ಪೌರ ಕಾರ್ಮಿಕರ ಗೋಳು ಕೇಳೋರ‌್ಯಾರು..?

7

ಪೌರ ಕಾರ್ಮಿಕರ ಗೋಳು ಕೇಳೋರ‌್ಯಾರು..?

Published:
Updated:

ಮಂಡ್ಯ: ಅದು, ಪೌರ ಕಾರ್ಮಿಕರ ಕಾಲೋನಿ. ನಗರವನ್ನು ಸ್ವಚ್ಛಗೊಳಿಸುವ ಬಹುತೇಕ ಮಂದಿ ನೆಲೆಯೂರಿರುವ ಪ್ರದೇಶವೂ ಹೌದು. ದೀಪದ ಬುಡದಲ್ಲೇ ಕತ್ತಲು ಎಂಬಂತೆ ಎಲ್ಲ ಕೊಳೆಗೇರಿಗಳ ಹಾಗೆಯೇ ಇದೂ ಇದ್ದು, ಮೂಲ ಸೌಕರ್ಯ ಗಳಿಂದ ವಂಚಿತವಾಗಿದೆ.ಕಾಲುದಾರಿಯಂತಿರುವ ರಸ್ತೆ; ಗಬ್ಬು ನಾರುತ್ತಿರುವ ಕಲ್ಮಷ ನೀರು; ಚರಂಡಿಗಳ ಸನಿಹವೇ ಆಟವಾಡುವ ಚಿಣ್ಣರು; ಅಲ್ಲೇ, ಎಳೆಯ ಮಕ್ಕಳಿಗೆ ಕೈತುತ್ತು ನೀಡುವ ತಾಯಂದಿರು...ಇಂತಹ ಅನೇಕ ದೃಶ್ಯಗಳು ಅಲ್ಲಿ ಕಾಣಸಿಗುತ್ತವೆ. ಅದು, ನೆಹರು ನಗರದ ಪೌರ ಕಾರ್ಮಿಕರ ಕಾಲೋನಿ.ಇಲ್ಲಿ, ಒಟ್ಟು 7 ಬೀದಿಗಳಿದ್ದು, ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ನೆಲಸಿವೆ. ಆದರೆ, ಬೆರಳೆಣಿಕೆ ಕುಟುಂಬಗಳಷ್ಟೇ ವೈಯಕ್ತಿಕ ಶೌಚಾಲಯ ಹೊಂದಿವೆ. ಉಳಿದವರು ನೈಸರ್ಗಿಕ ಕ್ರಿಯೆಗೆ ಬಯಲನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.ಕುಡಿಯುವ ನೀರು ಒದಗಿಸಲು 4 ತೊಂಬೆಗಳಿದ್ದು, 2 ತೊಂಬೆಗಳು ನಿಷ್ಕ್ರಿಯಗೊಂಡು ಬಹುದಿನಗಳೇ ಕಳೆದಿವೆ. ಇನ್ನೆರೆಡರಲ್ಲೂ ನೀರು ನಿಯಮಿತವಾಗಿ ಬರುತ್ತಿಲ್ಲ. ಹೀಗಾಗಿ, ಕೆಲ ವೇಳೆ ನೀರಿಗೂ ತತ್ವಾರ ಉಂಟಾಗುತ್ತದೆ ಎಂಬುದು ಇಲ್ಲಿನ ನಿವಾಸಿಗಳ ಅಳಲು.`ನೋಡಿ ಸಾ.. ನಾವು ಊರನ್ನೆಲ್ಲಾ ಶುಚಿ ಮಾಡ್ತೀವಿ ನಮ್ ಕಾಲೋನಿಗೆ ಏನೂ ಸವಲತ್ತಿಲ್ಲ. ಚರಂಡಿಗಳು ಮುರಿದು ಬಿದ್ದು, ವರ್ಷಗಳೇ ಕಳೆದರೂ ಸರಿಪಡಿಸಿಲ್ಲ. ರಸ್ತೆ ಹದಗೆಟ್ಟಿದೆ. ಬೀದಿ ದೀಪ ನಿರ್ವಹಣೆಯೂ ಅಷ್ಟಕಷ್ಟೇ. ಟ್ರನ್ಸ್‌ಫಾರ್ಮರ್‌ನ ವೈರ್‌ಗಳು ಮಕ್ಕಳ ಕೈಗೆ ಸಿಗುತ್ತದೆ. ಅದರ ಸುತ್ತ ಬೇಲಿನೂ ಹಾಕಿಲ್ಲ. ಏನಾದ್ರೂ ಹೆಚ್ಚುಕಮ್ಮಿ ಆದ್ರೆ ಏನ್ಮಾಡೋದು..~ ಎಂದು ಕಾಲೋನಿಯ ವೇಲು, ವಿಜಯ್, ಮಹದೇವು ಬೇಸರ ವ್ಯಕ್ತಪಡಿಸುತ್ತಾರೆ.ಕಾಲೋನಿಯ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರವಿದೆ. ಅದು, ದೊಡ್ಡದಾದ ಮೋರಿಗೆ ಹೊಂದಿಕೊಂಡಿದೆ. ಅಲ್ಲೇ, ಮಕ್ಕಳಿಗೆ ಊಟ ತಯಾರಿಸಲಾಗುತ್ತದೆ. ದುರ್ವಾಸನೆ ಮಧ್ಯೆಯೇ ಮಕ್ಕಳ ಊಟ, ಕಲಿಕೆ, ಆಟೋಟ ಎಲ್ಲವೂ ಸಾಗಬೇಕಿದೆ.ನೂತನವಾಗಿ ನಿರ್ಮಿಸುತ್ತಿರುವ ಅಂಗನವಾಡಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವುದು, ಚರಂಡಿಗಳ ಮೇಲೆ ಕಲ್ಲುಚಪ್ಪಡಿ ಹಾಸುವುದು ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಬಗೆಗೆ ನಗರಸಭೆಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಲಂ ಒಕ್ಕೂಟದ ಕಾರ್ಯದರ್ಶಿ ಸಿದ್ದರಾಜು ಬೇಸರ ವ್ಯಕ್ತಪಡಿಸುತ್ತಾರೆ.ತಲೆಯೆತ್ತಿದರೆ ತಾಗುವ ಮನೆಗಳ ಸೂರು, ಜೋಲಿ ತಪ್ಪಿದರೆ ಮೈಗಂಟುವ ಗೋಡೆಗಳು, ಅಶುಚಿತ್ವದ ಪರಿಸರ ನಡುವೆ ಇಲ್ಲಿನ ನಿವಾಸಿಗಳ ಬದುಕಿನ ಬಂಡಿ ಉರುಳುತ್ತಿದೆ. ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವ ಜನರ ಕೂಗಿಗೆ ಸ್ಪಂದಿಸಲು ಆಡಳಿತ ಮತ್ತು ಅಧಿಕಾರಶಾಹಿಗೆ ಇನ್ನೆಷ್ಟು ದಿನ ಬೇಕೋ ಗೊತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry