ಪ್ರಕೃತಿ ಮಾತೆಯ ವೈಭವ

ಭಾನುವಾರ, ಜೂಲೈ 21, 2019
27 °C

ಪ್ರಕೃತಿ ಮಾತೆಯ ವೈಭವ

Published:
Updated:

ಜೀವ ಜಗತ್ತನ್ನು ಪೋಷಿಸುತ್ತಿರುವ ಪ್ರಕೃತಿ ಮಾತೆಗೆ ಸರಿಸಾಟಿ ಯಾರಿಲ್ಲ. ಈಕೆ ತನ್ನ ಒಡಲೊಳಗೆ ಸೃಷ್ಟಿ, ಸ್ಥಿತಿ, ಲಯಗಳ ಬ್ರಹ್ಮಾಂಡವನ್ನು ಅಡಗಿಸಿಟ್ಟುಕೊಂಡವಳು. ಇಂಥ ಮಹಾನ್ ಪ್ರಕೃತಿಯ ಹಿರಿಮೆ, ಗರಿಮೆಗಳನ್ನು ದೃಶ್ಯ ಕಾವ್ಯವಾಗಿ ಸೆರೆ ಹಿಡಿದಿವೆ ಕಲಾವಿದ ಜಾನ್ ದೇವರಾಜ್‌ರ ಚಿತ್ರಗಳು.`ದೇವರಿಗಿಂತ ಪ್ರಕೃತಿ ದೊಡ್ಡದು~ ಎಂಬ ಧೇಯ್ಯದೊಂದಿಗೆ ದೇವರಾಜ್ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದಾರೆ.ಕಾಂಬೋಡಿಯದ `ಅಂಕೋರ್‌ವಾಟ್~ ನಲ್ಲಿರುವ ವಿಶ್ವದ ಅತ್ಯಂತ ಬೃಹತ್ ವಿಷ್ಣು ದೇವಾಲಯದ ಬಳಿಯ ಮರ, ಗಿಡಗಳ ಪ್ರಕೃತಿಯನ್ನು ಸೆರೆ ಹಿಡಿದು ಬಿತ್ತರಿಸಿದ್ದಾರೆ.

 

ಜೀರ್ಣಾವಸ್ಥೆಯಲ್ಲಿರುವ ದೇವಾಲಯವನ್ನು ನಾವು ರಕ್ಷಿಸುತ್ತೇವೆ ಎಂದು ಹೇಳುವಂತೆ ಕಾಣುವ ಮರದ ಬಿಳಿಲುಗಳ ನೆರಳು ಬೆಳಕಿನಾಟಕ್ಕೆ ಛಾಯಾರೂಪ ಕೊಟ್ಟಿದ್ದಾರೆ. ಈ ಮರದ ಕಾಂಡ ದೇವಾಲಯದ ಆಶ್ರಯಕ್ಕೆ ನಿಂತಿರುವುದು ಪ್ರಕೃತಿಯ ಶಕ್ತಿಯನ್ನು ಬಿಂಬಿಸುತ್ತಿದೆ. ಅಧ್ಯಾತ್ಮ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧವನ್ನು ಇದು ತೆರೆದಿಡುತ್ತದೆ.ಜಡತ್ವದ ದೇವರಿಗಿಂತ ಚಲನಶೀಲ ಪ್ರಕೃತಿ ಎಂಬ ಕಲ್ಪನೆ ಮನೋಜ್ಞವಾಗಿದೆ.ಅಲ್ಲದೇ ಸಮೀಪದ ಪವರ್‌ಪೋರ್ಲ್ ಬಳಿಯ ಬೊಂಬ್ಯಾಕ್ ಮರಗಳ ಪ್ರಾಕೃತಿಕ ಸೊಬಗನ್ನೂ ಚಿತ್ರಗಳಿಗೆ ಇಳಿಸಿದ್ದಾರೆ. ಮನುಕುಲ ಶಾಶ್ವತವಲ್ಲ ಪ್ರಕೃತಿ ಶಾಶ್ವತ ಎಂಬ ತತ್ವ ಇದರಲ್ಲಿ ಅಡಗಿದೆ. ಕಲ್ಲು ಕಟ್ಟಡಗಳ, ನಿರ್ಜೀವ ಮಹಲುಗಳಿಗಿಂತ ನಾನು ಸುಂದರಿ ಎಂಬಂತೆ ಬಳುಕಿ ನಿಂತಿರುವ ಬೇರು, ಕಾಂಡಗಳನ್ನು ಇಲ್ಲಿ ಅಮೋಘವಾಗಿ ಸೆರೆ ಹಿಡಿಯಲಾಗಿದೆ.ಪ್ರಕೃತಿಯ ವರ್ಣನೆಗೆ, ಶಕ್ತಿಗಳಿಗೆ ಮಾತ್ರ ಇಲ್ಲಿನ ಚಿತ್ರಗಳು ಸೀಮಿತವಾಗಿಲ್ಲ. ಅಧ್ಯಾತ್ಮ ಮತ್ತು ಪ್ರಕೃತಿ ನಡುವೆಯೂ ಸಂಬಂಧವಿದೆ ಎನ್ನುವ ಆಶಯ ಹೊತ್ತಿವೆ.ಛಾಯಾಚಿತ್ರಗಳ ಮೇಲೆ ಮೂಡಿರುವ ಚಿತ್ರಕಲೆ ವೈವಿಧ್ಯ, ವೈಭವವನ್ನು ಹೆಚ್ಚಿಸಿದೆ.

 ಬೀಜ ಸೃಷ್ಟಿಯ ಮೂಲ ಎಂಬ ಹಿನ್ನೆಲೆಯಲ್ಲಿ ಬೀಜದ ಉಂಡೆಗಳನ್ನು ಸಾರ್ವಜನಿಕರಿಗೆ ವಿತರಿಸುವುದು ನಮ್ಮ ಮುಂದಿನ ಯೋಜನೆ ಎನ್ನುವ ದೇವರಾಜ್ ಮಾತುಗಳು ಆಡಂ ಮತ್ತು ಈವ್ ಮನುಕುಲಕ್ಕೆ ಬುನಾದಿ ಹಾಕಿದ್ದನ್ನು ನೆನಪಿಸುತ್ತದೆ.ನಿಸರ್ಗ ಉಳಿಸಿ, ಬೆಳೆಸಿ, ಆರಾಧಿಸಿ ಎನ್ನುವ ಈ ಛಾಯಾಚಿತ್ರಗಳ ಪ್ರದರ್ಶನ ಬುಧವಾರದವರೆಗೆ ನಡೆಯಲಿದೆ. ಸ್ಥಳ: ಕೆಎಚ್ ಕಲಾಸೌಧ, ಹನುಮಂತನಗರ ರಾಮಾಂಜನೇಯ ಗುಡ್ಡದ ಬಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry