ಶುಕ್ರವಾರ, ಮೇ 27, 2022
31 °C

ಪ್ಯಾರಾ ಮೆಡಿಕಲ್ ಇದೆ ಬೇಡಿಕೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರೆವೈದ್ಯಕೀಯ ಶಿಕ್ಷಣ (Paramedical course)  ವೈದ್ಯಕೀಯ ಶಿಕ್ಷಣದ ಒಂದು ಅವಿಭಾಜ್ಯ ಅಂಗ. ಬಹಳ ಹಿಂದೆ ಎಲ್ಲವನ್ನು ವೈದ್ಯರೇ ಮಾಡುತ್ತಿದ್ದ ಕಾಲವಿತ್ತು.ಕಾಲಾಂತರದಲ್ಲಿ ವೈದ್ಯರೇ ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ವರ್ಗಕ್ಕೆ ಪೂರಕ ತರಬೇತಿ ನೀಡುತ್ತಿದ್ದರು. ಆದರೆ ಶಿಕ್ಷಣದ ಗುಣಮಟ್ಟ ಕಾಪಾಡುವಲ್ಲಿ ಉಂಟಾದ ಸಮಸ್ಯೆ ಇಂದಿನ ಅರೆವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಗೆ ಬುನಾದಿ ಹಾಕಿತು.ಈ ತರಬೇತಿ ಎಲ್ಲ ವೈದ್ಯಕೀಯ ವಿಭಾಗಕ್ಕೂ ಸಂಬಂಧಪಡುತ್ತದೆ. ಹೀಗಾಗಿ ವೈದ್ಯರ ನೇತೃತ್ವದಲ್ಲಿ ಈ ಶಿಕ್ಷಣ ಹಾಗೂ ತರಬೇತಿ ನಡೆದರೆ ಹೆಚ್ಚು ಸೂಕ್ತ; ಗುಣಮಟ್ಟ ಕಾಪಾಡುವಲ್ಲಿ ಸಹಾಯಕ ಎಂದು ದೃಢಪಟ್ಟಿದೆ.ಈ ಶಿಕ್ಷಣ ಮೊದಲು ಪ್ರಾರಂಭವಾಗಿದ್ದು ವೈದ್ಯ ಕಾಲೇಜುಗಳಲ್ಲಿ. ಆಗ ತರಬೇತಾದವರ ಸಂಖ್ಯೆ ಕಡಿಮೆ ಇತ್ತು. ಇದು ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳ ಬೇಡಿಕೆಗೆ ಸಾಲದಾಯಿತು. ಅರೆವೈದ್ಯಕೀಯ ಪರಿಣಿತರ ಅವಶ್ಯಕತೆ ಹೆಚ್ಚಾದಾಗ ತರಬೇತು ಕಾರ್ಯವನ್ನು ವೃತ್ತಿ ಶಿಕ್ಷಣ ತರಬೇತಿ ಕೇಂದ್ರಗಳಿಗೆ ವಹಿಸಲಾಯಿತು. ಮುಂದೆ ಇವೇ ಅರೆವೈದ್ಯಕೀಯ ಶಿಕ್ಷಣ ಕಾಲೇಜುಗಳಾದವು.ಇಲ್ಲಿ ಕೆಲವು ಅಂಶ ಗಮನಿಸಲೇಬೇಕು. ರೋಗ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ವೈದ್ಯರು ಹೇಗೆ ಮುಖ್ಯವೋ ಹಾಗೇ ಅದಕ್ಕೆ ಸಂಬಂಧಪಟ್ಟ ವೈದ್ಯಕೀಯ ಪ್ರಯೋಗಾಲಯ (Medical laboratories) ಕೆಲಸದ ನಿರ್ವಹಣೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಮಾಡುವ ಪ್ರಯೋಗಗಳ ಫಲಿತಾಂಶದ ಮೇಲೆ ರೋಗಿಯ ಚಿಕಿತ್ಸೆ, ಪರಿಣಾಮ ಅವಲಂಬಿಸಿರುತ್ತದೆ. ಆದ್ದರಿಂದ ವೈದ್ಯರು, ಅರೆವೈದ್ಯ ಸಿಬ್ಬಂದಿ ತಂಡದಂತೆ ಕೆಲಸ ಮಾಡಬೇಕು. ಯಾರೇ ನಿರ್ಲಕ್ಷ ಮಾಡಿದರೂ ರೋಗಿಗೆ ತೊಂದರೆ. ಆದ್ದರಿಂದಲೇ ಇದು ಜವಾಬ್ದಾರಿಯುತ ಸೇವಾ ವೃತ್ತಿ.ಆದ್ದರಿಂದ ಇದಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ವೃತ್ತಿಯ ಬಗ್ಗೆ ಒಲವು, ಆಸಕ್ತಿ, ಸೇವಾ ಮನೋಭಾವ, ಶ್ರದ್ಧೆ ಎಲ್ಲವೂ ಇರಬೇಕು. ಹಾಗೆಯೇ ಈ ತರಬೇತಿ ಕೊಡುವ ಅಧ್ಯಾಪಕರಿಗೆ ಕೂಡ ರೋಗಗಳು, ಪ್ರಯೋಗಗಳ ಫಲಿತಾಂಶ, ಇವು ರೋಗಿಗಳ ಮೇಲೆ ಬೀರುವ ಪರಿಣಾಮದ ಅರಿವಿರುತ್ತದೆ.ಆದರೆ ಈ ಮೂಲಭೂತ ಉದ್ದೇಶವೇ ಈಗ ದುರುಪಯೋಗಕ್ಕೆ ಒಳಗಾಗಿದೆ. ನೂರಾರು ಅರೆವೈದ್ಯಕೀಯ ಕಾಲೇಜುಗಳು ಬರೀ ಪ್ರಮಾಣ ಪತ್ರ ಕೊಡುವ, ಕೊಡಿಸುವ ಶಿಕ್ಷಣ ಕೇಂದ್ರಗಳಾಗಿವೆ ಎಂದು ನೋವಿನಿಂದ ಹೇಳಬೇಕಾಗುತ್ತದೆ.ತಯಾರಿ: ಈ ವೃತ್ತಿ ಶಿಕ್ಷಣಕ್ಕೆ ಎಸ್‌ಎಸ್‌ಎಲ್‌ಸಿ ಮುಗಿಸಿ ಪ್ರವೇಶ ಪಡೆದ ವಿದ್ಯಾರ್ಥಿ 3 ವರ್ಷ ಹಾಗೂ ಪಿಯುಸಿ ಮುಗಿಸಿದ್ದರೆ 2 ವರ್ಷ ಕಲಿಯಬೇಕಾಗುತ್ತದೆ. ಮೊದಲ ವರ್ಷ ಇಂಗ್ಲಿಷ್, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಓದಬೇಕು. ಪಿಯುಸಿ ವಿಜ್ಞಾನ ಮುಗಿಸಿದ ವಿದ್ಯಾರ್ಥಿಗೆ 2ನೇ ವರ್ಷಕ್ಕೆ ನೇರ ಪ್ರವೇಶ ದೊರೆಯುತ್ತದೆ. ಇಲ್ಲಿ ವೈದ್ಯ ವಿಷಯಗಳ ಬಗ್ಗೆ ಸಾಮಾನ್ಯ ತಿಳಿವಳಿಕೆ, ತರಬೇತಿ ನೀಡಲಾಗುತ್ತದೆ.ಅರೆ ವೈದ್ಯ ವೃತ್ತಿಗೆ ಜೀವರಸಾಯನ ಶಾಸ್ತ್ರ, ರೋಗ ನಿರ್ಧಾರ, ಸೂಕ್ಷ್ಮಾಣು ಜೀವ ಶಾಸ್ತ್ರಗಳ ಬಗ್ಗೆ ಮೂಲಭೂತ ತಿಳಿವಳಿಕೆ ಅಗತ್ಯ. ಹೀಗಾಗಿ English, physics, chemistry, Biology  ಮತ್ತಿತರ ವಿಭಾಗಗಳಲ್ಲಿ ಕಲಿಸುತ್ತಾರೆ. 2ನೇ ಮತ್ತು 3ನೇ ವರ್ಷದಲ್ಲಿ ಅವರು ಆಯ್ಕೆ ಮಾಡಿಕೊಂಡ ವಿಷಯದಲ್ಲಿ ವಿಶೇಷ ತರಬೇತಿ ಇರುತ್ತದೆ. ಇದರಲ್ಲಿ ಥಿಯರಿ ಬರೀ ಬುನಾದಿ. ಪ್ರಾಯೋಗಿಕ ಕಲಿಕೆ ಬಹಳ ಮುಖ್ಯ. ನಂತರ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಯಾ ವೈದ್ಯಕೀಯ ವಿಭಾಗಗಳಲ್ಲಿ ನೇಮಕಗೊಳ್ಳಬಹುದು.ಈಗ ಎಲ್ಲ ಊರುಗಳ್ಲ್ಲಲೂ ಆಸ್ಪತ್ರೆ, ನರ್ಸಿಂಗ್ ಹೋಂಗಳಿವೆ. ಹೀಗಾಗಿ ಸರಿಯಾಗಿ ತರಬೇತಿ ಪಡೆದ ಅರೆವೈದ್ಯಕೀಯ ಅಭ್ಯರ್ಥಿಗಳಿಗೆ ಒಳ್ಳೆಯ ಭವಿಷ್ಯವಿದೆ. ಸೂಕ್ತ ಶಿಕ್ಷಕರು, ಶಿಕ್ಷಣ ಹಾಗೂ ತರಬೇತಿ ಪಡೆದ ಇವರು ಎಲ್ಲ ವೈದ್ಯಕೀಯ ವಿಭಾಗಗಳ ಬೆನ್ನೆಲುಬು.

ಪರೀಕ್ಷೆ ತೇರ್ಗಡೆಯಾದರೆ ಡಿಪ್ಲೊಮಾ ಪ್ರಮಾಣ ಪತ್ರ (DMLT, DMXT) ನೀಡಲಾಗುತ್ತದೆ. ಪ್ಯಾರಾಮೆಡಿಕಲ್ ಮಂಡಳಿಯ ಈ ಪ್ರಮಾಣಪತ್ರಕ್ಕೆ ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಮಾನ್ಯತೆಯಿದೆ.(ಲೇಖಕಿ ಬೆಂಗಳೂರಿನ ದಯಾನಂದ ಸಾಗರ ಅರೆವೈದ್ಯಕೀಯ ಕಾಲೇಜು ಪ್ರಾಚಾರ್ಯರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.