ಭಾನುವಾರ, ಜೂನ್ 20, 2021
28 °C

ಪ್ರಚಾರ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಪಡೆಯಬೇಕಿರುವ ವಿವಿಧ ಅನುಮತಿಗಳಿಗೆ  ಅಧಿಕಾರಶಾಹಿಯ ಕೆಂಪು ಪಟ್ಟಿಯನ್ನು (ವಿಳಂಬ ಧೋರಣೆ) ಕಡಿಮೆ ಮಾಡಲು ಎಲ್ಲ ಕ್ಷೇತ್ರಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ರೂಪಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.ಚುನಾವಣಾ ಪ್ರಚಾರಕ್ಕಾಗಿ ಸಮಾವೇಶಗಳು, ಸಾರ್ವಜನಿಕ ಸಭೆಗಳು, ವಾಹನ ಬಳಕೆ, ತಾರಾ ಪ್ರಚಾರಕರಿಗಾಗಿ ವಾಣಿಜ್ಯೇತರ ವಿಮಾನ ನಿಲ್ದಾಣ ಮತ್ತು ಹೆಲಿಪ್ಯಾಡ್‌ ಬಳಕೆಗೆ ಅನುಮತಿ ನೀಡಲು ಏಕ ಗವಾಕ್ಷಿ ಅನುಮತಿ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವಂತೆ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ.ಅನುಮತಿಗಾಗಿ ಅರ್ಜಿಗಳನ್ನು ಪಡೆದುಕೊಂಡು ಸೂಕ್ತ ಕ್ರಮಕ್ಕಾಗಿ ಇತರ ಇಲಾಖೆಗಳ ನೋಡಲ್‌ ಅಧಿಕಾರಿಗಳಿಗೆ ವರ್ಗಾಯಿಸಲು ಬದ್ಧತೆಯುಳ್ಳ ಸಿಬ್ಬಂದಿ­ಯನ್ನು ನಿಯೋಜಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯ ಪೊಲೀಸ್‌ ಇಲಾಖೆಯ ಸೂಕ್ತ ಅಧಿಕಾರಿಗಳಿಂದ ಮತ್ತು ಸಭೆ ನಡೆಸುವ ಸ್ಥಳದ ಮಾಲೀಕತ್ವ ಹೊಂದಿರುವ ಸಂಸ್ಥೆಯ ಅನುಮತಿ ಪಡೆಯುವುದಕ್ಕಾಗಿ ಅನುಮತಿ ನೀಡುವ ಘಟಕದಲ್ಲಿ ಡಿಎಸ್‌ಪಿ ಮಟ್ಟದ ಅಧಿಕಾರಿಯೊಬ್ಬರು ಇರಬೇಕು.ಹೊಸ ವ್ಯವಸ್ಥೆಯ ಪ್ರಕಾರ, ಪ್ರಚಾರ ಕಾರ್ಯಕ್ಕೆ ಸಂಚಾರ ಪೊಲೀಸರಿಂದ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯ ಇಲ್ಲ. ರಥಗಳ ರೀತಿಯಲ್ಲಿ ಪರಿವರ್ತಿಸ­ಲಾಗುವ ವಾಹನಗಳ ಬಳಕೆ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕಾಗಿ ಏಕಗವಾಕ್ಷಿ ಘಟಕದಲ್ಲಿ ಒಬ್ಬ ಸಂಚಾರ ಪೊಲೀಸ್‌ ಅಧಿಕಾರಿಯೂ ಇರಬೇಕು ಎಂದು ಆಯೋಗ ಸೂಚಿಸಿದೆ.48 ತಾಸು ಮೊದಲು ಅರ್ಜಿ: ಮೊದಲು ಬಂದ ಅರ್ಜಿಗಳನ್ನು ಮೊದಲು ವಿಲೇವಾರಿ ಮಾಡುವ ವಿಧಾನವನ್ನು ಇಲ್ಲಿ  ಅಳವಡಿಸಿ ಕೊಳ್ಳಲಾಗುತ್ತದೆ. ಯಾವುದೇ ಕಾರ್ಯಕ್ರಮಕ್ಕೆ 48 ತಾಸು ಮೊದಲು ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿಯೊಂದಿಗೆ ಕಾರ್ಯ­ಕ್ರಮಕ್ಕೆ ತಗಲುವ  ವೆಚ್ಚದ ವಿವರಗಳನ್ನು ಒದಗಿಸಬೇಕು.ಏಕಗವಾಕ್ಷಿ ಘಟಕವು 36 ತಾಸುಗಳಲ್ಲಿ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. 36 ತಾಸುಗಳ ನಂತರವೂ ಬಾಕಿಯಾದ ಅರ್ಜಿಗಳ ಬಗ್ಗೆ ಚುನಾವಣಾಧಿ­ಕಾರಿಗಳಿಗೆ ಮಾಹಿತಿ ನೀಡಬೇಕು. ವಾಣಿಜ್ಯೇತರ ವಿಮಾನ ನಿಲ್ದಾಣ ಮತ್ತು ಹೆಲಿಪ್ಯಾಡ್‌ ಬಳಸುವುದಕ್ಕೆ, ವಿಮಾನ ಅಥವಾ ಹೆಲಿಕಾಪ್ಟರ್‌ ನೆಲಕ್ಕಿಳಿಯುವ ನಿಗದಿತ ಸಮಯಕ್ಕಿಂತ 24 ತಾಸು ಮೊದಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ಬರುವವರು ಯಾರು ಎಂಬ ಮಾಹಿತಿಯನ್ನು ಅವರಿಗೆ ನೀಡಬೇಕು ಎಂದು ಆಯೋಗ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.