ ತಮ್ಮ ನಟನೆಯ ಝಲಕ್ ತೋರಲಿದ್ದಾರೆ. ಯಕ್ಷಗಾನದ ಹನುಮಂತನ ಪಾತ್ರಕ್ಕೆ ಹೊಸ ರೂಪ ನೀಡಿದ ಕಲಾವಿದ ದಿ. ಕುಮಟಾ ಗೋವಿಂದ ನಾಯ್ಕರ ಪುತ್ರ ಕುಮಟಾ ಗಣಪತಿ ಗೋವಿಂದ ನಾಯ್ಕರ ಹನುಮಂತನ ಪಾತ್ರ ಈ ಪ್ರದರ್ಶನದ ಹೈಲೈಟ್.

ಸ್ಥಳ: ರವೀಂದ್ರ ಕಲಾಕ್ಷೇತ್ರ, ರಾತ್ರಿ 10. ದೇಣಿಗೆ ಪಾಸ್ ಮತ್ತಿತರ ಮಾಹಿತಿಗೆ: 94481 01708. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry