ಶುಕ್ರವಾರ, ಮೇ 7, 2021
19 °C

ಪೌರ ಕಾರ್ಮಿಕರಿಗೆ ಸೌಲಭ್ಯ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಜ್ಯದ ಪೌರಸೇವಾ ಕಾರ್ಮಿಕರಿಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು  ಭಾನುವಾರ ಇಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದರು. ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ರಾಜ್ಯಮಟ್ಟದ  ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಫಾಯಿ ಕರ್ಮಚಾರಿ ಆಯೋಗ ರಚನೆ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ ವಿಸ್ತರಣೆ, ಕಾರ್ಮಿಕರಿಗೆ ಬೆಳಗಿನ ಉಪಹಾರ ಭತ್ಯೆ ನೀಡಲು ಒಪ್ಪಿಗೆ ಸೂಚಿಸಿದರು.ಪೌರ ಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸಲು ಸರ್ಕಾರ ಸಫಾಯಿ ಕರ್ಮಚಾರಿ ಆಯೋಗ ರಚಿಸಲು ಉದ್ದೇಶಿಸಿದೆ. ರಾಜ್ಯದ ಪರಿಶಿಷ್ಟ ವರ್ಗ, ಜಾತಿ ಜನಾಂಗಗಳ ಕಾಲೋನಿಗಳಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಲು ರೂ 300 ಕೋಟಿ ಖರ್ಚು ಮಾಡಲಾಗುವುದು ಎಂದರು.ರಾಜ್ಯದಲ್ಲಿ 2005-06ನೇ ಸಾಲಿನವರೆಗೆ ರೂ 25ಸಾವಿರವರೆಗೆ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡಲು ಉದ್ದೇಶಿಸಲಾಗಿದೆ. ಅದನ್ನು 2011-12ನೇ ಸಾಲಿನವರೆಗೂ ವಿಸ್ತರಿಸಲು ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಪೌರಕಾರ್ಮಿಕರಿಗೂ ವಿಸ್ತರಿಸಲು ಆದೇಶ ಹೊರಡಿಸಲಾಗುವುದು. ಹಾಗೆಯೇ, ಪೌರ ಕಾರ್ಮಿಕರಿಗೆ ಬೆಳಗಿನ ವೇಳೆ ಉಪಹಾರಕ್ಕೆ ವಿಶೇಷ ಭತ್ಯೆ ನೀಡಲಾಗುವುದು. ಪೌರ ಕಾರ್ಮಿಕರಿಗೆ ಸಂಬಂಧಿಸಿದ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.   ರಾಜ್ಯದಲ್ಲಿ ಗುರುತಿಸಲಾಗಿರುವ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ಮುಂಬರುವ 2 ವರ್ಷಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಈಗಾಗಲೇ ರಾಜ್ಯದಾದ್ಯಂತ ಚಾಲನೆ ನೀಡಲಾಗಿದೆ ಎಂದರು.ಸಂಘದ ಅಧ್ಯಕ್ಷ ಟಿ.ಆರ್. ಸತ್ಯನಾರಾಯಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಎಂ. ಹನುಮಂತಪ್ಪ (ಗುಬ್ಬಿ) ಬೇಡಿಕೆಗಳ ಮನವಿ ಓದಿದರು.  ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕರುಗಳಾದ ಬೇಳೂರು ಗೋಪಾಲಕೃಷ್ಣ, ಕೆ.ಜಿ. ಕುಮಾರಸ್ವಾಮಿ  ಹಾಗೂ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.