ಸೋಮವಾರ, ಜೂನ್ 14, 2021
23 °C

ಪ್ರಗತಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಯೋಜನೆ: ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ರಾಷ್ಟ್ರೀಯ ಹೆಣ್ಣುಮಕ್ಕಳ ಶಿಕ್ಷಣ ಯೋಜನೆ ಯಶಸ್ವಿ ಹಾದಿಯಲ್ಲಿ ಸಾಗುತ್ತಿರುವುದು ಸಂತಸಕರ ಸಂಗತಿ ಎಂದು ಸರ್ವಶಿಕ್ಷಣ ಯೋಜನೆ ಜಿಲ್ಲಾ ಸಮನ್ವಯ ಅಧಿಕಾರಿ ಕೆ.ಪಿ. ಲೋಹಿತೇಶ್ವರ ರೆಡ್ಡಿ ಪ್ರಶಂಸೆ ವ್ಯಕ್ತಪಡಿಸಿದರು.ಇಲ್ಲಿನ ಗುರುಭವನದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಸರ್ವಶಿಕ್ಷಣ ಅಭಿಯಾನದ ಅಡಿ ರಾಷ್ಟ್ರೀಯ ಹೆಣ್ಣುಮಕ್ಕಳ ಶಿಕ್ಷಣ ಯೋಜನೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಎನ್‌ಪಿಜಿಇಎಲ್ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಿಂದ ದೂರವಾಗಿರುವ ಬ್ಲಾಕ್‌ಗಳಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಮೊಳಕಾಲ್ಮುರು ಮತ್ತು ಚಳ್ಳಕೆರೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 64 ಶಿಕ್ಷಣ ಬ್ಲಾಕ್‌ಗಳನ್ನು ಆರಂಭಿಸಲಾಗಿದೆ.ಯೋಜನೆಯಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಜತೆ ಸ್ವಉದ್ಯೋಗ ಕೌಶಲ್ಯತೆಗಳನ್ನು ಕಲಿಸಿಕೊಡುವ ಮೂಲಕ ಆರ್ಥಿಕ ಸಬಲತೆ ನೀಡಲು ಶ್ರಮಿಸಲಾಗಿದೆ ಎಂದು ಮಾಹಿತಿ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಉಮಾದೇವಿ `ತಾಲ್ಲೂಕಿನಲ್ಲಿ 14 ಕಿರಿಯ ಹಾಗೂ 42 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎನ್‌ಪಿಜಿಇಎಲ್ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ ಬಾರಿ ಯೋಜನೆ ಅಡಿಯಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿನಿಯರಿಗೆ ರಕ್ತಗುಂಪು ಪರೀಕ್ಷೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಯೋಜನೆ ಆರಂಭವಾದ ನಂತರ ಹೆಣ್ಣುಮಕ್ಕಳು  ಮುಖ್ಯ ವಾಹಿನಿಯಿಂದ ದೂರ ಉಳಿಯುವ ಮೂಲಕ ಆಶಾದಾಯಕ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.ಸರ್ವಶಿಕ್ಷಣ ಯೋಜನೆ ಜಿಲ್ಲಾ ಎಸಿಪಿಗಳಾದ ವೆಂಕಟೇಶ್, ಶಿವಮೂರ್ತಿ, ತಾ.ಪಂ. ಇಒ ಅಂಜನ್‌ಕುಮಾರ್, ಪ.ಪಂ. ಉಪಾಧ್ಯಕ್ಷ ಜಿಂಕಾ ಶ್ರೀನಿವಾಸ್, ಶಿಕ್ಷಣ ಸಂಯೋಜಕರಾದ ಎಸ್.ಬಿ. ರಾಮಚಂದ್ರಯ್ಯ, ಎಲ್. ಪರಮೇಶ್ವರಪ್ಪ, ಬಿಆರ್‌ಪಿಗಳಾದ ಎಂ. ರುದ್ರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಲಕ್ಷ್ಮಣ್, ಕಾರ್ಯದರ್ಶಿ ಬಸವರಾಜ್, ಎನ್‌ಪಿಜಿಇಎಲ್ ತಾಲ್ಲೂಕು ಮುಖ್ಯಸ್ಥೆ ಬಸಮ್ಮ ಇತರರು ಉಪಸ್ಥಿತರಿದ್ದರು.ಸಮನ್ವಯ ಶಿಕ್ಷಣಾಧಿಕಾರಿ ನಯೀಮುರ್ ರೆಹಮಾನ್ ಸ್ವಾಗತಿಸಿದರು, ಸಂಯೋಜಕ ಪಿ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು, ಐಆರ್‌ಟಿ ಪರಮೇಶ್ವರಪ್ಪ ವಂದಿಸಿದರು.ಗೌರವ ನೀಡಲು ಸಲಹೆ

ಹಿರಿಯರು ಪ್ರಥಮವಾಗಿ ಹಿರಿಯರಿಗೆ ಗೌರವ ನೀಡುವಂತೆ ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಸಲಹೆ ಮಾಡಿದರು.ಗುರುವಾರ ಇಲ್ಲಿನ ದಾಸರಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ಮಾತೃ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಹಿತಿ ಯಳನಾಡು ಅಂಜಿನಪ್ಪ ಮಾತನಾಡಿ, ಯುವಕರು ಉತ್ತಮ ದಾರಿಯಲ್ಲಿ ಸಾಗಿ ಮುಂದಿರುವ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲುವ ಮೂಲಕ ಹಿರಿಯರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ನೇತೃತ್ವವನ್ನು ಮರಡಿಹಳ್ಳಿ ಬ್ರಹ್ಮ ವಿದ್ಯಾಶ್ರಮದ ಚಂದ್ರಾನಂದ ಸ್ವಾಮೀಜಿ, ಮುಕುಂದಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ ವಹಿಸಿದ್ದರು.ಪತ್ರಕರ್ತ ವಿಟ್ಟಪ್ಪ ಗೋರಂಠಿ, ಬಂಡಾಯ ಸಾಹಿತ್ಯ ವೇದಿಕೆ ತಾಲ್ಲೂಕು ಸಂಚಾಲಕ ಕೆ.ಜಿ. ವೆಂಕಟೇಶ್, ಪತ್ರಕರ್ತ ಕೆ.ಜಿ. ಜಯಪ್ರಕಾಶ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.