ಪ್ರಗತಿಗೆ ಮಣೆ; ನೀಗದ ನೀರಿನ ಬವಣೆ

7

ಪ್ರಗತಿಗೆ ಮಣೆ; ನೀಗದ ನೀರಿನ ಬವಣೆ

Published:
Updated:
ಪ್ರಗತಿಗೆ ಮಣೆ; ನೀಗದ ನೀರಿನ ಬವಣೆ

ಚನ್ನಗಿರಿ: ಪಟ್ಟಣ ಪಂಚಾಯ್ತಿ ಐದು ವರ್ಷಗಳ ಅವಧಿಯಲ್ಲಿ ಗಮನಾರ್ಹವಾಗಿ ಅಭಿವೃದ್ಧಿಯ ಕಡೆಗೆ ದಾಪುಗಾಲು ಇಟ್ಟದೆ. ಆದರೆ, ಇನ್ನೂ ಹಲವು ಸಮಸ್ಯೆಗಳ ಸರಮಾಲೆ ಪಟ್ಟಣವನ್ನು ಕಾಡುತ್ತಿದೆ. ಐದು ವರ್ಷಗಳ ಹಿಂದೆ ಸಂಪೂರ್ಣವಾಗಿ ಅಭಿವೃದ್ಧಿ ಶೂನ್ಯವಾದ ಈ ಪಟ್ಟಣ ಈಗ ಶೇ 50ರಷ್ಟು ಅಭಿವೃದ್ಧಿ ಕಂಡಿದೆ. ಎಸ್‌ಎಫ್‌ಸಿ ಮುಕ್ತ ನಿಧಿಯಲ್ಲಿ 2008-09ರಲ್ಲಿ ರೂ. 2.33 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸಂಪೂರ್ಣ ಬಳಕೆಯಾಗಿದೆ. 2009-10ರಲ್ಲಿ ರೂ. 1.96 ಕೋಟಿ, 2010-11ರಲ್ಲಿ ರೂ. 1.65 ಕೋಟಿ, 2011-12ರಲ್ಲಿ ರೂ. 1.96 ಕೋಟಿ ಹಾಗೂ 2012- 13ರಲ್ಲಿ ರೂ. 1.03 ಕೋಟಿ ಸೇರಿದಂತೆ ಒಟ್ಟು ರೂ. 8.94 ಕೋಟಿ ಸಂಪೂರ್ಣವಾಗಿ ಬಳಕೆಯಾಗಿದೆ.ಎಸ್‌ಎಫ್‌ಸಿಯ  ವಿಶೇಷ  ಅನುದಾನ 2008-09ರಲ್ಲಿ ರೂ. 1.75 ಲಕ್ಷ ಬಿಡುಗಡೆ ಆಗಿದ್ದು,  ಉಳಿದ ನಾಲ್ಕು ವರ್ಷಗಳಲ್ಲಿ ಅನುದಾನ ಬಿಡುಗಡೆ ಆಗಿಲ್ಲ. ಎಸ್‌ಎಫ್‌ಸಿ ಯೋಜನೆ ಅಡಿ ಕುಡಿಯುವ ನೀರಿಗೆ 2012-13ರಲ್ಲಿ ರೂ. 20 ಲಕ್ಷ ಬಿಡುಗಡೆಯಾಗಿದೆ.

ವಿದ್ಯುತ್ ಪೂರೈಕೆಗಾಗಿ ಕಳೆದ ಐದು ವರ್ಷಗಳಲ್ಲಿ ರೂ. 1.23 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದನ್ನು ಬೆಸ್ಕಾಂ ಇಲಾಖೆಗೆ ಪಾವತಿಸಲಾಗಿದೆ. 13ನೇ ಹಣಕಾಸು ಯೋಜನೆಯಲ್ಲಿ 2010-11ರಲ್ಲಿ ರೂ. 39.90 ಲಕ್ಷ, 2011-12ರಲ್ಲಿ  ರೂ. 78.02 ಲಕ್ಷ, 2012-13ರಲ್ಲಿ ರೂ. 38.89 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ರೂ.  52.14 ಲಕ್ಷ ಬಳಕೆ ಮಾಡಿಲ್ಲ. ಹಲವು ಕಾಮಗಾರಿ ಅಪೂರ್ಣ ಆಗಿವೆ. ಯುಐಡಿಎಸ್‌ಎಂಟಿ ಯೋಜನೆಯಡಿ 2011-12ರಲ್ಲಿ  ರೂ. 5.58 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಯೋಜನೆ ಅಡಿ ಮಳಿಗೆಗಳನ್ನು ನಿರ್ಮಿಸಿದ್ದು, ಈ ಮಳಿಗೆಗಳನ್ನು ಯಾರೂ ಬಾಡಿಗೆಗೆ ಪಡೆಯದೇ ಇರುವುದರಿಂದ ಯಾವುದೇ ಪ್ರಯೋಜನವಾಗದೇ ಮಳಿಗೆಗಳು ಶಿಥಿಲಗೊಳ್ಳುತ್ತಿವೆ.ಸಿಎಂಎಸ್‌ಎಂಟಿಡಿಪಿ ಯೋಜನೆ ಯಲ್ಲಿ 2009-10ರಲ್ಲಿ ರೂ. 5 ಕೋಟಿ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ಪಟ್ಟಣದ ಆಯ್ದ ವಾರ್ಡ್‌ಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಪಟ್ಟಣದ ಒಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ 1.6 ಕಿ.ಮೀ ಉದ್ದಕ್ಕೂ ಚತುಷ್ಪಥ ರಸ್ತೆ ನಿರ್ಮಿಸಿ ಮಿಡಿಯಾನ್, ವಿದ್ಯುತ್ ದೀಪ ಹಾಗೂ ಮಿಡಿಯಾನ್ ಮಧ್ಯದಲ್ಲಿ ಬಣ್ಣ ಬಣ್ಣದ ಹೂವಿನ ಗಿಡಗಳನ್ನು ಹಾಕಿ ಪಟ್ಟಣದ ಸೌಂದರ್ಯ ಹೆಚ್ಚಿಸಲಾಗಿದೆ. 2012-13ರಲ್ಲಿ ರೂ.  5 ಕೋಟಿ ಅನುದಾನ ಕೊಡಲು ಸರ್ಕಾರ ಘೋಷಣೆ ಮಾಡಿದ್ದು, ಇನ್ನು ಅನುದಾನ ಬಿಡುಗಡೆಯಾಗಿಲ್ಲ.ಶೇ 22.75 ನಿಧಿಯಲ್ಲಿ ಐದು ವರ್ಷಗಳಲ್ಲಿ ರೂ. 1.55 ಕೋಟಿ ಅನುದಾನ ಇದ್ದು, ಇದರಲ್ಲಿ ರೂ. 1.33 ಕೋಟಿ ಅನುದಾನವನ್ನು ಬಳಕೆ ಮಾಡಿ, ಇನ್ನು ರೂ.  23.57 ಲಕ್ಷ ಹಣ ಬಳಕೆಯಾಗದೇ ಉಳಿದಿದೆ. ಶೇ 7.25ರ ನಿಧಿಯಲ್ಲಿ ಇಟ್ಟು ರೂ. 31.10 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಸಂಪೂರ್ಣವಾಗಿ ಬಳಕೆಯಾಗಿದೆ. ಶೇ 3ರ ನಿಧಿಯಲ್ಲಿ ರೂ.  9.51 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಎಲ್ಲಾ ಹಣ ಬಳಕೆಯಾಗಿದೆ.ಇಷ್ಟೆಲ್ಲಾ ಅನುದಾನ ಬಿಡುಗಡೆಯಾದರೂ ಪಟ್ಟಣದಲ್ಲಿ ಮೂಲಸೌಲಭ್ಯ ಒದಗಿಸುವಲ್ಲಿ ಪಟ್ಟಣ ಪಂಚಾಯ್ತಿ ವಿಫಲವಾಗಿದೆ. ಕುಡಿಯುವ ನೀರಿನ ಸಮಸ್ಯೆ ಭೂತದಂತೆ ಕಾಡುತ್ತಿದೆ. ಪ್ರಸ್ತುತ ವಾರಕ್ಕೊಮ್ಮೆ ಹಿರೇಮಳಲಿ ಬಳಿ ಇರುವ ಭದ್ರಾ ಕಾಲುವೆಯಿಂದ ನೀರು ಸಂಗ್ರಹಿಸಿ ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗಾಗಿ ಸೂಳೆಕೆರೆಯಿಂದ ಚನ್ನಗಿರಿ ಸೇರಿದಂತೆ 80 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ರೂ. 77.80 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ. ಪಟ್ಟಣದ 3, 5, 8, 9, 10, 13ನೇ ವಾರ್ಡ್‌ಗಳಲ್ಲಿ ಸಮಸ್ಯೆ ಹೆಚ್ಚಾಗಿದ್ದು, ಚರಂಡಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಆಗಬೇಕಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಚರಂಡಿಗಳು ತುಂಬಿ ತುಳುಕಾಡುತ್ತಿವೆ.ಸ್ವಚ್ಛತೆ ಕಾಪಾಡಲು ಪಟ್ಟಣ ಪಂಚಾಯ್ತಿ ಸಂಪೂರ್ಣವಾಗಿ ವಿಫಲವಾಗಿದೆ. ಎರಡು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ನಾಲ್ಕು ಎಕರೆ ಪ್ರದೇಶದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ 280ಕ್ಕಿಂತ ಹೆಚ್ಚು ಆಶ್ರಯ ಮನೆಗಳನ್ನು ನಿರ್ಮಿಸಲು ಒಂದೂವರೆ ವರ್ಷದ ಹಿಂದೆ ಆರಂಭಗೊಂಡ ಕಾಮಗಾರಿ ಮೂರ‌್ನಾಲ್ಕು ತಿಂಗಳಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry