ಪ್ರಗತಿಯ ಕನಸು; ಅಭಿವೃದ್ಧಿಯ ಮೆಲುಕು

ಗುರುವಾರ , ಮೇ 23, 2019
30 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಪ್ರಗತಿಯ ಕನಸು; ಅಭಿವೃದ್ಧಿಯ ಮೆಲುಕು

Published:
Updated:

ತುಮಕೂರು: ಸರ್ಕಾರ ಸಾಕ್ಷರತೆ ಮತ್ತು ಉದ್ಯೋಗ ಕಲ್ಪಿಸಲು ಆದ್ಯತೆ ನೀಡುತ್ತಿದ್ದು, ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ ಹೇಳಿದರು.ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಬುಧವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ಜಾನುವಾರು ಮೇವು, ನೈರ್ಮಲೀಕರಣ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು ಸಾಕಷ್ಟು ಅನುದಾನ ವೆಚ್ಚ ಮಾಡಲಾಗಿದೆ ಎಂದು ಸಾಧನೆಯ ಬೆನ್ನು ತಟ್ಟಿಕೊಂಡರು.ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಯೋಜನೆಗಳಿಗೆ ರೂ. 242.6 ಕೋಟಿ ವ್ಯಯ ಮಾಡಲಾಗಿದೆ. ಪಾವಗಡ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ರೂ. 488.40 ಕೋಟಿದ ಯೋಜನೆ ರೂಪಿಸಲಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸಲು ರೂ. 47.95 ಕೋಟಿ ರೂಪಾಯಿ ವೆಚ್ಚದಲ್ಲಿ 2ನೇ ಹಂತದ ಯೋಜನೆ ಅನುಷ್ಠಾನವಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಒಳಚರಂಡಿ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಗತಿಯ ಪಟ್ಟಿ ಬಿಚ್ಚಿಟ್ಟರು.ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗೆ ಹೆಚ್ಚು ಅನುದಾನ ನೀಡಲಾಗಿದೆ. ರೈತರಿಗೆ ರೂ. 63.14 ಕೋಟಿ ವಿಮೆ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಕೃಷಿ ಯಾಂತ್ರೀಕರಣಕ್ಕೆ ರೂ. 24.84 ಕೋಟಿ ವೆಚ್ಚ ಮಾಡಲಾಗಿದೆ. ಸಾವಯವ ಕೃಷಿ ಪ್ರೋತ್ಸಾಹಕ್ಕೆ ರೂ. 40.4 ಕೋಟಿ ಅನುದಾನ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆ ಅಭಿವೃದ್ಧಿಗಾಗಿ ಅತಿ ಹೆಚ್ಚು ಅನುದಾನ ನೀಡಲಾಗಿದೆ ಎಂದು ವಿವರಿಸಿದರು.ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಕಳೆದ 4 ವರ್ಷದಲ್ಲಿ ವಿವಿಧ ಯೋಜನೆಯಡಿ ರೂ. 465.97 ಕೋಟಿ ವೆಚ್ಚ ಮಾಡಲಾಗಿದೆ. ಕೆರೆಗಳ ಅಭಿವೃದ್ಧಿಗೆ ರೂ. 16.63 ಕೋಟಿ ಖರ್ಚು ಮಾಡಲಾಗಿದೆ. ರಸ್ತೆ ಮತ್ತು ಸೇತುವೆ ಅಭಿವೃದ್ಧಿಗೆ ರೂ. 121.98 ಕೋಟಿ ವೆಚ್ಚವಾಗಿದೆ. ಅರಣ್ಯ ಇಲಾಖೆಯಿಂದ ರೈತರಿಗೆ ವಿವಿಧ ಜಾತಿಯ 8.75 ಲಕ್ಷ ಸಸಿ ವಿತರಣೆ ಮಾಡಲಾಗಿದೆ ಎಂದು ಹೇಳಿದರು.ದೇಶದಲ್ಲಿ ಮೊದಲ ಬಾರಿಗೆ ಸಮಗ್ರ ಕೃಷಿ ವಾಣಿಜ್ಯ ಅಭಿವೃದ್ಧಿ ನೀತಿ ಮತ್ತು ಕೃಷಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ರಾಜ್ಯಕ್ಕೆ ಇದೆ. ರೈತರಿಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರನ್ನು ಬರಪೀಡತ ಪ್ರದೇಶಗಳಿಗೆ ನೀಡಲು ಪರಮಶಿವಯ್ಯ ವರದಿ ಜಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ಪೊಲೀಸ್ ವಿವಿಧ ವಿಭಾಗಗಳಿಂದ ಸಚಿವರಿಗೆ ಗೌರವ ರಕ್ಷೆ ನೀಡಲಾಯಿತು. ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶ್‌ಗೌಡ, ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆನಂದರವಿ, ನಗರಸಭೆ ಅಧ್ಯಕ್ಷೆ ದೇವಿಕಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಧರಮೂರ್ತಿ, ಜಿಲ್ಲಾಧಿಕಾರಿ ಆರ್.ಕೆ.ರಾಜು, ಎಸ್ಪಿ ಟಿ.ಆರ್.ಸುರೇಶ್, ಜಿ.ಪಂ ಸಿಇಒ ಗೋವಿಂದರಾಜು ಮುಂತಾದವರು ಭಾಗವಹಿಸಿದ್ದರು.ವಿವಿಧೆಡೆ ಸಂಭ್ರಮ

ನಗರದ ವಿವಿಧೆಡೆ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿತ್ತು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆ ಆಡಳಿತಾಧಿಕಾರಿ ಸಿ.ಎನ್.ನರಸಿಂಹಮೂರ್ತಿ, ದೇಶದಲ್ಲಿ ತಾಂಡವವಾಡುತ್ತಿರುವ ಕೊಲೆ, ಸುಲಿಗೆ, ದರೋಡೆ, ಭ್ರಷ್ಟಾಚಾರ, ಭಯೋತ್ಪಾದನೆಯ ನಡುವೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕಾಗಿದೆ ಎಂದು ನೋವು ತೋಡಿಕೊಂಡರು.

ಪ್ರಾಚಾರ್ಯ ಪ್ರೊ.ಎಚ್.ಎನ್.ವಿಜೇಂದ್ರ, ಪ್ರೊ.ರಾಜಶೇಖರ್, ಡಾ.ಕೆ.ಎಸ್.ಕುಮಾರ್ ಭಾಗವಹಿಸಿದ್ದರು.ಜಿಲ್ಲಾ ಸರ್ಕಾರಿ ನೌಕರರ ಸಂಘ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಕುಮಾರ್, ಉಪಾಧ್ಯಕ್ಷ ಬಿ.ವೀರಣ್ಣಗೌಡ, ರಾಜ್ಯ ಪರಿಷತ್ ಸದಸ್ಯ ಕೆ.ಗೋಪಾಲ್, ಜಂಟಿ ಕಾರ್ಯದರ್ಶಿ ಎಚ್.ಎನ್.ಸಿದ್ದಲಿಂಗಸ್ವಾಮಿ ಇತರರು ಉಪಸ್ಥಿತರಿದ್ದರು.ಸೋಫಿಯಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲೂ ಸಂಭ್ರಮದ ಆಚರಣೆ ನಡೆಯಿತು. ಶಾಲೆಯ ಮುಖ್ಯಸ್ಥ ಅಬ್ದುಲ್ ವಜೀದ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಬಿಜೆಪಿ ಘಟಕದ ಕಾರ್ಯದರ್ಶಿ ಮುಸ್ತಾಫ್, ಮಮತಾ, ರಾಜೇಶ್ವರಿ, ವೆಂಕಟೇಶ್ ಪಾಲ್ಗೊಂಡಿದ್ದರು.ಶಾಂತಿನಗರದ ಕಾವೇರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂಸ್ಥೆ ಕಾರ್ಯದರ್ಶಿ ಗಂಗಪ್ಪ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕರಾದ ಬಿ.ಜಿ.ಶಿವಣ್ಣ, ಉದ್ದಪ್ಪ, ಖಜಾಂಚಿ ಟಿ.ಎಂ.ರಾಮಚಂದ್ರ, ವಿಜಯಕುಮಾರ್ ಇತರರಿದ್ದರು.ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಚೇರಿಯಲ್ಲೂ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಬಸವಯ್ಯ ಧ್ವಜಾರೋಹಣ ಮಾಡಿದರು. ಕರವೇ ಜಿಲ್ಲಾ ಅಧ್ಯಕ್ಷ ಟಿ.ಎಂ.ಮಹೇಶ್, ಸಚಿನ್, ಹೇಮಂತ್, ಹರ್ಷ ಇತರರು ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry