ಬುಧವಾರ, ನವೆಂಬರ್ 20, 2019
22 °C
ಪ್ರತಿ ಸಿಳ್ಳೆ, ಚಪ್ಪಾಳೆಗೂ `ಬೆಲೆ' ಇದೆ !

ಪ್ರಚಾರ ಸಭೆಯಲ್ಲಿ ಘೋಷಣೆಗೂ ಹಣ

Published:
Updated:

ಚಿಕ್ಕಬಳ್ಳಾಪುರ: ಪ್ರಚಾರದ ಕಾವು ಏರುತ್ತಿರುವ ಬೆನ್ನಲ್ಲೇ ಚುನಾವಣೆಗೆ ಸಂಬಂಧಿಸಿದಂತೆ ಮತದಾರರನ್ನು ಓಲೈಸುವಿಕೆ ಬಗ್ಗೆ ಹಲವು ರೀತಿಯ ಮಾತುಗಳು ಕೇಳಿ ಬರುತ್ತಿವೆ. ಪ್ರಚಾರ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದು, ಅವರನ್ನು ಊಟ ಮಾಡಿಸುವುದು, ಚಪ್ಪಾಳೆ ತಟ್ಟುವಂತೆ ಮತ್ತು ಶಿಳ್ಳೆ ಹಾಕುವಂತೆ ಮಾಡುವುದು, ಅವರಿಂದ ಜೈ ಜೈ ಅನ್ನಿಸುವುದು ಸೇರಿದಂತೆ ಇತರ ಮಾರ್ಗೋಪಾಯ ಕಂಡುಕೊಳ್ಳಲು ಕೆಲ ಅಭ್ಯರ್ಥಿಗಳು ಭಾರಿ ಕಸರತ್ತು ನಡೆಸುತ್ತಿದ್ದಾರೆ.ಚುನಾವಣಾ ಆಯೋಗವು ನಿಗದಿಪಡಿಸಿರುವ 16 ಲಕ್ಷ ರೂಪಾಯಿ ಖರ್ಚುವೆಚ್ಚದ ಮಿತಿಯಲ್ಲಿ ಎಲ್ಲವನ್ನೂ ನಿಭಾಯಿಸಲು ಸಾಧ್ಯವೇ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಇನ್ನೂ ಕೆಲವರು, `ಚುನಾವಣಾ ಆಯೋಗಕ್ಕೆ ಗೊತ್ತಾಗದ ರೀತಿಯಲ್ಲಿ ಅಭ್ಯರ್ಥಿಗಳು ಹೇಗೆ ಖರ್ಚು ವೆಚ್ಚ ಸರಿದೂಗಿಸುತ್ತಿದ್ದಾರೆ' ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.ಸ್ಪರ್ಧಿಸಿರುವ ಕೆಲ ಅಭ್ಯರ್ಥಿಗಳ ಮಾತುಗಳನ್ನು ಕೇಳಲೆಂದೇ ಕೆಲ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಆದರೆ ಕೆಲ ಕಡೆ ಅಭ್ಯರ್ಥಿಗಳೇ ಬೇರೆ ಬೇರೆ ತಂತ್ರಗಳನ್ನು ಅನುಸರಿಸಿ, ಪ್ರಚಾರ ಸಭೆಯಲ್ಲಿ ಭಾರಿ ಜನರು ಇರುವಂತೆ ನೋಡಿಕೊಳ್ಳುತ್ತಿದ್ದಾರೆ.`ಅಪಾರ ಸಂಖ್ಯೆ ಜನರನ್ನು ಸೇರಿಸುವಷ್ಟು ಸಾಮರ್ಥ್ಯ ಮತ್ತು ಸರಿಯಾಗಿ ಭಾಷಣ ಮಾಡಲು ಬರದಿದ್ದರೂ ಹಿರಿಯ ಬೆಂಬಲಿಗರ ಸಹಾಯದಿಂದ ಪ್ರಚಾರ ಸಭೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರಚಾರಸಭೆಯು ಎಷ್ಟೇ ದೀರ್ಘವಾಗಿದ್ದರೂ ಅಥವಾ ನಿರಾಸಕ್ತಿಯಿಂದ ಕೂಡಿದ್ದರೂ ಜನರು ಸಭೆಯಲ್ಲಿ ಕೂತಿರುತ್ತಾರೆ.ಇಂತಿಷ್ಟು ಅವಧಿ ಚಪ್ಪಾಳೆ ತಟ್ಟುವಂತೆ ಮತ್ತು ಶಿಳ್ಳೆ ಹೊಡೆಯುವಂತೆ ಅವರಿಗೆ ಮೊದಲೆಯೇ ಸೂಚಿಸಲಾಗಿರುತ್ತದೆ. ಅವರು ಸೂಚನೆ ಕೊಟ್ಟಂತೆಯೇ ನಡೆದಲ್ಲಿ, ಪ್ರಚಾರ ಸಭೆಯು ಯಶಸ್ವಿಯಾಯಿತೆಂದೇ ಅರ್ಥ' ಎಂದು ರಾಜಕಾರಣಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.`ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ಸಭೆಗಳನ್ನು ನಡೆಸಲು ನಾವು ಹೆಚ್ಚು ಶ್ರಮ ಹಾಕುವ ಅಗತ್ಯವಿರುವುದಿಲ್ಲ. ಸಭೆ ನಡೆಯುವ ಹಿಂದಿನ ದಿನವೇ ಆಯಾ ಗ್ರಾಮಕ್ಕೆ ಹೋಗುತ್ತೇವೆ. ಅಲ್ಲಿನ ಮುಖಂಡರೊಂದಿಗೆ ಮಾತನಾಡುತ್ತೇವೆ. ನಮ್ಮ ಅಭ್ಯರ್ಥಿ ಬಂದಾಗ, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದು ನಿಮ್ಮ ಜವಾಬ್ದಾರಿ ಎನ್ನುತ್ತೇವೆ. ಜನರನ್ನು ಸೇರಿಸುವುಷು ಕಷ್ಟೆವೆಂದು ಮುಖಂಡರು ಹೇಳಿದರೆ, ಊಟ ಮತ್ತು ಇತರ ಖರ್ಚು-ವೆಚ್ಚ ನೋಡಿಕೊಳ್ಳುತ್ತೇವೆ. ನೀವೇನೂ ಚಿಂತೆ ಮಾಡಬೇಡಿ ಎಂದು ಖರ್ಚು-ವೆಚ್ಚ ನೋಡಿಕೊಳ್ಳಲು ಅವರಿಗೆ ಸ್ವಲ್ಪ ಹಣ ನೀಡುತ್ತೇವೆ' ಎಂದು ಅಭ್ಯರ್ಥಿಯ ಬೆಂಬಲಿಗರೊಬ್ಬರು ತಿಳಿಸಿದರು.`ಮಾರನೇ ದಿನ ಅಭ್ಯರ್ಥಿಯು ಆಗಮಿಸಿದ್ದೇ ತಡ, ಭಾರಿ ಸಂಖ್ಯೆಯಲ್ಲಿ ಜನರು ಬಂದುಬಿಡುತ್ತಾರೆ. ಅಭ್ಯರ್ಥಿಯು ನುಡಿಯುವ ಪ್ರತಿಯೊಂದು ಮಾತಿಗೂ ಚಪ್ಪಾಳೆ ತಟ್ಟುತ್ತಾರೆ. ಜೈ ಜೈ ಎನ್ನುತ್ತಾರೆ. ಕೆಲವರಂತೂ ಕುಡಿದ ಮತ್ತಿನಲ್ಲೂ ಜೈ ಜೈ ಎನ್ನುತ್ತಾರೆ. ಪ್ರಚಾರ ಸಭೆಗೆ ಬರುವ ಪತ್ರಕರ್ತರು ಮತ್ತು ಬೇರೆ ಬೇರೆ ವರ್ಗಗಳ ಜನರು ಕೂಡ ಬೆಚ್ಚಿಬೀಳಬೇಕು. ಭಾಷಣ ಮುಗಿದ ಕೂಡಲೇ ಅವರೆಲ್ಲ ಚದುರಿಹೋಗುತ್ತಾರೆ. ಮತ್ತೆ ಮುಂದಿನ ಸಭೆಯ ಸಿದ್ಧತೆಯಲ್ಲಿ ನಾವು ತೊಡಗಬೇಕಾಗುತ್ತದೆ' ಎಂದು ಅವರು ತಿಳಿಸಿದರು.ಸಭೆ ಪೂರ್ಣಗೊಳ್ಳುವವರೆಗೆ ಅವರನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದು ತುಂಬ ಕಷ್ಟ. ಅದೇ ಜನರು ಇನ್ನೊಂದು ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಿರುವ ಕಾರಣ, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಯಾವುದೇ ರೀತಿಯ ಸಮಸ್ಯೆ ಉಂಟು ಮಾಡಬಾರದು. ಅವರು ನಮ್ಮಂದಿಗೇನೆ ಇರುವಂತೆ ನೋಡಿಕೊಳ್ಳಬೇಕು' ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)