ಪ್ರಚಾರ ಬಿರುಸು, ಗೆಲುವಿಗೆ ಕಸರತ್ತು

7
ಒಕ್ಕಲಿಗರ ಸಂಘದ ಚುನಾವಣೆ

ಪ್ರಚಾರ ಬಿರುಸು, ಗೆಲುವಿಗೆ ಕಸರತ್ತು

Published:
Updated:

ಮಂಡ್ಯ: ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕ ಸ್ಥಾನದ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಪ್ರಚಾರ ಬಿರುಸು ಪಡೆದುಕೊಂಡಿದೆ. ಗೆಲುವಿಗಾಗಿ ಎಲ್ಲ ಅಭ್ಯರ್ಥಿಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.ಖುದ್ದಾಗಿ ತಾವೇ ಭೇಟಿ ನೀಡುವುದರೊಂದಿಗೆ, ಬೆಂಬಲಿಗರ ಮೂಲಕ, ಪೋಸ್ಟರ್‌, ಬ್ಯಾನರ್‌, ವಿಸಿಟಿಂಗ್‌ ಕಾರ್ಡ್‌, ಹೊಸ ವರ್ಷದ ಕ್ಯಾಲೆಂಡರ್‌, ಡೈರಿ, ಕರಪತ್ರ ಹಾಗೂ ಪತ್ರಿಕೆಗಳ ಮೂಲಕ ಮತದಾರರ ಮನ ಗೆಲ್ಲಲು ಯತ್ನಿಸುತ್ತಿದ್ದಾರೆ. ಬೆಂಬಲಿಗರ ತಂಡ ಕಟ್ಟಿಕೊಂಡು ಹಗಲು–ರಾತ್ರಿ ಎನ್ನದೇ ಮನೆ, ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.ಜಿಲ್ಲೆಯಾದ್ಯಂತ ಹರಡಿಕೊಂಡಿರುವುದರಿಂದ ಮತದಾರರ ಮನೆಗಳಿಗೇ ತೆರಳಿ ಮತಯಾಚಿಸುವುದು ಕಷ್ಟವಾಗಿದೆ. ಕೆಲವು ಗ್ರಾಮಗಳಲ್ಲಿ ಬೆರಳೆಣಿಕೆಯಷ್ಟು ಮತಗಳಿರುವುದರಿಂದ ಅಲ್ಲಿಗೂ ತೆರಳಲು ಕೆಲವು ಅಭ್ಯರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ.ಜಿಲ್ಲೆಯಲ್ಲಿ ಒಟ್ಟು 37,881 ಮತದಾರರಿದ್ದಾರೆ. ಹೆಚ್ಚು ಮತಗಳನ್ನು ಹೊಂದಿರುವ ಮಂಡ್ಯ, ಮದ್ದೂರು ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಮತ ಪಡೆಯಲು ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ. ಜೊತೆಗೆ, ಉಳಿದ ತಾಲ್ಲೂಕುಗಳಲ್ಲಿಯೂ ಸಂಚರಿಸಿ ಬಂದಿದ್ದಾರೆ.ಹಾಲಿ ನಿರ್ದೇಶಕರು ಮತ್ತೊಮ್ಮೆ ತಮ್ಮನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದರೆ, ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಸೋತಿರುವ ಅಭ್ಯರ್ಥಿಗಳು ಈ ಬಾರಿಯಾದರೂ ಅವಕಾಶ ಮಾಡಿಕೊಡಬೇಕು ಎಂದು ಭಿನ್ನವಿಸಿಕೊಳ್ಳುತ್ತಿದ್ದಾರೆ. ಉಳಿದವರು ಹೊಸಮುಖಗಳಿಗೆ ಅವಕಾಶ ಮಾಡಿಕೊಡುವಂತೆ ಕೋರುತ್ತಿದ್ದಾರೆ.ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಚುನಾವಣೆ ಅಭ್ಯರ್ಥಿಗಳ ಫ್ಲೆಕ್ಸ್‌, ಬ್ಯಾನರ್‌ಗಳ ಹಾವಳಿ ಮಿತಿ ಮೀರಿದೆ. ಮತಯಾಚನೆಯ ಫ್ಲೆಕ್ಸ್‌ಗಳು ಹತ್ತಾರು ಅಡಿಗೊಂದರಂತೆ ಒಂದಲ್ಲ, ಒಂದು ಅಭ್ಯರ್ಥಿಯವು ಕಾಣ ಸಿಗುತ್ತಿವೆ.ಕೆಲವು ಅಭ್ಯರ್ಥಿಗಳು ಚುನಾವಣೆಗೆ ಮೂರು ತಿಂಗಳ ಮೊದಲೇ ಪ್ರಚಾರ ಆರಂಭಿಸಿದ್ದರೆ, ಇನ್ನು ಕೆಲವು ಅಭ್ಯರ್ಥಿಗಳು ಚುನಾವಣಾ ದಿನಾಂಕ ಪ್ರಕಟವಾದ ಮೇಲೆ ಪ್ರಚಾರ ಆರಂಭಿಸಿದ್ದಾರೆ. ಕೆಲವು ಕಡೆಗಳಲ್ಲಿ ತಾವೇ ಖುದ್ದಾಗಿ ಹೋದರೆ, ಇನ್ನು ಕೆಲವು ಕಡೆಗಳಲ್ಲಿ ಬೆಂಬಲಿಗರ ತಂಡವನ್ನು ಕಳುಹಿಸುತ್ತಿದ್ದಾರೆ.ಇಕ್ಕಟ್ಟಿಗೆ ತಂದಿರುವ ಸಂಬಂಧ: ಕಣದಲ್ಲಿರುವ ಸಾಕಷ್ಟು ಅಭ್ಯರ್ಥಿಗಳು ಸಂಬಂಧಿಗಳಾಗಿದ್ದಾರೆ. ಕೆಲವರು ಹತ್ತಿರದ ಸಂಬಂಧಿಗಳಾಗಿದ್ದಾರೆ, ಕೆಲವರೂ ಸ್ವಲ್ಪ ದೂರದ ಸಂಬಂಧಿಗಳಾಗಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳು ಸಂಬಂಧವನ್ನು ದೂರವಿಟ್ಟು ತಮ್ಮದೇ ಗೆಲುವಿಗೆ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಮತದಾರರಿಗೂ ಸಾಕಷ್ಟು ಅಭ್ಯರ್ಥಿಗಳೂ ಸಂಬಂಧಿಗಳಾಗಿದ್ದಾರೆ. ಕೆಲವು ಆತ್ಮೀಯ ಸ್ನೇಹಿತರೂ ಕಣದಲ್ಲಿದ್ದಾರೆ. ಇವರಲ್ಲಿ ಯಾರಿಗೆ ಮತ ಹಾಕಬೇಕು ಎಂಬುವ ಇಕ್ಕಟ್ಟನ್ನೂ ಮತದಾರರು ಎದುರಿಸುತ್ತಿದ್ದಾರೆ.ಹೊಸ ಮತದಾರ ನಿರ್ಣಾಯಕ: ಕಳೆದ ಬಾರಿ ಚುನಾವಣೆಯಲ್ಲಿ ಕೇವಲ 4,500 ಮತದಾರರಷ್ಟೇ ಇದ್ದರು. ಈ ಬಾರಿ ಮತದಾರರ ಸಂಖ್ಯೆ 37 ಸಾವಿರಕ್ಕೂ ಹೆಚ್ಚಾಗಿದೆ. ಹೊಸದಾಗಿ ಸೇರ್ಪಡೆಗೊಂಡಿರುವ ಮತದಾರರ ಚಿತ್ತ ಎತ್ತ ವಾಲುವುದೋ ಕಾದು ನೋಡಬೇಕು.

ತಾಲ್ಲೂಕು     ಮತದಾರರ ಸಂಖ್ಯೆ      ಮತಗಟ್ಟೆ ಸ್ಥಳ

ಮಂಡ್ಯ             14,023                ಸರ್ಕಾರಿ ಪದವಿಪೂರ್ವ ಕಾಲೇಜು (ಕಲ್ಲುಕಟ್ಟಡ)

ಮದ್ದೂರು         8.588                 ಎಚ್‌್.ಕೆ. ವೀರಣ್ಣಗೌಡ ಕಾಲೇಜು

ನಾಗಮಂಗಲ      6,915                 ಸರ್ಕಾರಿ ಪದವಿಪೂರ್ವ ಕಾಲೇಜು

ಮಳವಳ್ಳಿ         3,486                 ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆ

ಶ್ರೀರಂಗಪಟ್ಟಣ    1,871                 ಸರ್ಕಾರಿ ಪದವಿಪೂರ್ವ ಕಾಲೇಜು

ಕೆ.ಆರ್‌್್. ಪೇಟೆ    1,555                 ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು

ಪಾಂಡವಪುರ    1,443                 ಸರ್ಕಾರಿ ಪದವಿಪೂರ್ವ ಕಾಲೇಜು

ಕಣದಲ್ಲಿರುವ ಅಭ್ಯರ್ಥಿಗಳು

ವಿಧಾನ ಪರಿಷತ್‌ ಸದಸ್ಯ ಬಿ. ರಾಮಕೃಷ್ಣ, ಮಾಜಿ ಶಾಸಕ ಎಂ. ಶ್ರೀನಿವಾಸ್‌, ಕೆ.ವಿ. ಕುಮಾರ್‌, ಡಾ.ಬಿ.ಸಿ.   ಬೊಮ್ಮಯ್ಯ, ಡಿ.ಎನ್‌. ಬೆಟ್ಟೇಗೌಡ, ಡಾ.ಎಂ.ಎಸ್‌. ಲೋಕೇಶ್‌ಬಾಬು, ಎಲ್‌. ಕೃಷ್ಣ, ಟಿ. ವರಪ್ರಸಾದ್‌ ಸಿ.ಜಿ. ಕುಮಾರಗೌಡ (ಲಕ್ಕಪ್ಪ), ಸಿ.ಎಂ. ದ್ಯಾವಪ್ಪ, ಎಚ್‌.ಎಂ. ನಾರಾಯಣಮೂರ್ತಿ, ಡಾ.ಬಿ. ಶಿವಲಿಂಗಯ್ಯ, ಜಿ.ಎಂ. ರವೀಂದ್ರ, ಚಂದ್ರಶೇಖರ್‌ (ಮೂಡ್ಯ ಚಂದ್ರು), ಜಿ.ಬಿ. ಕೃಷ್ಣ (ಡಾಬಾಕಿಟ್ಟಿ), ಬಿ.ಎನ್‌. ತಿರುಮಲೇಗೌಡ, ಬಿ.ಎಚ್‌. ನಾಗಣ್ಣ, ಎನ್‌. ಬಾಲಕೃಷ್ಣ (ನೆಲ್ಲಿಗೆರೆಬಾಲು), ಎ. ನಾಗರಾಜು, ಪಿ.ಎನ್‌. ಯತೀಶ್‌ಬಾಬು, ಕೆ.ಬಿ.ಎಸ್‌. ಗಿರೀಶ್‌, ಟಿ.ಟಿ. ಅನಸೂಯಾ, ಎಚ್‌್್.ಬಿ. ಬಂದಿಗೌಡ, ಬೆಟ್ಟೇಗೌಡ 

ಮತದಾನ: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕ ಚುನಾವಣೆಗೆ ಜ. 5ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry