ಪ್ರಚಾರಕ್ಕಾಗಿ ಖಾಸಗಿತನ ಕಳೆದುಕೊಳ್ಳುವ ಜನ

ಜೈಪುರ: ‘ಮನುಷ್ಯ ಖಾಸಗಿತನವನ್ನು ಕಳೆದುಕೊಳ್ಳುತ್ತಿರುವುದು ಈಗಿನ ದೊಡ್ಡ ವಿದ್ಯಮಾನ. ಖಾಸಗಿತನವನ್ನು ಕಳೆದುಕೊಂಡು ಜನರು ಪ್ರಚಾರ ಪಡೆಯಲು ಬಯಸುತ್ತಿದ್ದಾರೆ. ಒಬ್ಬ ವ್ಯಕ್ತಿಯಾಗಿ ಮನುಷ್ಯನ ಗಡಿಗಳು ಬದಲಾಗಿವೆ’ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ನಿರ್ದೇಶಕ, ಚಿಂತಕ ಹೋಮಿ ಕೆ ಭಾಭಾ ಹೇಳಿದರು.
ಜೈಪುರ ಸಾಹಿತ್ಯೋತ್ಸವದಲ್ಲಿ ‘ಖಾಸಗಿತನದ ಕೊನೆ: ಒಂದು ಸಮಗ್ರ ಪುನರಾವಲೋಕನ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ವ್ಯಕ್ತಿಯ ಖಾಸಗಿ ವಿಷಯಗಳು ಸಾರ್ವಜನಿಕವಾಗುವುದರ ಜತೆಗೆ ಆತನ ಖಾಸಗಿತನದ ಉಲ್ಲಂಘನೆಗಳೂ ಹೆಚ್ಚುತ್ತಿವೆ. ವ್ಯಕ್ತಿಯ ಮೇಲೆ ಹಲವು ರೀತಿಯ ಪೊಲೀಸ್ಗಿರಿ ನಡೆಯುತ್ತಿದೆ. ಅನೈತಿಕ ಪೊಲೀಸ್ಗಿರಿಯ ಜತೆಗೆ ಆಹಾರದ ಪೊಲೀಸ್ಗಿರಿ ಅಂದರೆ, ಜನರು ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂಬ ಪೊಲೀಸ್ಗಿರಿಯೂ ನಡೆಯುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ಅಂತರ್ಜಾಲದ ಮೂಲಕ ವೈಯಕ್ತಿಕ ಮಾಹಿತಿ ದುರುಪಯೋಗದ ಅಪಾಯಗಳನ್ನು ನ್ಯಾಟ್ಗ್ರಿಡ್ ಸಂಸ್ಥಾಪಕ ರಘು ರಾಮನ್ ಬಿಡಿಸಿಟ್ಟರು.
‘ಈಗ ಯಾರಿಗೂ ಯಾರ ಮೇಲೆಯೂ ನಂಬಿಕೆ ಇಲ್ಲ. ಯಾರೊಂದಿಗೂ ಮನಸು ಬಿಚ್ಚುವುದಿಲ್ಲ, ಪ್ರಾಮಾಣಿಕವಾಗಿ ಇರುವುದಿಲ್ಲ. ಆದರೆ ಗೂಗಲ್ನ ಮುಂದೆ ಕುಳಿತಾಗ ಮಾತ್ರ ನಾವು ಏನಾಗಿದ್ದೇವೆ, ಏನು ಬಯಸುತ್ತೇವೆ ಎಂಬುದೆಲ್ಲವನ್ನೂ ಬಹಿರಂಗಪಡಿಸಿಬಿಡುತ್ತೇವೆ. ನಮ್ಮೆಲ್ಲ ರಹಸ್ಯಗಳೂ ಗೂಗಲ್ಗೆ ಗೊತ್ತಿದೆ’ ಎಂದು ಅಂತರ್ಜಾಲ ಬಳಕೆದಾರರಿಗೆ ಎಚ್ಚರಿಕೆ ನೀಡಿದರು.
ಅಂತರ್ಜಾಲಕ್ಕೆ ‘ಡಿಲೀಟ್’ (ಅಳಿಸಿ ಹಾಕುವ) ಬಟನ್ ಇಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇರಿಸಿಕೊಳ್ಳಬೇಕು ಎಂಬ ಕಿವಿ ಮಾತು ಹೇಳಿದರು.
ಛಾಯಾಗ್ರಹಣದಲ್ಲಿ ಖಾಸಗಿತನದ ಉಲ್ಲಂಘನೆ ಹೇಗೆಲ್ಲ ನಡೆಯುತ್ತಿದೆ ಎಂಬ ಬಗ್ಗೆ ಖ್ಯಾತ ಛಾಯಾಗ್ರಾಹಿಕ ಮತ್ತು ಲೇಖಕಿ ದಯನಿತಾ ಸಿಂಗ್ ವಿವರಿಸಿದರು.
ವ್ಯಕ್ತಿಯೊಬ್ಬರ ಫೋಟೊ ತೆಗೆಯುವಾಗಲೇ ಆಗುವ ಖಾಸಗಿತನದ ಉಲ್ಲಂಘನೆ ಒಂದೆಡೆಯಾದರೆ ಅದನ್ನು ಪ್ರಕಟಿಸುವ ಹೊತ್ತಿಗೆ ಇನ್ನೊಂದು ರೀತಿಯಲ್ಲಿ ಖಾಸಗಿತನದ ಉಲ್ಲಂಘನೆಯಾಗುತ್ತದೆ. ಒಂದು ಛಾಯಾಚಿತ್ರಕ್ಕೆ ಕೊಡುವ ಶೀರ್ಷಿಕೆ ಯಾವುದಿರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಛಾಯಾಚಿತ್ರದಲ್ಲಿರುವ ವ್ಯಕ್ತಿಗೆ ಇರುವುದಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.