ಪ್ರಕಾಶ್‌ ರೈ ‘ಒಗ್ಗರಣೆ’ ಡಬ್ಬಿ!

7

ಪ್ರಕಾಶ್‌ ರೈ ‘ಒಗ್ಗರಣೆ’ ಡಬ್ಬಿ!

Published:
Updated:

ನಟ ಪ್ರಕಾಶ್‌ ರೈ ನಿರ್ದೇಶಕನ ಟೋಪಿ ಧರಿಸಿ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ‘ನಾನು ನನ್ನ ಕನಸು’ ಮತ್ತು ‘ಪುಟ್ಟಕ್ಕನ ಹೈವೇ’ ಚಿತ್ರದ ಬಳಿಕ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬಿಜಿಯಾಗಿದ್ದ ಅವರೀಗ ಕನ್ನಡದಲ್ಲಿ ‘ಒಗ್ಗರಣೆ’ ಹಾಕಲು ಬಂದಿದ್ದಾರೆ. ಕನ್ನಡ ಮಾತ್ರವಲ್ಲ, ತೆಲುಗು ಮತ್ತು ತಮಿಳು ನೆಲಗಳಲ್ಲಿಯೂ ‘ಒಗ್ಗರಣೆ’ಯ ಪರಿಮಳ ಹರಡಲಿದೆ.ಮಲಯಾಳಂನ ಯಶಸ್ವಿ ಚಿತ್ರ ‘ಸಾಲ್ಟ್‌ ಎನ್‌ ಪೆಪ್ಪರ್‌’ ನಿಂದ ಸ್ಫೂರ್ತಿ ಪಡೆದಿರುವ ಪ್ರಕಾಶ್‌ ರೈ ಅದರ ನೆರಳಿನಲ್ಲಿ ವಿಭಿನ್ನವಾದ ಕಥನ ಹೆಣೆದಿದ್ದಾರಂತೆ. ಮೂರು ಭಾಷೆಗಳಿಗೆ ಏಕಕಾಲದಲ್ಲಿ ಚಿತ್ರೀಕರಣ ನಡೆಸುವುದು ಅವರ ಉದ್ದೇಶ. ಇದಕ್ಕಾಗಿ ಅವರು ಸೆ. 26ರಿಂದ ಮೈಸೂರಿನಲ್ಲಿ ಬಿಡಾರ ಹೂಡಲಿದ್ದಾರೆ. ‘ಒಗ್ಗರಣೆ’ಯ ನೆಪದಲ್ಲಿ ಮಾತಿಗೆ ಕುಳಿತ ಪ್ರಕಾಶ್‌ ರೈ ತಮ್ಮ ಸಿನಿಮಾ ಪಯಣದ ಅನುಭವಗಳನ್ನು ಹಂಚಿಕೊಂಡರು.ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಿಡುವಿಲ್ಲದಂತೆ ತೊಡಗಿದ್ದ ಪ್ರಕಾಶ್ ರೈ ಬಾಲಿವುಡ್‌ನಲ್ಲೂ ಮಿಂಚು ಹರಿಸಿದ್ದಾರೆ. ‘ಭಾಗ್‌ ಮಿಲ್ಖಾ ಭಾಗ್‌’ ಚಿತ್ರದ ಯಶಸ್ಸಿನ ಬಳಿಕ ಉತ್ತರ ಭಾರತದ ಜನ ದಕ್ಷಿಣದ ನಟನನ್ನು ನಮ್ಮವನೆಂದು ಒಪ್ಪಿಕೊಂಡಿದ್ದಾರೆ ಎಂದು ಪ್ರಕಾಶ್‌ ರೈ ಸಂತಸ ವ್ಯಕ್ತಪಡಿಸುತ್ತಾರೆ. ಹೊಸ ವಿಷಯ, ಹೊಸ ದಿಗಂತ, ಹೊಸ ಭಾಷೆ, ಹೊಸ ಯೋಚನೆಗಳು, ಹೊಸ ನಿರ್ದೇಶಕರು ಇದೆಲ್ಲವೂ ಸಿಗುತ್ತಿದೆ. ಒಬ್ಬ ನಟನಿಗೆ ಇದಕ್ಕಿಂತ ಉತ್ತಮವಾದುದು ಇನ್ನೇನು ಬೇಕು? ಎನ್ನುವ ಪ್ರಕಾಶ್‌ ರೈ, ‘ಭಾಗ್‌ ಮಿಲ್ಖಾ ಭಾಗ್‌’ ಕೀರ್ತಿ ತಂದು ಕೊಟ್ಟದ್ದು ಮಾತ್ರವಲ್ಲ, ಸಾಕಷ್ಟು ಕಲಿಸಿದೆ ಎನ್ನುತ್ತಾರೆ. ಈ ಚಿತ್ರದ ಬಳಿಕ ಜನರು ತಮ್ಮೆಡೆಗೆ ತೋರುತ್ತಿರುವ ಪ್ರೀತಿ ಹೆಚ್ಚಾಗಿದೆ ಎನ್ನುವುದು ಅವರ ಅಭಿಪ್ರಾಯ.ತಮಿಳು ಹಾಗೂ ತೆಲುಗು ಭಾಷೆಗಳನ್ನು ನಿರ್ದೇಶಿಸಿದ್ದ ‘ಧೋನಿ’ಯನ್ನು ಕನ್ನಡದಲ್ಲಿಯೂ ಮಾಡುವ ಉದ್ದೇಶ ಅವರಲ್ಲಿತ್ತು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ‘ಒಗ್ಗರಣೆ’ ಎಲ್ಲಾ ಭಾಷೆಗಳಿಗೂ ಹೊಂದಿಕೊಳ್ಳುವ ಸಾರ್ವತ್ರಿಕ ಕಥನ. ಇದು ಬೇರೆ ಚಿತ್ರದ ಪ್ರೇರಣೆಯಾಗಿದ್ದರೂ ನನ್ನ ಸಿನಿಮಾ. ನನ್ನ ಒಳದೃಷ್ಟಿಯ ಸಿನಿಮಾ. ಕುಟುಂಬವಿಡೀ ಕುಳಿತು ನೋಡುವಂಥ ಮನರಂಜನಾತ್ಮಕ ಚಿತ್ರ ಎನ್ನುತ್ತಾರೆ ಅವರು. ‘ಪಕ್ಕಾ ವ್ಯಾಪಾರಿ ಚಿತ್ರಗಳಲ್ಲಿ ನಟಿಸಿದ್ದರೂ ನಮಗೆ ಸದ್ದುಗದ್ದಲದ ಚಿತ್ರಗಳನ್ನು ನಿರ್ದೇಶಿಸುವುದು ಗೊತ್ತಿಲ್ಲ. ನನಗೆ ನನ್ನದೇ ಐಡೆಂಟಿಟಿ ಇದೆ. ಅದರ ನೆಲೆಯಲ್ಲೇ ಸಿನಿಮಾ ಮಾಡುತ್ತೇನೆ’ ಎಂದು ಹೇಳುತ್ತಾರೆ.ಪ್ರಕಾಶ್ ರೈ ತಮ್ಮನ್ನು ‘ಪ್ರಪಂಚದ ಹುಡುಗ’ ಎಂದು ಕರೆದುಕೊಳ್ಳುತ್ತಾರೆ. ತಮಗೆ ಭಾಷೆಯ ಗಡಿಯಿಲ್ಲ. ಇಷ್ಟವಾದ ಭಾಷೆಯಲ್ಲಿ ಸಿನಿಮಾ ಮಾಡಬೇಕು. ಹೀಗಾಗಿಯೇ ಎಲ್ಲಾ ಭಾಷೆಗಳಲ್ಲೂ ಮಾಡುತ್ತೇನೆ. ಮರಾಠಿ ಚಿತ್ರದಲ್ಲೂ ನಟಿಸಿದ್ದೇನೆ. ಎಲ್ಲಾ ಭಾಷೆಗಳಲ್ಲೂ ತೊಡಗಿಸಿಕೊಳ್ಳುವವನು ಪ್ರಕಾಶ್‌ ರೈ ಒಬ್ಬನೇ. ಅವನಿಗೆ ಆ ನೀರಿನ ಗುಣವಿದೆ. ಕನ್ನಡದವನೆಂದು ಇಲ್ಲಿನವರು ಹೇಗೆ ಹೆಮ್ಮೆಯಿಂದ ಒಪ್ಪಿಕೊಂಡಿದ್ದಾರೋ ಹಾಗೆಯೇ ಅವರವರ ಭಾಷೆಯ ಜನ ಒಪ್ಪಿಕೊಂಡಿದ್ದಾರೆ. ಒಬ್ಬ ಕಲಾವಿದ ಯಾವ ಭಾಷೆ ಕಲಿತುಕೊಂಡು ಅದರೊಳಗೆ ಬೆಳೆಯುತ್ತಾನೋ ಅಲ್ಲಿನ ಜನ ಆತನನ್ನು ಸ್ವೀಕರಿಸುತ್ತಾರೆ. ಅದಕ್ಕೆ ನಾನೇ ಉದಾಹರಣೆ. ಮರಾಠಿ, ತಮಿಳು, ತೆಲುಗು, ಮಲಯಾಳಂ, ಹಿಂದಿ ಎಲ್ಲಾ ಚಿತ್ರರಂಗದವರೂ ಈತ ಕನ್ನಡಿಗ ಎನ್ನುವುದಿಲ್ಲ. ನಮ್ಮ ನಟನೆಂದು ಗುರುತಿಸುತ್ತಾರೆ. ಅದು ಈ ಮಣ್ಣಿನಿಂದ ಬಂದ ಗುಣ ಎನ್ನುತ್ತಾರೆ ಅವರು.‘ಒಗ್ಗರಣೆ’ ಚಿತ್ರದಲ್ಲಿ ಅವರು ಎರಡು ಪೀಳಿಗೆಯ ಪ್ರೇಮಕತೆಯನ್ನು ಹೇಳುತ್ತಿದ್ದಾರೆ. ನಲವತ್ತರ ಆಸುಪಾಸಿನ ಜೋಡಿ ಒಂದಾದರೆ, ಯುವ ಜೋಡಿ ಮತ್ತೊಂದು. ಪ್ರೀತಿಯ ಕುರಿತ ಅವರ ಗ್ರಹಿಕೆಗಳನ್ನು, ಅವರ ಅವಶ್ಯಕತೆಗಳನ್ನು, ಅವರಲ್ಲಿನ ಪ್ರಶ್ನೆಗಳನ್ನು ಸಿನಿಮಾ ಬಿಂಬಿಸುತ್ತದೆಯಂತೆ. ಯಾವುದೇ ಒಂದು ಪ್ರೇಕ್ಷಕ ವರ್ಗವನ್ನು ಗುರಿಯಾಗಿರಿಸಿಕೊಂಡು ಸಿನಿಮಾ ಮಾಡುತ್ತಿಲ್ಲ. ಅದರಲ್ಲಿ ನಂಬಿಕೆಯೂ ಇಲ್ಲ. ಎಲ್ಲರೂ ಎಲ್ಲಾ ಸಿನಿಮಾಗಳನ್ನೂ ನೋಡುವುದಿಲ್ಲ. ಅವರಿಗೆ ಇಷ್ಟವಾದುದ್ದನ್ನು ನೋಡುತ್ತಾರೆ. ಅದು ಅವರವರ ಭಾವಕ್ಕೆ, ಅವರವರ ಭಕುತಿಗೆ ಬಿಟ್ಟ ವಿಚಾರ. ಎಲ್ಲರೂ ನೋಡುವಂಥ ಸಿನಿಮಾ ಮಾಡಬೇಕು ಎನ್ನುವುದಷ್ಟೇ ನನ್ನ ಬಯಕೆ ಎನ್ನುವ ಅವರು, ರಂಗಭೂಮಿಯತ್ತ ಮರಳಲು ಸಮಯ ಸಿಗುತ್ತಿಲ್ಲ ಎನ್ನುತ್ತಾರೆ. ಮಿಗಿಲಾಗಿ ಅವರಿಗೆ ಸಿನಿಮಾ ಮ್ಯಾಜಿಕಲ್‌ ಎನಿಸಿದೆ. ನನ್ನ ಹುಡುಕಾಟಗಳೇನಿದ್ದರೂ ಸಿನಿಮಾದಲ್ಲಿಯೇ. ಹೆಚ್ಚಾಗಿ ಖಳನಾಯಕನನ್ನು ನನ್ನಲ್ಲಿ ನೋಡುತ್ತಿದ್ದ ಚಿತ್ರರಂಗ ‘ಭಾಗ್‌ ಮಿಲ್ಖಾ ಭಾಗ್‌’ ನಂತರ ಇನ್ನೊಂದು ಆಯಾಮದ ನಟನನ್ನು ನನ್ನಲ್ಲಿ ನೋಡಿರಬಹುದು. ಹೀಗಾಗಿ ಅಂಥ ಸಕಾರಾತ್ಮಕ ವ್ಯಕ್ತಿತ್ವದ ಪಾತ್ರಗಳು ಮುಂದೆ ಹೆಚ್ಚು ಸಿಗಬಹುದು ಎನ್ನುತ್ತಾರೆ.ಚಿತ್ರ: ಕೆ.ಎನ್. ನಾಗೇಶ್‌ ಕುಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry