ಬುಧವಾರ, ನವೆಂಬರ್ 20, 2019
26 °C
ಕಟ್ಟುನಿಟ್ಟಿನ ಚುನಾವಣಾ ನೀತಿಸಂಹಿತೆ

ಪ್ರಚಾರಕ್ಕೆ ಕಡಿವಾಣ;ಅಭ್ಯರ್ಥಿಗಳು ಹೈರಾಣ

Published:
Updated:

ಭಟ್ಕಳ: ವಿಧಾನಸಭಾ ಚುನಾವಣೆಗಾಗಿ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಮಾದರಿ ನೀತಿಸಂಹಿತೆಯನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಅದನ್ನು ಪಾಲಿಸಲಾಗದೇ ಒಳಗೊಳಗೆ ಅಭ್ಯರ್ಥಿಗಳು ಹೈರಾಣಾಗುತ್ತಿದ್ದಾರೆ.ಬ್ಯಾನರ್ ಬಂಟಿಂಗ್ಸ್ ಹಾಕುವಂತಿಲ್ಲ. ಮನಸ್ಸಿಗೆ ಬಂದಂತೆ ವಾಹನ ಬಳಸುವಂತಿಲ್ಲ. ಬಹಿರಂಗ ಸಮಾವೇಶ ಮಾಡಿದರೆ ಆಯೋಗವು ಲಕ್ಷಗಟ್ಟಲೆ ತನ್ನದೇ ಆದ ಲೆಕ್ಕ ಬರೆದುಕೊಳ್ಳುತ್ತದೆ. ಒಂದು ಕುರ್ಚಿಗೆ ಐದು ರೂಪಾಯಿ ಲೆಕ್ಕ ಬರೆದುಕೊಳ್ಳುತ್ತಾರೆ. ವಾಹನಗಳಿಗೂ ಅವರದೇ ಆದ ಲೆಕ್ಕಾಚಾರವಿದೆ. ಗುಂಪು ಮತದಾರರನ್ನು ಮಾತನಾಡಿಸುವುದಕ್ಕೆ ಮುಂದಾದರೆ ಅಲ್ಲಿಗೂ ದಾಳಿಯಿಡುವ ಚುನಾವಣಾಧಿಕಾರಿಗಳು ಅದಕ್ಕೂ ಲೆಕ್ಕ ಬರೆದುಕೊಳ್ಳುತ್ತಿದ್ದಾರೆ.ಪತ್ರಿಕೆಗಳಲ್ಲಿ ಜಾಹೀರಾತು ನೀಡಿದರೆ ಅದಕ್ಕೆ ಎಷ್ಟು ಲೆಕ್ಕ ಬರೆದುಕೊಳ್ಳುತ್ತಾರೋ ಎಂಬ ಹೆದರಿಕೆಯೂ ಇದ್ದು, ಇವುಗಳಿಂದ ಅಕ್ಷರಶಃ ಹೈರಾಣಾಗಿರುವ ಅಭ್ಯರ್ಥಿಗಳು 16ಲಕ್ಷದೊಳಗೆ ಚುನಾವಣೆಯ ವೆಚ್ಚವನ್ನು ರಾಮನ-ಕೃಷ್ಣನ ಲೆಕ್ಕದಲ್ಲಿ ತೋರಿಸುವುದಕ್ಕೆ ಕ್ಯಾಲ್ಕುಲೇಟರ್ ಹಿಡಿದುಕೊಂಡು ತಮ್ಮ ಕಚೇರಿಯಲ್ಲಿ ಕುಳಿತುಕೊಂಡು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.ಮನೆ ಮನೆ ಪ್ರಚಾರಕ್ಕೆ ಒತ್ತು: ಚುನಾವಣಾ ಆಯೋಗದವರ ಕಾಟ ತಾಳಲಾರದೇ ಸ್ಪರ್ಧಿಸಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳೂ ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಬಹಿರಂಗ ಪ್ರಚಾರಕ್ಕೆ ಕಡಿವಾಣ ಹಾಕಕೊಂಡು ಮನೆ ಮನೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪಟ್ಟಣದ ಶಂಸುದ್ದೀನ್ ಸರ್ಕಲ್‌ನಿಂದ ರಂಗೀಕಟ್ಟೆವರೆಗೆ ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್‌ಆರ್, ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಕಾರ್ಯಲಯಗಳು ಸಾಲಾಗಿ ತಲೆಯೆತ್ತಿಕೊಂಡಿವೆ.ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ್ಲ್ಲಲೇ ಇರುವ ಈ ಕಚೇರಿಗಳು ಬೆಳಗ್ಗೆಯಿಂದ ರಾತ್ರಿ 8ರವರೆಗೆ ಬಣಗುಟ್ಟುತ್ತಿರುತ್ತವೆ. 8ಗಂಟೆ ಆದೊಡನೆ ವಿವಿಧೆಡೆ ಪ್ರಚಾರಕ್ಕೆ ತೆರಳಿರುವ ನೂರಾರು ಕಾರ್ಯಕರ್ತರು ಜಮಾಯಿಸುತ್ತಾರೆ.ಕೆಜೆಪಿ, ಕಾಂಗ್ರೆಸ್, ಬಿಜೆಪಿ ಒಂದೊಂದೇ ಬಹಿರಂಗ ಸಭೆ ನಡೆಸಿದೆ. ಹೆಚ್ಚುವರಿ ಸಭೆಗಳನ್ನು ನಡೆಸುವುದಕ್ಕೆ ಖರ್ಚು-ವೆಚ್ಚವನ್ನು ಅಳೆದು ತೋಗಿ ನೋಡಬೇಕಾಗುತ್ತದೆ ಎಂದು ಹೆಸರು ಹೇಳಿಲಿಚ್ಚಿಸದ ಪಕ್ಷದ ಪ್ರಮುಖರೊಬ್ಬರು ಹೇಳುತ್ತಾರೆ.ಪಟ್ಟಣದ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲೆ ಬೀಡು ಬಿಟ್ಟಿರುವ ಅಭ್ಯರ್ಥಿಗಳು ಪ್ರತಿ ಮನೆಗೂ ತೆರಳಿ ಮತ ಯಾಚಿಸುತ್ತಿರುವುದು ಕಂಡುಬರುತ್ತಿದೆ.

ಪ್ರತಿಕ್ರಿಯಿಸಿ (+)