ಪ್ರಗತಿ ವರದಿ ಸಲ್ಲಿಸದ ಅಧಿಕಾರಿಗಳಿಗೆ ತರಾಟೆ

ಶುಕ್ರವಾರ, ಜೂಲೈ 19, 2019
28 °C

ಪ್ರಗತಿ ವರದಿ ಸಲ್ಲಿಸದ ಅಧಿಕಾರಿಗಳಿಗೆ ತರಾಟೆ

Published:
Updated:

ಚಳ್ಳಕೆರೆ: ಅಧಿಕಾರಿಗಳು ತಿಂಗಳ ಪ್ರಗತಿ ವರದಿಯನ್ನು ತಾಲ್ಲೂಕು ಪಂಚಾಯ್ತಿಗೆ ಸಲ್ಲಿಸದೇ ಪ್ರಗತಿ ಪರಿಶೀಲನಾ ಸಭೆಗೆ ಬರಬೇಡಿ. ತಿಂಗಳಿಗೆ ಒಂದು ಬಾರಿ ನಡೆಯುವ ಸಭೆಗೆ ಸಮಯಕ್ಕೆ ಸರಿಯಾಗಿ ಬಾರದೇ ಸರಿಯಾದ ಮಾಹಿತಿಯನ್ನೂ ನೀಡದೇ ಬೇಜವಾಬ್ಧಾರಿತನ ತೋರುತ್ತಿದ್ದೀರಿ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿ ಡಾ.ತಿಪ್ಪೇಸ್ವಾಮಿ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಿಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರೇಷ್ಮೆ ಹಾಗೂ ಭೂ ಸೇನಾ ನಿಗಮ, ಸಣ್ಣ ಕೈಗಾರಿಕೆ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿಯನ್ನು ಸಭೆಗೆ ಮುಂಚಿತವಾಗಿ ಸಲ್ಲಿಸದೇ ಇರುವುದನ್ನು ಕಂಡು ಅವರು ಅಸಮಾಧಾನ ವ್ಯಕ್ತಪಡಿಸಿದರು.ರೈತರು ರಸ್ತೆಗಳನ್ನು ಕಣಗಳನ್ನಾಗಿ ಮಾಡಿಕೊಂಡು ಭತ್ತ, ರಾಗಿ ಮುಂತಾದ ಧಾನ್ಯಗಳನ್ನು ಹಸನು ಮಾಡಿಕೊಳ್ಳುತ್ತಾರೆ. ಇದನ್ನು ತಪ್ಪಿಸಲು ಸಂಬಂಧಿಸಿದ ಇಲಾಖೆ ರೈತರಿಗೆ ಕಣಗಳನ್ನು ನಿರ್ಮಿಸುವ ಕುರಿತು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.ಇಲ್ಲಿನ ತಾಲ್ಲೂಕು ಪಂಚಾಯ್ತಿಯ ಪ್ರಭಾರ ಇಒ ಆಗಿರುವ ತಾಲ್ಲೂಕು ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ ತಮ್ಮ ಇಲಾಖೆಯ ವರದಿ ಓದುವಾಗ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಂ.ಎಸ್. ಮಂಜುನಾಥ್ ಮಧ್ಯಪ್ರವೇಶಿಸಿ, ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಜಾನುವಾರುಗಳ ಆರೋಗ್ಯ ತಪಾಸಣೆಗೆ ಪಶುವೈದ್ಯರನ್ನು ಸಂಪರ್ಕಿಸಿದಾಗ ಲಂಚ ಕೇಳುತ್ತಾರೆ ಎಂಬ ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಪಶುವೈದ್ಯರು ಈ ರೀತಿ ಮಾಡದಂತೆ ಕ್ರಮಕೈಗೊಳ್ಳಿ ಎಂದು ತಾಕೀತು ಮಾಡಿದರು.ಇದಕ್ಕೆ ಉತ್ತರಿಸಿದ ಪ್ರಭಾರ ಇಒ ಹಣ ಕೇಳಿದ ಪಶುವೈದ್ಯರ ಹೆಸರು ಹೇಳಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಒಂದು ಕಡೆ ಪ್ರಭಾರ ಇಒ ಹುದ್ದೆ, ಮತ್ತೊಂದು ಕಡೆ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕರಾಗಿರುವ ಡಾ.ತಿಪ್ಪೇಸ್ವಾಮಿ ಇಡೀ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲಿ ಪ್ರಗತಿ ಪಾಠ ಮಾಡುತ್ತಾ ಬಂದರು. ಕೊನೆಯಲ್ಲಿ ತನ್ನದೇ ಮಾತೃ ಇಲಾಖೆ ವರದಿ ಓದುವಾಗ ತಾ.ಪಂ. ಉಪಾಧ್ಯಕ್ಷರು ಕೇಳಿದ ಪ್ರಶ್ನೆ ಮಾತ್ರ ಎಲ್ಲರ ಗಮನಸೆಳೆಯುವಂತೆ ಮಾಡಿತು.    ಈ ಸಂದರ್ಭದಲ್ಲಿ ಅಧ್ಯಕ್ಷೆ ಬೋರಮ್ಮ, ಉಪಾಧ್ಯಕ್ಷ ಮಂಜುನಾಥ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶ್, ಗುರುಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry