ಮಂಗಳವಾರ, ನವೆಂಬರ್ 12, 2019
28 °C

ಪ್ರಕಟವಾಗದ ಕಾಂಗ್ರೆಸ್ ಅಭ್ಯರ್ಥಿ: ಗೊಂದಲ ಮುಂದುವರಿಕೆ

Published:
Updated:

ದೊಡ್ಡಬಳ್ಳಾಪುರ: ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಸ್ಥಾನದ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಹೀಗಾಗಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರಕ್ಕೆ ಹೋದ ಕಡೆಯಲ್ಲ್ಲೆಲಾ `ಅಭ್ಯರ್ಥಿ ಯಾರು' ಎಂದು ಕಾರ್ಯಕರ್ತರು ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳುವುದಕ್ಕೆ ತಡವರಿಸುವಂತಾಗಿದೆ.ಬಿಜೆಪಿ, ಜೆಡಿಎಸ್ ಮತ್ತು ಸಿಪಿಎಂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಅಧಿಕೃತವಾಗಿ ಪ್ರಕಟಿಸಿವೆ. ಜೆಡಿಎಸ್ ಮೊದಲ ಸುತ್ತಿನ ಪ್ರಚಾರವನ್ನೂ ಮುಕ್ತಾಯ ಮಾಡಿದೆ. ಬಿಜೆಪಿ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ಶನಿವಾರದಿಂದ  ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಆದರೆ ಪ್ರಮುಖ ಪಕ್ಷವಾದ ಕಾಂಗ್ರೆಸ್ ಶಾಸಕ ಸ್ಥಾನದ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ.ಈ ನಡುವೆ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ದಂಡು ಚುನಾವಣಾ ಪ್ರಚಾರ ಆರಂಭಿಸಿದೆ. ಆದರೆ ಪಕ್ಷದ ಅಭ್ಯರ್ಥಿ ಯಾರೆಂಬುದು ತಿಳಿಯದೇ ಗೊಂದಲ ಮುಂದುವರಿದಿದೆ. ಇದರಿಂದಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿರುವ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರಲ್ಲಿ ಉತ್ಸಾಹವೇ ಇಲ್ಲವಾಗಿದೆ.ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸುಮಾರು ಮೂವರು ಆಕಾಂಕ್ಷಿಗಳ ಹೆಸರು ಹೈಕಮಾಂಡ್‌ಗೆ ಸಲ್ಲಿಕೆಯಾಗಿದ್ದವು. ಹೊರಗಿನ ಹಾಗೂ ಪಕ್ಷ ಬಿಟ್ಟು ಹೋಗಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಯಾರಿಗೇ ಟಿಕೆಟ್ ನೀಡಿದರೂ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಹೇಳುತ್ತಲೇ ಇದ್ದಾರೆ. ಒಗ್ಗಟ್ಟಿನಿಂದ ಪ್ರಚಾರ ಸಭೆಗಳಲ್ಲಿ ಒಂದೇ ವೇದಿಕೆಯಲ್ಲಿ ಪ್ರಚಾರ ಸಭೆಗಳನ್ನೂ ನಡೆಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)