ಪ್ರಗತಿಗೆ ಸಹಭಾಗಿತ್ವ ಅಗತ್ಯ: ಮೀನಾ

7

ಪ್ರಗತಿಗೆ ಸಹಭಾಗಿತ್ವ ಅಗತ್ಯ: ಮೀನಾ

Published:
Updated:

ಗುಲ್ಬರ್ಗ: ಸಾರ್ವಜನಿಕ ಸಹಭಾಗಿತ್ವ ಇಲ್ಲದೇ ಹೋದರೆ ಸರ್ಕಾರದ ಯೋಜನೆ ಸಫಲವಾಗುವುದು ಅಸಾಧ್ಯ ಎಂದ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಅಭಿಪ್ರಾಯಪಟ್ಟರು.“ಅದೆಷ್ಟೇ ಒಳ್ಳೆಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದರೂ, ಅಂತಿಮವಾಗಿ ಅದರಿಂದ ಲಾಭ ಪಡೆಯುವ ಜನತೆಯು ಯೋಜನೆ ಜಾರಿ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಹಾಗೆ ಆದಾಗಲಷ್ಟೇ ಯೋಜನೆ ಸಾರ್ಥಕವಾಗುತ್ತದೆ” ಎಂದ ಅವರು ನುಡಿದರು.ಕೃಷಿ ಇಲಾಖೆಯು `ಅಪ್ನಾ ದೇಶ್~ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಹಳೆಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಕೃಷಿ ಕ್ಷೇತ್ರ- ಹೊಸ ಆಲೋಚನೆ~ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

“ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೂರಾರು ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ.ಆದರೆ ಅವು ಎಷ್ಟರ ಮಟ್ಟಿಗೆ ರೈತರನ್ನು ತಲುಪುತ್ತಿವೆ ಎಂಬುದು ಇನ್ನೂ ಖಚಿತವಾಗುತ್ತಿಲ್ಲ. ಇದಕ್ಕೆ ಕಾರಣವೆಂದರೆ, ಫಲಾನುಭವಿಗಳ ಸಹಭಾಗಿತ್ವದ ಕೊರತೆ. ಎಲ್ಲಿಯವರೆಗೆ ಜನರು ಯೋಜನೆಗಳ ಜಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿರೀಕ್ಷಿತ ಪ್ರಗತಿ ಸಾಧಿಸುವುದು ಅಸಾಧ್ಯ” ಎಂದು ಅವರು ಹೇಳಿದರು. ತಾವು ಲಿಂಗಸುಗೂರಿನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುವಾಗ ಹಳ್ಳಿಯೊಂದರ ಕುಡಿಯುವ ನೀರಿನ ಸಮಸ್ಯೆಯನ್ನು ಸ್ಥಳೀಯರ ಸಹಭಾಗಿತ್ವದಿಂದಲೇ ಯಶಸ್ವಿಯಾಗಿ ಪರಿಹರಿಸಿದ ನಿದರ್ಶನವನ್ನು ಅವರು ವಿವರಿಸಿದರು.ಸಂವಾದದಲ್ಲಿ ಹಲವು ರೈತರು ಸಲಹೆ- ಸೂಚನೆ ನೀಡಿದರು. `ರೈತರಿಗೆ ಮಧ್ಯವರ್ತಿಗಳಿಂದ ಹೆಚ್ಚು ನಷ್ಟ ಸಂಭವಿಸುತ್ತಿದ್ದು, ಇದನ್ನು ತಡೆಯಬೇಕು~ ಎಂದು ರೈತನೊಬ್ಬ ಸಲಹೆ ನೀಡಿದರೆ, ಗರೂರು ಗ್ರಾಮದ ಪ್ರಗತಿಪರ ಕೃಷಿಕ ಶಾಮರಾವ ಪಾಟೀಲ `ಅರಣ್ಯ, ತೋಟಗಾರಿಕೆ, ಕೃಷಿ ಇಲಾಖೆಗಳು ಇನ್ನಷ್ಟು ಸಮನ್ವಯದಿಂದ ಕೆಲಸ ಮಾಡುವ ಅಗತ್ಯವಿದೆ~ ಎಂದರು.ಬಯಲುಸೀಮೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶನ ಸುಬ್ಬಣ್ಣ ಬಿರಾದಾರ, `ಕೈಗಾರಿಕೆ ಸ್ಥಾಪನೆಗೆಂದು ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಳ್ಳುತ್ತ ಹೋದರೆ ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆಗೆ ಹೊಡೆತ ಬೀಳಲಿದೆ~ ಎಂದು ಆತಂಕ ವ್ಯಕ್ತಪಡಿಸಿದರು.

 

“ಬಂಜರು ಜಮೀನಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು. ತೊಗರಿ, ಸಜ್ಜೆ ಕಟಾವು ಮಾಡಿದ ಬಳಿಕ ಉಳಿಯುವ ಟನ್‌ಗಟ್ಟಲೇ ಜೈವಿಕ ತ್ಯಾಜ್ಯವನ್ನು ಸುಡದೇ, ಸದ್ಬಳಕೆ ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ಮಾಡಿದರು.ಜಂಟಿ ಕೃಷಿ ನಿರ್ದೇಶಕ ಐ.ಇ.ಬಳತ್ಕರ್, ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ, `ಅಪ್ನಾ ದೇಶ್~ ಕಾರ್ಯದರ್ಶಿ ಬಸವರಾಜ ಇತರರು ಉಪಸ್ಥಿತರಿದ್ದರು. ಕೃಷಿ ಇಲಾಖೆ ಅಧಿಕಾರಿಗಳು, ರೈತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry