ಶುಕ್ರವಾರ, ನವೆಂಬರ್ 15, 2019
22 °C

ಪ್ರಖರ ಬಿಸಿಲಿಗೆ ತತ್ತರಿಸಿದ ಜನ

Published:
Updated:

ಯಾದಗಿರಿ: ಒಂದೆಡೆ ಬಿಸಿಲಿನ ಝಳ, ಇನ್ನೊಂದು ಕಡೆ ಚುನಾವಣೆಯ ಕಾವು. ಏಪ್ರಿಲ್ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ಪ್ರಖರತೆ ತೀವ್ರವಾಗಿದ್ದು, ಜನರು ಬಿಸಿಲಿನ ಧಗೆ ನಿವಾರಿಸಿಕೊಳ್ಳಲು ನಾನಾ ಕಸರತ್ತು ಮಾಡುವಂತಾಗಿದೆ.ಬಿಸಿಲಿನಿಂದ ತಣಿಸಿಕೊಳ್ಳಲು ಬಾಲಕರು ಹಾಗೂ ಯುವಕರು ತೆರೆದ ಬಾವಿಗಳಲ್ಲಿ, ನದಿಗಳಲ್ಲಿ ಈಜಾಡುವುದು ಇದೀಗ ಸಾಮಾನ್ಯವಾಗುತ್ತಿದೆ. ಬೆಳಿಗ್ಗೆ ಏಳು ಗಂಟೆಗೆ ಸ್ನಾನ ಮಾಡಿ ನಿಂತರೆ ಧಗೆಯಿಂದಾಗಿ ದೇಹದಿಂದ ಬೆವರ ಹನಿಗಳು ಆರಂಭವಾಗುತ್ತವೆ. ಬೆಳಿಗ್ಗೆ ಹತ್ತು ಗಂಟೆಯಾದರೆ ಸಾಕು ಜನರು ಮನೆ ಸೇರಿಕೊಳ್ಳುವಂತಾಗಿದೆ. ಮನೆಯಲ್ಲಿರುವ ಯಾವುದೇ ವಸ್ತುವನ್ನು ಮುಟ್ಟಿದರೂ ಬೆಂಕಿಯನ್ನು ಮುಟ್ಟಿದ ಅನುಭವ ಆಗುತ್ತದೆ. ಮನೆಯಲ್ಲಿ ಫ್ಯಾನ್ ಹಾಕಿದರೆ ಅದರಿಂದಲೂ ಬಿಸಿಗಾಳಿ ಸೂಸುತ್ತಿದೆ.ಇನ್ನೂ ಟೀನ್ ಶೆಡ್‌ನಲ್ಲಿ ಜೀವನವನ್ನು ಸಾಗಿಸುವ ಬಡ ಕುಟುಂಬದವರ ಬದುಕು ಬಾಡಿ ಹೋಗುತ್ತಿದೆ. ಪ್ರಖರವಾದ ಬಿಸಿಲಿಗೆ ಟೀನ್‌ಗಳು ಸುಡುತ್ತಿವೆ. ಅದರಿಂದ ಮನೆಯಲ್ಲಿ ಧಗೆ ಆರಂಭವಾಗಿ ಮನೆಯಲ್ಲೂ ಕೂಡಲು ಆಗುತ್ತಿಲ್ಲ. ಇಂತಹ ಜನರು ಮನೆಯನ್ನು ಬಿಟ್ಟು ಅನತಿ ದೂರದಲ್ಲಿರುವ ಗಿಡಗಳ ಕೆಳಗೆ ವಿಶ್ರಾಂತಿ ಪಡೆಯುತ್ತಾರೆ.ರೈತರು ತಮ್ಮ ಹೊಲಗಳಿಗೆ ನೇಗಿಲು ಹೊಡೆಯಲು ಬೆಳಿಗ್ಗೆ ಆರು ಗಂಟೆಗೆ ಹೋಗಿ, ಒಂಬತ್ತು ಗಂಟೆಯ ಒಳಗೆ ಮನೆಗೆ ಹಿಂದಿರುಗುತ್ತಾರೆ. “ಹಾ ಅನ್ನುದರೊಳಗೆ ಎತ್ತುಗಳು ಬಿಸಿಲಿಗಿ ತೇಗತಾವ. ಕೆಲಸ ಸಾಗದಿಲ್ಲ. ಅದಕ್ಕ ನಸುಕನ್ಯಾಗ ಹೊಲಕ ಹೋಗಿ ಬ್ಯಾಸಗಿ ಗಳೆ ಹೋಡಿತಿವಿ. ಅಬ್ಬಾ! ಇಂತಹ ಬಿಸಿಲ್ ನಾ ಸಣ್ಣವನಿದ್ದಾಗಿನಿಂದ್ ನೋಡಿಲ್ಲ” ಎಂದು ರೈತ ಭರಮಣ್ಣ ಹೇಳುತ್ತಾರೆ.ಬೆಳಿಗ್ಗೆ ಹತ್ತು ಗಂಟೆಯಿಂದ  ಸಂಜೆ ಏಳು ಗಂಟೆಯವರೆಗೂ ಬಿಸಿಯಾದ ಗಾಳಿ ಬೀಸುತ್ತಿದೆ. ಅದರಲ್ಲಿ ಕೈ ಕೊಡುವ ವಿದ್ಯುತ್‌ನಿಂದಾಗಿ ಸಾರ್ವಜನಿಕರು ತತ್ತರಿಸಿದ್ದಾರೆ.ಚಿಕ್ಕ ಬಾಲಕರು ಹಾಗೂ ಯುವಕರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಗ್ರಾಮದ ಅನತಿ ದೂರದಲ್ಲಿರುವ ನದಿಗಳಲ್ಲಿ, ತೆರೆದ ಬಾವಿಗಳಲ್ಲಿ, ಹೊಂಡಗಳಲ್ಲಿ, ಅಥವಾ ತೋಟದ ಬಾವಿಗಳಲ್ಲಿ ಈಜಾಡುವುದು ಸಾಮಾನ್ಯವಾಗಿದೆ.ಹವಾಮಾನ ಇಲಾಖೆ ವರದಿ ಪ್ರಕಾರ ಈಗಾಗಲೇ 42 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನವಿದೆ. ಕಳೆದ ವರ್ಷ ಏಪ್ರಿಲ್ ತಿಂಗಳ ತಾಪಮಾನಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ತಾಪಮಾನ ಹೆಚ್ಚಿಗೆ ಇದೆ ಎಂದು ಹೇಳುತ್ತವೆ.

ಪ್ರತಿಕ್ರಿಯಿಸಿ (+)