ಪ್ರಕಾಶ್‌ಗೆ ಭಾವಪೂರ್ಣ ಶ್ರದ್ಧಾಂಜಲಿ

7

ಪ್ರಕಾಶ್‌ಗೆ ಭಾವಪೂರ್ಣ ಶ್ರದ್ಧಾಂಜಲಿ

Published:
Updated:

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ನಿಧನ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ತುರ್ತು ಸಭೆ ಸೇರಿದ ಪಕ್ಷದ ಮುಖಂಡರು ಪ್ರಕಾಶ್ ಅವರಿಗೆ ಭಾವಪುರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಭೆ ಸೇರಿ ಪ್ರಕಾಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ‘ಪ್ರಕಾಶ್ ಕೇವಲ ಸಜ್ಜನ ರಾಜಕಾರಣಿಯಲ್ಲದೆ, ಮಾನವೀಯ ಮೌಲ್ಯಗಳನ್ನೂ ಮೈಗೂಡಿಸಿಕೊಂಡಿದ್ದರು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ’ ಎಂದು ಪರಮೇಶ್ವರ್ ಹೇಳಿದರು.

‘ಇತ್ತೀಚೆಗೆ ಕರೆದಿದ್ದ ಕಾಂಗ್ರೆಸ್‌ನ ಲಿಂಗಾಯತ ಮುಖಂಡರ ಸಭೆಗೂ ಹಾಜರಾಗಿ, ಉತ್ತಮ ಸಲಹೆಗಳನ್ನೂ ನೀಡಿದ್ದರು. ದೆಹಲಿಗೆ ನಿಯೋಗ ತೆರಳಿ, ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ನೀಡೋಣ  ಎಂದೂ ಹೇಳಿದ್ದರು. ಆದರೆ, ನಿಯೋಗ ತೆರಳುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ’ ಎಂದು ಕಂಬನಿ ಮಿಡಿದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಪ್ರಕಾಶ್ ನಮಗೆಲ್ಲರಿಗೂ ಒಂದು ರೀತಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜನತಾದಳದಲ್ಲಿದ್ದಾಗ ಅವರೇ ಶ್ಯಾನುಭೋಗರು. ಪಕ್ಷದ ಎಲ್ಲ ನಿರ್ಣಯಗಳನ್ನೂ ಅಚ್ಚುಕಟ್ಟಾಗಿ ಬರೆಯುತ್ತಿದ್ದದ್ದೇ ಪ್ರಕಾಶ್. ಯಾವುದೇ ಜವಾಬ್ದಾರಿ ವಹಿಸಿದರೂ ಅವೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಕಿತಾಪತಿ ಇರಲಿಲ್ಲ’ ಎಂದು ಹೇಳಿದರು.

‘ಹಂಪಿ ಉತ್ಸವ ಆಚರಿಸಬೇಕೆಂದು ಪಟ್ಟುಹಿಡಿದು ಅದನ್ನು ಪ್ರತಿ ವರ್ಷ ನಡೆಸುವಂತೆ ಮಾಡಿದ್ದೇ ಪ್ರಕಾಶ್. ನಾನು ಹಣಕಾಸು ಸಚಿವನಾಗಿದ್ದಾಗ ಅದಕ್ಕೆ ಹಣ ನೀಡುವ ಕೆಲಸ ಮಾಡಿದ್ದೆ’ ಎನ್ನುವುದನ್ನು ಸ್ಮರಿಸಿದರು.

‘ಚುನಾವಣಾ ರಾಜಕೀಯದಿಂದ ದೂರ ಸರಿಯುವ ಇಚ್ಛೆಯನ್ನು ಇತ್ತೀಚೆಗೆ ಅವರನ್ನು ಭೇಟಿ ಮಾಡಿದ್ದಾಗ ಹೇಳಿದ್ದರು. ಇನ್ನೇನಿದ್ದರೂ ನನ್ನ ಮಗ ರವಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದಿದ್ದರು. ನಾನೂ ಕೂಡ ಮುಂದಿನ ಚುನಾವಣೆಯಲ್ಲಿ ರವಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದೆ’ ಎಂದು ಹೇಳಿದರು.

ಪಕ್ಷ ಬಿಡೋದು ಬೇಡ: ‘ನಾವಿಬ್ಬರೂ ಮಾತನಾಡುವಾಗ ಇನ್ನು ಮುಂದೆ ಯಾವ ಪಕ್ಷವನ್ನೂ ಸೇರುವುದು ಬೇಡ ಎನ್ನುವ ನಿರ್ಣಯಕ್ಕೆ ಬಂದಿದ್ದೆವು. ಇದ್ದರೆ ಕಾಂಗ್ರೆಸ್, ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಎನ್ನುವ ನಿರ್ಧಾರಕ್ಕೆ ಬಂದಿದ್ದೆವು. ಇದಕ್ಕೆ ಈಗಲೂ ಬದ್ಧ ಇದ್ದು, ರಾಜಕೀಯ ಅಂತ್ಯ ಏನಿದ್ದರೂ ಕಾಂಗ್ರೆಸ್‌ನಲ್ಲೇ ಆಗುತ್ತದೆ. ಯಾವ ಪಕ್ಷವನ್ನೂ ಸೇರುವುದಿಲ್ಲ. ಆದರೂ ಕೆಲವರು ಜೆಡಿಎಸ್ ಜತೆ ಹೋಗುತ್ತಾರೆಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ’ ಎಂದು ಈ ಸಂದರ್ಭದಲ್ಲಿ ಆಕ್ಷೇಪಿಸಿದರು.

ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿದರು. ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ನಾಯ್ಡು, ಮುಖಂಡರಾದ ಹನುಮಂತಯ್ಯ, ಪ್ರಕಾಶ್ ರಾಥೋಡ್, ಕೆಂಚೇಗೌಡ, ಅಬ್ದುಲ್ ವಹಾಬ್ ಸೇರಿದಂತೆ ಇತರರು ಹಾಜರಿದ್ದರು.

ಸೋನಿಯಾ ಸಂತಾಪ: ಪ್ರಕಾಶ್ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಅವರು ಪ್ರಕಾಶ್ ಪುತ್ರ ರವೀಂದ್ರ ಅವರಿಗೆ ಪತ್ರ ಬರೆದು, ತಮ್ಮ ಸಂತಾಪ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry