ಮಂಗಳವಾರ, ಮೇ 18, 2021
31 °C

`ಪ್ರಗತಿಗೆ ಗ್ರಾಮಸಭೆಯಲ್ಲಿ ಪಾಲ್ಗೊಳ್ಳಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ಗ್ರಾಮದ ಸರ್ವರೂ ಗ್ರಾಮಸಭೆಯಲ್ಲಿ ಸಮಾವೇಶಗೊಳ್ಳುವುದರಿಂದ ಗ್ರಾಮದ ಪ್ರಗತಿ ಸಾಧ್ಯ ಎಂದು ಗ್ರಾಮಸಭೆ ನೋಡಲ್ ಅಧಿಕಾರಿ ಮಂಜುನಾಥ ಕನ್ನಾರಿ ತಿಳಿಸಿದರು.ಕಂಪ್ಲಿ ಸಮೀಪದ ನಂ.10 ಮುದ್ದಾಪುರ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ `ಗ್ರಾಮಸಭೆ'ಯಲ್ಲಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳುವಂತೆ ಜನತೆಯಲ್ಲಿ ಮನವಿ ಮಾಡಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಳ್ಳಾರಿ ಮಾರುತಿ ಮಾತನಾಡಿ, ಸಾರ್ವಜನಿಕರು ಸಕಾಲಕ್ಕೆ ತೆರಿಗೆ ಪಾವತಿಸಿದಲ್ಲಿ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ ಎಂದರು.ಮುಖ್ಯಗುರು ಜೆ. ಸೋಮಪ್ಪ ಮಾತನಾಡಿ, ಗ್ರಾಮದ ಶಾಲೆಗೆ ಮತ್ತೊಂದು ಶೌಚಾಲಯ ನಿರ್ಮಿಸಲು, ಯಲ್ಲಮ್ಮನ ಕ್ಯಾಂಪ್ ಸರ್ಕಾರಿ ಶಾಲೆಗೆ ವಿದ್ಯುತ್ ಸೌಕರ್ಯ, ಬೆಳಗೋಡುಹಾಳು ಸರ್ಕಾರಿ ಶಾಲೆಗೆ ಕಾಂಪೌಂಡ್ ಗೋಡೆ, ಕೊರತೆಯಿರುವ ಶಿಕ್ಷಕರ ಭರ್ತಿಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.ರೇಷ್ಮೆ ಇಲಾಖೆ ವಿ.ಸಿ. ಕಲಾಲ್ ಬಂಡಿ ಮಾತನಾಡಿ, ರೇಷ್ಮೆ ನಾಟಿ ಮಾಡಿ ಚಿಗುರು ಬಂದಾಗ ಎಕರೆಗೆ ರೂ. 4125, ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ರೂ. 5000 ನೀಡಲಾಗುವುದು. ರೇಷ್ಮೆ ಉಪಕರಣಗಳ ಖರೀದಿಗೆ, ಶೆಡ್ ನಿರ್ಮಾಣಕ್ಕೆ ಸಹಾಯದನ ಸೇರಿದಂತೆ ಇಲಾಖೆ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.ಆರೋಗ್ಯ ಮತ್ತು ಕುಟುಂಬ ಇಲಾಖೆ ಜಗಮತಿ, ಲೋಕೋಪಯೋಗಿ ಇಲಾಖೆಯ ಪ್ರಾಣೇಶ್, ನೀರಾವರಿ ಇಲಾಖೆಯ ರವಿಬಾಬು, ಅಮರೇಶ್ವರ, ತೋಟಗಾರಿಕೆ ಇಲಾಖೆಯ ಸೈಯ್ಯದ್ ಮೆಹಬೂಬ್, ಪಶು ಇಲಾಖೆ ಶರಣ ಬಸವರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ನಸೀಮಾ ಬಾನು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.ಸರ್ಕಾರಿ ಶಾಲೆಗೆ ಕಳುಹಿಸಿ: ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಇಂದ್ರಿಪಿ ಚನ್ನಮಲ್ಲಿಕಾರ್ಜುನ ಮಾತನಾಡಿ,  ಸರ್ಕಾರಿ ನೌಕರರಿಗೆ ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ ಬೇಕಿಲ್ಲ. ಸರ್ಕಾರಿ ನೌಕರಿ ಮಾತ್ರ ಬೇಕಾಗಿದೆ.ಇನ್ನಾದರೂ ಸರ್ಕಾರಿ ನೌಕರರು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಾಮ ಪಂಚಾಯ್ತಿ ಪಿಡಿಒ ಬೀರಲಿಂಗಪ್ಪ, ಉಪಾಧ್ಯಕ್ಷೆ ಯಂಕಮ್ಮ, ಸದಸ್ಯರಾದ ಮಠದ ಮಲ್ಲಿಕಾರ್ಜುನ, ವಿಪ್ರದ ಭೀಮೇಶ್ ಸೇರಿ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.