ಮಂಗಳವಾರ, ನವೆಂಬರ್ 12, 2019
28 °C

ಪ್ರಚಾರ ಅಬ್ಬರ; ಕೇಳಿಸದ `ಅನ್ನದಾತ'ನ ಗೋಳು!

Published:
Updated:

ಬೀದರ್: ಗಡಿಜಿಲ್ಲೆ ಬೀದರ್ ಕೃಷಿ ಪ್ರಧಾನವಾದುದು. ಕಬ್ಬು ಬೆಲೆ ನಿಗದಿ, ಬೆಂಬಲ ಬೆಲೆ ನಿಗದಿ, ಕೃತಿ ಉತ್ಪನ್ನಗಳಿಗೆ ಮಾರುಕಟ್ಟೆ ಸಮಸ್ಯೆ ಇತ್ಯಾದಿ ಕಾರಣಗಳಿಗೆ ವರ್ಷಪೂರ್ತಿ ಹೋರಾಟ ನಡೆಸಬೇಕಾದ ಕೃಷಿಕರ ಸಮಸ್ಯೆಗಳು, ಚುನಾವಣೆಯ ಪ್ರಚಾರದ ಅಬ್ಬರದಲ್ಲಿ ಕಳೆದುಹೋಗಿವೆ.ಪ್ರಚಾರದಲ್ಲ ಅಲ್ಲಲ್ಲಿ ಅಭಿವೃದ್ಧಿ ಮಾತುಗಳು ಕೇಳಿಬಂದರೂ, ರೈತನ ಸಮಸ್ಯೆಗಳು ಉಲ್ಲೇಖವಾಗುತ್ತಿಲ್ಲ. ಶಾಸಕರ ಅವಧಿ ಮುಗಿಯುತ್ತಾ ಬಂದರೂ,ಕೃಷಿಉತ್ಪನ್ನಗಳಿಗೆ ದೊರೆಯದ ಸೂಕ್ತ ಬೆಲೆ, ಒಣಗಿ ನಿಂತ ಕೆರೆ, ಕಟ್ಟೆಗಳು, ವಿದ್ಯುತ್ ಕಣ್ಣಾ ಮುಚ್ಚಾಲೆ, ಅರ್ಹರಿಗೆ ತಲುಪದ ವಿವಿಧ ಯೋಜನೆಗಳ ನೆರವು ರೈತರನ್ನು ಇನ್ನೂ ಕಾಡುತ್ತಿವೆ.ಮತ್ತೆ ವಿಧಾನಸಭೆ ಚುನಾವಣೆ ಬಂದಿದ್ದು, ಕಳೆದ ಅವಧಿಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆಯೇ, ಜನಪ್ರತಿನಿಧಿಗಳ ಆಡಳಿತ ತೃಪ್ತಿ ನೀಡಿದೆಯೇ, ಮುಂದಿನ ಅವಧಿಯ ಜನಪ್ರತಿನಿಧಿಗಳ ನಿರೀಕ್ಷೆಗಳೇನು ಎನ್ನುವ ಬಗೆಗೆ ರೈತರ ಅಭಿಪ್ರಾಯಗಳು ಇಲ್ಲಿವೆ.`ಕಳೆದ ಅವಧಿಯಲ್ಲಿ ಕೇವಲ ಭರವಸೆಗಳ ಸುರಿಮಳೆ ಸುರಿಸಲಾಗಿದೆ. ರೈತರ ಯಾವುದೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿಲ್ಲ ಎಂದು ಆಡಳಿತದ ಬಗೆಗೆ ಅತೃಪ್ತಿ ವ್ಯಕ್ತಪಡಿಸುತ್ತಾರೆ' ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ್ ಕೌಠಾ.`ಜಿಲ್ಲೆಯಲ್ಲಿ ಅನೇಕ ಕೆರೆ ಕಟ್ಟೆಗಳು ಒಡೆದಿದ್ದು, ಪುನರುಜ್ಜೀವನಕ್ಕೆ ಕಾದಿವೆ. ಅದರೂ ಈ ನಿಟ್ಟಿನಲ್ಲಿ ಕೆಲಸ ಆಗಿಲ್ಲ. ಜನ- ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ, ಬರಗಾಲಕ್ಕೆ ಇದೇ ಕಾರಣ. ಕಾರಂಜಾ ನೀರಾವರಿ ಯೋಜನೆ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಕೆಯಾಗುತ್ತಿದೆ. ಬಚಾವತ್ ತೀರ್ಪಿನ ಪ್ರಕಾರ, ಜಿಲ್ಲೆಯಲ್ಲಿ ಮಾಂಜ್ರಾ ನದಿಗೆ ಅಡ್ಡಲಾಗಿ 12 ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಬೇಕಿತ್ತು. ಈವರೆಗೆ ಮೂರು ಮಾತ್ರ  ನಿರ್ಮಿಸಲಾಗಿದೆ' ಎಂದು ನುಡಿಯುತ್ತಾರೆ ಅವರು.ಕುಗ್ಗಿದ ಆತ್ಮಹತ್ಯೆ ಪ್ರಮಾಣ: ಕಬ್ಬಿಗೆ ಉತ್ತಮ ಬೆಲೆ ಸಿಗುತ್ತಿದ್ದರಿಂದ ರೈತರ ಆತ್ಮಹತ್ಯೆ ಕಡಿಮೆ ಆಗಿದೆ. ಕಳೆದ ಸಲ ಉತ್ತಮ ಮಳೆಯಾಗಿದ್ದರಿಂದ ಫಸಲೂ ಉತ್ತಮವಾಗಿ ಬಂದಿತು. ಸರ್ಕಾರ ರೈತರ 25 ಸಾವಿರ ರೂಪಾಯಿವರೆಗಿನ ಸಾಲ ಮನ್ನಾ ಮಾಡಿರುವುದು ಕೊಂಚ ನೆಮ್ಮದಿ ತಂದಿದೆ ಎಂಬುದು ರೈತರೊಬ್ಬರ ಅನಿಸಿಕೆ.ಜಿಲ್ಲೆಯ ಕೆರೆ ಕಟ್ಟೆಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಇನ್ನಷ್ಟು ಬ್ರಿಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬೆಳೆಗೆ ಲಾಭದಾಯಕ ಬೆಲೆ ನಿಗದಿಪಡಿಸಬೇಕು. ಸಬ್ಸಿಡಿ ಹಣ ನೇರ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಬೇಡಿಕೆ ಮಂಡಿಸುತ್ತಾರೆ ಅವರು.ದೊರೆಯದ `ಪವರ್': ಮುಂಚೆ ಪಂಪ್‌ಸೆಟ್‌ಗಳಿಗೆ 8 ತಾಸು ವಿದ್ಯುತ್ ಒದಗಿಸುವಭರವಸೆ ನೀಡಲಾಗಿತ್ತು. ಬಳಿಕ 6 ತಾಸು ನೀಡುವ ವಾಗ್ದಾನ ಮಾಡಲಾಯಿತು. ಆದರೂ, ಮೂರೂವರೆ ತಾಸು ವಿದ್ಯುತ್ ಮಾತ್ರ ಕೊಡಲಾಗುತ್ತಿದೆ ಎಂದು ದೂರುತ್ತಾರೆ ರೈತ ಮುಖಂಡ ಪ್ರಭುರಾವ್ ಪಾಟೀಲ್ ಹೊನ್ನಡ್ಡಿ.ರೈತರು ಬೆಳೆ ಕಟಾವು ಆದಾಗ ಬೆಲೆ ಇರುವುದಿಲ್ಲ. ಮಾರಾಟ ಮಾಡಿದ ಬಳಿಕ ಜಾಸ್ತಿ ಆಗುತ್ತದೆ. ಫಸಲು ಕಟಾವು ಆಗುವ ಮುನ್ನವೇ ಸರ್ಕಾರ ಬೆಳೆಗಳ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸುತ್ತಾರೆ ರೈತರಾದ ಸಿದ್ಧಪ್ಪ ಸಣ್ಣಮಣಿ.

ಸಬ್ಸಿಡಿ ಕೃಷಿ ಉಪಕರಣ, ಬೀಜದ ಬೆಲೆ ಮಾರುಕಟ್ಟೆ ಬೆಲೆಗಿಂತ ಜಾಸ್ತಿ ಇರುತ್ತದೆ. ಕಳೆದ ಅವಧಿಯಲ್ಲಿ ನೀರಾವರಿ ಯೋಜನೆ, ಗ್ರಾಮಕ್ಕೊಂದು ಕೆರೆ, ಹೊಲಗಳಿಗೆ ಸಂಪರ್ಕ ರಸ್ತೆ, ವಿದ್ಯುತ್ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂಬುದುರೈತ ಸಂಘದ ಜಿಲ್ಲಾ ಸಂಯೋಜಕ ಸುರೇಶ ಜನಶೆಟ್ಟಿ.ಬಿರು ಬಿಸಿಲಲ್ಲಿ ಪ್ರಚಾರ ತೊಡಗಿರುವ ಅಭ್ಯರ್ಥಿಗಳು ಭರವಸೆಗಳ `ಮಳೆ' ಸುರಿಸುತ್ತಿದ್ದರೆ, ಕೃಷಿಕರು ಮಾತ್ರ ಸಮಸ್ಯೆಗಳ ಬೇಗೆಯಲ್ಲಿ ಬೇಯುತ್ತಿದ್ದಾರೆ. ಆಯ್ಕೆಯಾಗುವ ಹೊಸ ಸದಸ್ಯರಾದರೂ ಪರಿಹಾರದ `ಫಸಲು' ತರಬಹುದು ಎಂಬ ನಿರೀಕ್ಷೆ ಕೃಷಿಕರದು!

ಪ್ರತಿಕ್ರಿಯಿಸಿ (+)