ಪ್ರಗತಿಗೆ ನಾಂದಿ

7

ಪ್ರಗತಿಗೆ ನಾಂದಿ

Published:
Updated:

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆ ಅಂಗೀಕಾರ ನೀಡುವುದರೊಂದಿಗೆ ಈ ಭಾಗದ ಜನತೆಯಲ್ಲಿ ಹರ್ಷದ ಹೊನಲು ಹರಿದಿದೆ. ಹಿಂದುಳಿದ ಪ್ರದೇಶವೆಂದ ತಕ್ಷಣ ಹೈದರಾಬಾದ್ ಕರ್ನಾಟಕ ಪ್ರದೇಶವೇ ಕಣ್ಮುಂದೆ ಬರುವಷ್ಟರ ಮಟ್ಟಿಗೆ ಈ ಭಾಗ ಅಭಿವೃದ್ಧಿಯಿಂದ ದೂರ ಉಳಿದಿದೆ.ಈ ಪ್ರದೇಶದ ಜನಪ್ರತಿನಿಧಿಗಳೇ ಸಚಿವರಾಗಿದ್ದರು; ಮುಖ್ಯಮಂತ್ರಿಗಳೂ ಆದರು. ಆದರೆ ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿ ಉಳಿಯಿತು. ಸೌಲಭ್ಯದಿಂದ ವಂಚಿತಗೊಂಡ ಜನತೆ ವರ್ಷಗಟ್ಟಲೇ ಸಹನೆಯಿಂದ ಕಾದುಕಾದು ಕೊನೆಗೆ ಹೋರಾಟಕ್ಕೆ ಇಳಿದರು.ಮೂವತ್ತು ವರ್ಷಗಳ ಹಿಂದೆ ಸಣ್ಣ ದನಿಯಾಗಿದ್ದ 371ನೇ ಕಲಂ ತಿದ್ದುಪಡಿ ಬೇಡಿಕೆಯು ಕೊನೆಗೆ ದೊಡ್ಡ ಪ್ರತಿಭಟನೆಯಾಗಿ ಮಾರ್ಪಟ್ಟಿತು. ರಾಜ್ಯ ಸರ್ಕಾರ ವಿಧಾನಮಂಡಲದಲ್ಲಿ 371ನೇ ಕಲಂ ತಿದ್ದುಪಡಿಗೆ ಆಗ್ರಹಿಸಿ ಒಮ್ಮತದ ನಿರ್ಣಯ ಅಂಗೀಕರಿಸಿತು. ಕೊನೆಗೂ ಸ್ಪಂದಿಸಿದ ಕೇಂದ್ರ ಸರ್ಕಾರ, ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿದೆ. ಗಮನಿಸಬೇಕಾದ ಸಂಗತಿ ಎಂದರೆ, ಸದನದಲ್ಲಿ ಹಾಜರಿದ್ದ ಎಲ್ಲ ಸದಸ್ಯರೂ ಒಮ್ಮತದಿಂದ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.371ನೇ ಕಲಂ ತಿದ್ದುಪಡಿಯಿಂದ ಹಲವು ಸವಲತ್ತುಗಳು ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳ ಜನರಿಗೆ ಲಭ್ಯವಾಗಲಿವೆ. ತೆಲಂಗಾಣ ಮಾದರಿಯಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಸಿಕ್ಕಿದ್ದರೆ, ವಿದರ್ಭ ಪ್ಯಾಕೇಜ್‌ನಲ್ಲಿ ಅಭಿವೃದ್ಧಿಗೆ ಹೆಚ್ಚು ಅನುದಾನ ಮೀಸಲಿಡಲಾಗಿತ್ತು. ಪ್ರಸ್ತುತ ಹೈ-ಕ ಭಾಗಕ್ಕೆ 371ನೇ ಕಲಂ (ಜೆ) ತಿದ್ದುಪಡಿ ಮಸೂದೆಯಿಂದಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಜತೆಗೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಹರಿದುಬರಲಿದೆ.ಹಾಗೆಂದು ಈ ಎಲ್ಲ ಸೌಲಭ್ಯಗಳು ಶೀಘ್ರದಲ್ಲೇ ಜನತೆಯ ಕೈಗೆಟುಕಲಿವೆ ಎಂದೇನಿಲ್ಲ. ಸಂಸತ್ತಿನಲ್ಲಿ ಅಂಗೀಕಾರಗೊಂಡ ಮಸೂದೆ ಕಾಯ್ದೆಯಾಗುವವರೆಗೆ ಸಾಗಬೇಕಾದ ದಾರಿ ಸಾಕಷ್ಟು ದೂರ ಇದೆ. ಈ ಮಸೂದೆಯನ್ನು ಈಗ ಎಲ್ಲ 28 ರಾಜ್ಯಗಳಿಗೆ ಕಳಿಸಬೇಕು. ಈ ಪೈಕಿ ಅರ್ಧಕ್ಕಿಂತ ಹೆಚ್ಚು, ಅಂದರೆ ಕನಿಷ್ಠ 15 ರಾಜ್ಯಗಳು, ಮಸೂದೆಗೆ ಅಂಗೀಕಾರ ನೀಡಬೇಕು. ಬಳಿಕ ಅದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ, ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿ ಅನುಷ್ಠಾನ ಮಾಡಬೇಕು.ಒಂದು ವೇಳೆ ಅರ್ಧಕ್ಕಿಂತ ಹೆಚ್ಚು ರಾಜ್ಯಗಳು ಮಸೂದೆಗೆ ಅಂಗೀಕಾರ ನೀಡದೇ ಹೋದರೆ ಮತ್ತೆ ಅದನ್ನು ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕರಿಸಿ ರಾಜ್ಯಗಳಿಗೆ ಕಳಿಸುವ ಪ್ರಕ್ರಿಯೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಮಸೂದೆಯ ಒಂದು ಹಂತವಷ್ಟೇ ಈಗ ಪೂರ್ಣಗೊಂಡಿದೆ. ಬೇರೆ ರಾಜ್ಯಗಳು ಯಾವುದೋ ಕಾರಣಕ್ಕೆ ತಕರಾರು ಮಾಡಿದರೂ ಅಚ್ಚರಿ ಇಲ್ಲ. ಅಂಥ ಸಂದರ್ಭದಲ್ಲಿ ಆ ರಾಜ್ಯಗಳ ಮನವೊಲಿಸಲು ಕಾರ್ಯತಂತ್ರಗಳನ್ನು ರೂಪಿಸಿ, ಮಸೂದೆಗೆ ಒಪ್ಪಿಗೆ ದೊರಕಿಸಿಕೊಡುವ ಹೊಣೆ ರಾಜ್ಯಸರ್ಕಾರದ್ದು. ವಿರೋಧಪಕ್ಷಗಳು ಇದಕ್ಕೆ ಸಹಕಾರ ನೀಡಿ ಹೈದರಾಬಾದ್ ಕರ್ನಾಟಕದ ಜನತೆಯ ಕನಸು ನನಸಾಗುವಂತೆ ನೋಡಿಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry