ಶನಿವಾರ, ಮೇ 15, 2021
22 °C

ಪ್ರಗತಿ ವರದಿ ನೀಡದ ಅಧಿಕಾರಿಗಳು ತರಾಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ವರದಿ ಸಲ್ಲಿಸದ, ಶಿಸ್ತು ಪಾಲಿಸದ, ಸಭೆಗೆ ಗೈರು ಹಾಜರಾದ ಅಧಿಕಾರಿಗಳನ್ನು ನಗರದಲ್ಲಿ  ನಡೆದ ತಾ.ಪಂ. ಸಭೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು.ನೋಡಲ್ ಅಧಿಕಾರಿಯಾಗಿರುವ ಜಿ.ಪಂ. ಲೆಕ್ಕಾಧಿಕಾರಿ ಚನ್ನಪ್ಪ ಅವರು  ಕೆಡಿಪಿ ಕಾಯ್ದೆಯ ಉಲ್ಲಂಘನೆಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ನಿಗದಿತ ವೇಳೆಯಲ್ಲಿ ಮಾಸಿಕ ಪ್ರಗತಿಯ ವರದಿಯನ್ನು ಸಲ್ಲಿಸದ, ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳುವ ಕುರಿತು ಎಚ್ಚರಿಕೆ ನೀಡಿದರು.ಸಭೆಗೆ ಹಾಜರಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಯಾವುದೇ ಇಲಾಖೆಗಳ ಅಧಿಕಾರಿಗಳು ತಾ.ಪಂ. ಪ್ರಗತಿ ಪರಿಶೀಲನಾ ಸಭೆಯನ್ನು ತಪ್ಪಿಸಿಕೊಳ್ಳುವಂತಿಲ್ಲ. ಅಸಮರ್ಪಕ ವರದಿ ನೀಡುವಂತಿಲ್ಲ. ಒಂದೊಮ್ಮೆ ಅಸಮರ್ಪಕ ವರದಿ ನೀಡಿದವರ ವಿರುದ್ಧ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.`ಅಧಿಕಾರಿಗಳ ಬದಲು ಸಭೆಗೆ ಹಾಜರಾದ ಕೆಳಹಂತದ ಸಿಬ್ಬಂದಿ ಮುಂದಿನ ಸಭೆಗೂ  ಆಗಮಿಸುವುದಾದರೆ, ಮೇಲಧಿಕಾರಿಯಿಂದ ಸೂಕ್ತ ಸಮಜಾಯಿಷಿ ಇರುವ ಪತ್ರ ಬರೆಸಿಕೊಂಡು ಬರಬೇಕು ಎಂದು ತಾಕೀತು ಮಾಡಿದರು. ಮೇ ತಿಂಗಳ ತಾಲೂಕು ಪಂಚಾಯ್ತಿ ಅಭಿವೃದ್ಧಿ ಪರಿಶೀಲನಾ ಸಭೆಗೆ ಹಾಜರಾಗದ ಮತ್ತು ಅಸಮರ್ಪಕ ವರದಿ ಸಲ್ಲಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಾರಣ ಕೇಳಿ ನೋಟೀಸ್ ಜಾರಿ ಮಾಡಿ ಅವರಿಂದ ಉತ್ತರ ಪಡೆದುಕೊಳ್ಳುಂತೆ ಅವರು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು.ಸಭೆಯಲ್ಲಿ ಭಾಗವಹಿಸಿದ್ದ ನೀರಾವರಿ ಇಲಾಖೆ, ಶಿಕ್ಷಣ ಇಲಾಖೆಯ ಪಶ್ಚಿಮ ವಲಯ, ಅಕ್ಷರ ದಾಸೋಹ ಬಿಸಿಯೂಟ ಯೋಜನೆ, ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕೆ, ಬಿಸಿಎಂ ಇಲಾಖೆ, ಎಚ್‌ಎಲ್‌ಸಿ ಉಪವಿಭಾಗ, ಸಮಾಜ ಕಲ್ಯಾಣ ಇಲಾಖೆ, ಪಶುವೈದ್ಯ ಸೇವಾ ಇಲಾಖೆಗಳ ಮೇ ತಿಂಗಳ ಪ್ರಗತಿ ವರದಿಗಳು ಅಸಮರ್ಪಕವಾಗಿದ್ದವು. ಅಲ್ಲದೆ, ಸಭೆಗೆ ಆಗಮಿಸಬೇಕಿದ್ದ ಅಧಿಕಾರಿಗಳು ಇತರ ಸಿಬ್ಬಂದಿಯನ್ನು ಕಳುಹಿಸಿ ಲೋಪ ಎಸಗಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.ತುಂಗಭದ್ರಾ ಬಲದಂಡೆಯ ಮೇಲ್ಮಟ್ಟದ ಕಾಲುವೆ (ಎಚ್‌ಎಲ್‌ಸಿ) ಉಪ ವಿಭಾಗದಿಂದ ಸಭೆಗೆ ಆಗಮಿಸಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್  ಸಭೆಗೆ ಮಾಹಿತಿ ನೀಡದೆ ಸುಮ್ಮನೆ ನಿಂತಿದ್ದು, ಅಧಿಕಾರಿಗಳ ಕೋಪಕ್ಕೆ ಕಾರಣವಾಯಿತು.

ತುಂಗಭದ್ರಾ ಜಲಾಶಯದ ಬಲದಂಡೆ ಕಾಲುವೆಗಳಿಗೆ ಜುಲೈ ಕೊನೆಯಲ್ಲಿ ನೀರು ಹರಿಸುವುದಾಗಿ ತುಂಗಭದ್ರಾ ಮಂಡಳಿ ಈಗಾಗಲೇ ತಿಳಿಸಿದು, ಇದುವರೆಗೂ ಪೂರ್ಣಗೊಳ್ಳದ ಕಾಲುವೆಗಳ, ಸೇತುವೆಗಳ ದುರಸ್ತಿ ಕಾರ್ಯಗಳ ಬಗ್ಗೆ ಸಭೆುಲ್ಲಿ ಅಸಮಾಧಾನ ವ್ಯಕ್ತವಾಯಿತು.ಮುಂದಿನ ಸಭೆಯಲ್ಲಿ ಎಲ್ಲ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಯಾವುದೇ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದು ತಿಳಿಸಲಾಯಿತು. ಸಭೆಯಲ್ಲಿ ತಾ.ಪಂ. ಅಧ್ಯಕ್ಷ ವಿ.ಗಾದಿಲಿಂಗಪ್ಪ, ಉಪಾಧ್ಯಕ್ಷೆ ಮರೆಮ್ಮ, ಕಾರ್ಯ ನಿರ್ವಾಹಕ ಅಧಿಕಾರಿ ಜಾನಕಿರಾಮ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.