ಪ್ರಗತಿಪರ ಸಂಘಟನೆಗಳ ಒಕ್ಕೂಟದ ಧರಣಿ

ಬುಧವಾರ, ಜೂಲೈ 17, 2019
29 °C
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಅವ್ಯವಸ್ಥೆ

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಧರಣಿ

Published:
Updated:

ಆನೇಕಲ್: `ತಾಲ್ಲೂಕಿನ ಯಲ್ಲಮ್ಮನ ಪಾಳ್ಯ ಗ್ರಾಮದ ಬಳಿಯಿರುವ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಮೂಲಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತ್ದ್ದಿದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು' ಎಂದು  ಪ್ರಜಾ ವಿಮೋಚನಾ ಚಳವಳಿ (ಮಾನವತಾವಾದ) ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್ ಒತ್ತಾಯಿಸಿದರು.ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಆವರಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಸರ್ಕಾರಿ ವಸತಿ ಶಾಲೆಗಳಲ್ಲಿ ಅವ್ಯಸ್ಥೆ ತಾಂಡವಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ' ಎಂದರು.`ವಸತಿ ಶಾಲೆಗಳನ್ನು ನಡೆಸಲು ಸರ್ಕಾರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತಿದೆ. ಆದರೆ ಶಾಲೆಯ ಆಡಳಿತ ಮಂಡಳಿಗಳು ಮಕ್ಕಳಿಗೆ ಮೂಲಸೌಕರ್ಯ ಕಲ್ಪಿಸದೆ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ' ಎಂದು ಅವರು ಆರೋಪಿಸಿದರು.`ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಇಂತಹ ವಸತಿ ಶಾಲೆಯ ಆಡಳಿತ ಮಂಡಳಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಮುಂದಿನ 15 ದಿನಗಳಲ್ಲಿ ವಸತಿ ಶಾಲೆಯ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು' ಎಂದು ಅವರು ಎಚ್ಚರಿಕೆ ನೀಡಿದರು.ಸರ್ವಜನ ಸಮಾಜ ವೇದಿಕೆ ರಾಜ್ಯ ಪ್ರದಾನ ಕಾರ್ಯದರ್ಶಿ ರಾವಣ ಮಾತನಾಡಿ, `ಕೆಲವು ಸರ್ಕಾರಿ ವಸತಿ ಶಾಲೆಗಳು ಹಂದಿ ಗೂಡುಗಳಂತಾಗಿವೆ. ಇಲ್ಲಿ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡುತ್ತಿಲ್ಲ' ಎಂದು ಆರೋಪಿಸಿದರು.ರಾಜ್ಯ ದಲಿತ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಯಶೋದಾ ಮಾತನಾಡಿ, `ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದ ಶಿಕ್ಷಕರು ಹೆಗ್ಗಣಗಳಾಗಿ ಪರಿವರ್ತನೆಯಾಗಿದ್ದಾರೆ. ಸರ್ಕಾರವು ವಸತಿ ಶಾಲೆಯ ಮಕ್ಕಳಿಗೆ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತಿದ್ದರೂ ಮಕ್ಕಳಿಗೆ ಸೇರಬೇಕಾದ ಸವಲತ್ತು ದೊರೆಯುತ್ತಿಲ್ಲ. ಇವುಗಳನ್ನು ಶಿಕ್ಷಕರೇ ಕಬಳಿಸುತ್ತಿದ್ದಾರೆ' ಎಂದು ಕಿಡಿ ಕಾರಿದರು.ಮನವಿ ಸ್ವೀಕಾರ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲ್ಲೂಕಿನ ದಂಡಾಧಿಕಾರಿ ಶಿವೇಗೌಡ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಸತೀಶ್ ಮನವಿ ಪತ್ರ ಸ್ವೀಕರಿಸಿದರು. 15 ದಿನಗಳಲ್ಲಿ ತಾಲ್ಲೂಕಿನಲ್ಲಿರುವ ಎಲ್ಲಾ ವಸತಿ ಶಾಲೆಗಳ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ಗೋವಿಂದ ರಾಜು, ಯುವ ಮುಖಂಡ ಮುತ್ತಾನಲ್ಲೂರು ಮುನಿರಾಜು, ಪ್ರಜಾ ವಿಮೋಚನ ಚಳವಳಿಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು, ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ಸಿ.ಮುನಿರಾಜು, ದಲಿತ ಸಂಘರ್ಷ ಸಮಿತಿಯ ವೆಂಕಿ, ಜೀವಿಕದ ಶೋಭಾ ಹೊಂಪಲಘಟ್ಟ ರವಿ, ಜಗ್ಗೇಶ್, ಯಲ್ಲಮ್ಮನ ಪಾಳ್ಯದ ನಾಗರಾಜು, ಯಡವನಹಳ್ಳಿ ಕೃಷ್ಣಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry