ಪ್ರಜಾತಂತ್ರದ ವಿರುದ್ಧದ ಷಡ್ಯಂತ್ರ

7

ಪ್ರಜಾತಂತ್ರದ ವಿರುದ್ಧದ ಷಡ್ಯಂತ್ರ

Published:
Updated:ಮುಖ್ಯಮಂತ್ರಿಗಳ ಇತ್ತೀಚಿನ ‘ಮಾಟ - ಮಂತ್ರ’ ‘ಜೀವ ಭಯ’ ಇತ್ಯಾದಿ ಪ್ರಲಾಪಗಳು ಗಾಬರಿ ಹುಟ್ಟಿಸುವಂತಿದೆ. ಅವರಿಗೆ ಜೀವಭಯ, ನಮಗೆ ಅಂದರೆ ಈ ರಾಜ್ಯದ ಜನತೆಗೆ ವೈಜ್ಞಾನಿಕ ಮನೋಭಾವದ ಅಡಿಪಾಯದಲ್ಲಿ ನಿರ್ಮಾಣಗೊಳ್ಳಬೇಕಾದ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಗಾಬರಿ. ಎಂದಿನಂತೆ ತಮ್ಮ ವಿರೋಧಿಗಳು ತಮ್ಮ ವಿರುದ್ಧದ ‘ಷಡ್ಯಂತ್ರ’ವನ್ನು ಮುಂದುವರೆಸುತ್ತಲೇ ಇದ್ದಾರೆ ಎಂದು ಹಲುಬಿದ್ದಾರೆ. ವಿಶೇಷವಾಗಿ ಹಾಗೂ ಸಹಜವಾಗಿ ಅವರು ಇದಕ್ಕೆಲ್ಲ ಹೊಣೆ ಮಾಡುವುದು ವಿಪಕ್ಷ ನಾಯಕರನ್ನು.ಹಿಂದೆ 70ರ ದಶಕದಲ್ಲಿ ತಮ್ಮ ಮಾನಸಿಕ ಅಸ್ಥಿರತೆ ತೀವ್ರಗೊಳ್ಳುತ್ತಿದ್ದಂತೆ ಇಂದಿರಾ ಗಾಂಧಿ ಅವರೂ ಇದೇ ರೀತಿ ಸಾರ್ವಜನಿಕವಾಗಿ ಗೋಳುಗರೆಯುತ್ತಿದ್ದರು ಎಂಬ ನೆನಪೇನೂ ಮಾಸಿಲ್ಲ. ಆದರೆ ಮುಖ್ಯಮಂತ್ರಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಮಾಟ, ಮಂತ್ರ, ವಾಮಮಾರ್ಗ’ ಎಂದು ಹೊಸದಾಗಿ ಸೇರಿಸಿದ್ದಾರೆ. ಬಿಎಸ್‌ವೈ ಅವರಿಗಾಗಲೀ, ಅವರ ಪಕ್ಷಕ್ಕಾಗಲೀ ಪ್ರಜಾಪ್ರಭುತ್ವದ ಮೂಲ ಸತ್ಯಗಳ ಬಗ್ಗೆ ಅರಿವಿದ್ದಂತೆ ಇಲ್ಲ. ವಿಪಕ್ಷವಿರುವುದೇ ಅಧಿಕಾರಾರೂಢ ಪಕ್ಷವನ್ನು ಅಲ್ಲಾಡಿಸುತ್ತಿರಲು. ಆ ಅಧಿಕಾರವನ್ನು ತಾವು ಪಡೆಯಲು ಬಿಎಸ್‌ವೈ ಅವರು ಎಷ್ಟು ತಮ್ಮ ಜೀವಭಯದ ಆತಂಕದಲ್ಲಿ ನಡುಗುತ್ತಿದ್ದಾರೆಂದರೆ, ಅವರು ದಿನ ಪತ್ರಿಕೆಗಳನ್ನು ಓದುವುದು ಬಿಟ್ಟ ಹಾಗೆ ಕಾಣುತ್ತದೆ. ತಮ್ಮದೇ ಪಕ್ಷ ಸಂಸತ್ತಿನಲ್ಲಿ ಹೇಗೆ ನಡೆದುಕೊಳ್ಳುತ್ತಿದೆ ಎಂಬುದರ ತಿಳಿವೇನಾದರೂ ಅವರಿಗಿದೆಯೆ ಅಥವಾ ಭಯಂಕರ ಆತ್ಮವಂಚಕ ಕುರುಡಿಗೆ ಬಲಿಯಾಗಿದ್ದಾರೆಯೆ?ಆಯಿತು, ವಾದಕ್ಕಾಗಿ ವಿಪಕ್ಷದವರು ತಮ್ಮ ರಕ್ತವನ್ನು ಬಸಿದುಬಿಡಲೇ ಕಾದಿದ್ದಾರೆ ಎಂದು ಭಾವಿಸೋಣ. ಆದರೂ ಬಿಎಸ್‌ವೈ ಅವರು ಕೊಂಚ ಗಮನ ತಮ್ಮತ್ತಲೇ ಹರಿಸಬೇಕು ಎಂದು ಬಯಸುತ್ತೇನೆ. ಎರಡೂವರೆ ವರ್ಷಗಳಾಯಿತು ಮುಖ್ಯಮಂತ್ರಿಗಳಾಗಿ. ಅಂದಿನಿಂದ ಇಂದಿನವರೆವಿಗೆ ಯಾವ ಟಿ.ವಿ. ವಾಹಿನಿ ಹಾಕಿದರೂ ಸಿಎಂ ಅವರು ಒಂದಲ್ಲ ಒಂದು ಊರು, ಒಂದಲ್ಲ ಒಂದು ದೇವಸ್ಥಾನ, ಪೂಜೆ, ಯಾಗ, ಹೋಮ ಎಂದು ಆ ಸಂದರ್ಭಕ್ಕೆ ತಕ್ಕ ಕಾಸ್ಟೂಮ್‌ಗಳು ಧರಿಸುತ್ತಿದ್ದಾರೆ. ಅಲ್ಲಿ ಗೋಡೆ ಮುಟ್ಟಿ, ಕಣ್ ಒತ್ತಿಕೋ, ಇಲ್ಲಿ ಕಲ್ಲು ಮುಟ್ಟಿ, ಮತ್ತೊಂದೆಡೆ ಮಂಗಳಾರತಿಗೆ ಕೈಮುಗಿ, ಜೇಬಿನಿಂದ ಅದೆಷ್ಟೊ (ದೇವರಿಗೇ ಗೊತ್ತು) ದಕ್ಷಿಣೆ ತೆಗೆದು ಹಾಕು, ಸಿಟ್ಟಿನಲ್ಲಿ ಸದಾ ಮಾನಸಿಕ ಒತ್ತಡದ ಸ್ಥಿತಿಯಲ್ಲಿ ದುಗುಡದ ಮುಖ ಹೊತ್ತು ಕಾಣುತ್ತಾರೆ. ದೇವರೆದುರು ನಿರೀಕ್ಷಿಸಬಹುದಾದ ಪ್ರಸನ್ನತೆ, ಶಾಂತಭಾವ ಸಂಪೂರ್ಣ ನಾಪತ್ತೆಯಾಗಿರುತ್ತದೆ. ಇವಿಷ್ಟೂ ಅವರ ವೈಯಕ್ತಿಕ ವಿಷಯಗಳು.ಆದ್ದರಿಂದಲೇ ನಾನು ಕೇಳುವುದು: ‘ತಮ್ಮ ಹಿಂದೆ ಟಿ.ವಿ. ಛಾಯಾಗ್ರಾಹಕರ ದಂಡನ್ನೇಕೆ ಒಯ್ಯುತ್ತೀರಿ?’ ಕಾರಣ ಸ್ಪಷ್ಟ: ಒಂದು, ತಮ್ಮದೇ ಭಯ ಆತಂಕಗಳ ಪರಿಹಾರಕ್ಕೆ ಮೊರೆ ಹೋಗುವುದು; ಮತ್ತೊಂದು ಮತ್ತು ಸುಪ್ತವಾಗಿಟ್ಟಿರುವ ನಿಜವಾದ ಕಾರಣ: ನೋಡುವ ಜನಗಳನ್ನು ಮರುಳುಗೊಳಿಸುವುದು. ‘ಆಹಾ, ನಮ್ಮ ಮುಖ್ಯಮಂತ್ರಿಗಳು ಎಷ್ಟು ದೈವಭಕ್ತರಪ್ಪ! ಎಂಥ ಅಚಲ ನಂಬಿಕೆ. ಅಷ್ಟೇ ಅಲ್ಲ, ನಿರಾಯಾಸವಾಗಿ ನಮಗೂ ನಾವು ಇದುವರೆಗೆ ಕೇಳದೇ ಇರುವ ಮತ್ತೆ ಎಂದೂ ಕಾಣಲಾಗದ ಧರ್ಮಕ್ಷೇತ್ರಗಳೆಲ್ಲದರ ದರ್ಶನವಾಯಿತು’ ಎಂದು ಧನ್ಯಭಾವದಲ್ಲಿ ಸಿಎಂ ಅವರನ್ನು ಅಭಿನಂದಿಸುತ್ತ ‘ಇನ್ನೂ ಇಪ್ಪತ್ತು ವರ್ಷ ಇವರೇ ನಮ್ಮ ನಾಯಕರಾಗಿರಲಿ’ ಎಂದು ಹರಸಿಯೂ ಬಿಡುತ್ತಾರೆ ಎಂಬ ಭ್ರಮೆಯ ಮರಳಿನ ಮೇಲೆ ಕಟ್ಟುವ ಆಶಾಸೌಧ. ಇದು ನಿಜವಾದ ಕಾರಣ. ಇಷ್ಟೂ ಸಾಲದೆಂಬಂತೆ ಮಠಗಳಿಗೆ ಕೋಟಿ ಕೋಟಿ ಬೊಕ್ಕಸದ ಹಣ. ಎಲ್ಲ ಧರ್ಮಗುರುವನ್ನೂ ಚೆನ್ನಾಗಿ ಗೌರವಿಸಿ ಒಂದು ರೀತಿ ಅವರನ್ನು ದಾಕ್ಷಿಣ್ಯದ ಕಟ್ಟಿನಲ್ಲಿ ಬಂಧಿಸಿ ಇಟ್ಟಿರುವುದು. ಅದಕ್ಕೆ ಅವರುಗಳೂ ಅವಕಾಶ ಸಿಕ್ಕಾಗಲೆಲ್ಲ ‘ಕ್ಲೀನ್ ಚಿಟ್’ ದಯಪಾಲಿಸುವುದು ಕೂಡ.

‘ಮುಖ್ಯಮಂತ್ರಿಗಳೂ ಮತ್ತು ಅವರ ಪಕ್ಷದ ಇತರರೂ ಎರಡೂವರೆ ವರ್ಷಗಳಿಂದ ರಾಜ್ಯದ ಜನತೆಯ ವಿರುದ್ಧ, ಪ್ರಜಾಪ್ರಭುತ್ವದ ವಿರುದ್ಧ ಭವಿಷ್ಯದ ಕನಸುಗಳ ವಿರುದ್ಧ ಅವಿರತವಾಗಿ ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರ ಇದು’ ಎಂದು ವಿಷಾದದಿಂದ ಹೇಳಲೇಬೇಕಾಗಿದೆ. ಇಡೀ ದೇಶದಲ್ಲಿ ಭಾಷಾ ಬಳಕೆಯಲ್ಲಿ, ಕನಿಷ್ಠ ಪರಸ್ಪರ ಸೌಜನ್ಯದ ನಡತೆಯಲ್ಲಿ ಇಷ್ಟು ಹದಗೆಟ್ಟ ಇನ್ನೊಂದು ಸರ್ಕಾರವಿಲ್ಲ. ಇನ್ನೊಬ್ಬ ನಾಯಕನಿಲ್ಲ. ತಮ್ಮದೇ ಪಕ್ಷದ ರಾಷ್ಟ್ರದ ಇತರೆ ನಾಯಕರೇ ಈ ಸರ್ಕಾರದ ಬಗ್ಗೆ ಏನು ಹೇಳುತ್ತಿದ್ದಾರೆ ಎಂಬುದು ಸಿಎಂ ಅವರಿಗೆ ಗೊತ್ತಿರದೇ ಇರಲಿಕ್ಕಿಲ್ಲ. ‘ನನ್ನ ಅಭಿವೃದ್ಧಿಯನ್ನು ಸಹಿಸದವರ ಕುತಂತ್ರ’ ‘ದ್ವೇಷ’ ಎಂದೆಲ್ಲ ಹೇಳುತ್ತ ಈ ಅಭಿವೃದ್ಧಿ ಪದದ ಬಗೆಗೇ ತೀವ್ರ ಅನುಮಾನಗಳು ಹುಟ್ಟುವ ರೀತಿ ಮಾಡುತ್ತಿದ್ದಾರೆ. ಅಭಿವೃದ್ಧಿ ಅಂದರೆ ಕಣ್ಣಿಗೆ ಹೊಡೆಯುವ ನಿದರ್ಶನಗಳ ಪಟ್ಟಿಯಲ್ಲ.ಜನತೆಯ ಮನಸ್ಸಿನಲ್ಲಿ ಮೂಡುತ್ತ ಹೋಗುವ, ಅರಳುತ್ತ ಹೋಗುವ ತೃಪ್ತಿ, ಸಮಾಧಾನ ಮತ್ತು ಎಲ್ಲರೊಡನೆ ಬಾಳಿ ಬದುಕುವುದರಲ್ಲೂ ಕುರಿತಾಗಿ ಹುಟ್ಟಿದ ವಿಶ್ವಾಸ. ‘ನಾನು ಮನೆ ಬಿಟ್ಟು ಹೊರಟ ಮೇಲೆ ಮನೆ ಸೇರುವುದರ ಬಗೆಗೆ ನನಗೆ ನಂಬಿಕೆಯಿಲ್ಲ’ ಎಂದು ಒಬ್ಬ ಮುಖ್ಯಮಂತ್ರಿ ಹೇಳಿಕೊಳ್ಳುವುದೆಂದರೆ ಇದಕ್ಕಿಂತ ನೈತಿಕ ಅಧಃಪತನದ ಸ್ಥಿತಿಯನ್ನು ಒಂದು ರಾಜ್ಯ ಮುಟ್ಟಲಾಗದು. ಎಂದಿಗೂ ಕೂಡ ತಮ್ಮ ಪಕ್ಷದ ಅಂಗ ಸಂಘಟನೆಗಳ ವರ್ತನೆಗಳಿಂದ ಎಷ್ಟು ಸಾವಿರ ಸಾವಿರ ತಂದೆ ತಾಯಿಗಳು ‘ತಮ್ಮ ಮಕ್ಕಳು ಅದರಲ್ಲಿಯೂ ಹೆಣ್ಣು ಮಕ್ಕಳು ಮನೆ ಬಿಟ್ಟು ಹೋಗಿ ಮನೆ ಸೇರುವವರೆಗೆ ಧೈರ್ಯವಿಲ್ಲ’ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂಬುದರ ಅರಿವು ಬಿಎಸ್‌ವೈ ಅವರಿಗಿದ್ದ ಹಾಗೆ ಇಲ್ಲ. ಹೀಗಾಗಿಯೇ ಇಡೀ ರಾಜ್ಯದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತಿದೆ.ಇಷ್ಟೆಲ್ಲವನ್ನೂ ಒಬ್ಬ ವ್ಯಕ್ತಿಯ ‘ಸ್ವಂತ ನಂಬಿಕೆ’ ಎಂದೂ ಹಾಗಾಗಿ ಅವು ‘ನಗಣ್ಯ’ವೆಂದೂ ನಿರಾಕರಿಸಲು ಸಾಧ್ಯವೆ? ನಂಬಿಕೆ ಎನ್ನುವ ಶಬ್ದವನ್ನು ಬಳಸುವಾಗ ನಾವು ದುಪ್ಪಟ್ಟು ಎಚ್ಚರಿಕೆ ವಹಿಸಬೇಕು. ಇದು ಕೇವಲ ಒಬ್ಬ ವ್ಯಕ್ತಿಯ ಮೌಢ್ಯವಲ್ಲ. ಇಡೀ ಸಮುದಾಯಕ್ಕೆ ಸಾಂಕ್ರಾಮಿಕವಾಗಿ ಹಬ್ಬಬಹುದಾದ ಒಂದು ‘ಪಿಡುಗು’. ಇಂಥದಕ್ಕೆ ಬಲಿಬಿದ್ದವರನ್ನು ಕನಿಕರಿಸಬಹುದೇ ಹೊರತು ಸಹಾನುಭೂತಿ ಸಾಧ್ಯವಿಲ್ಲ. ಕನಿಕರವೆಂಬುದೂ ಕೂಡ ಬಹು ಪ್ರಬುದ್ಧ ರೀತಿಯ ಭಾವಸ್ಪಂದನ. ಒಪ್ಪದೆಯೂ ವ್ಯಕ್ತಿಯ ಜೊತೆ ನಾವು ವಿಕಾಸ, ಭವಿಷ್ಯ, ಕಲ್ಪನೆ ಇವುಗಳ ಕುರಿತು ಚರ್ಚಿಸಬಹುದು.ಸಹಾನುಭೂತಿ ಎಂದರೆ ಸಹ ಅನುಭೂತಿ. ನಾವೂ ಕೂಡ ಗುಟ್ಟಾಗಿ ಅವನ ಮೌಢ್ಯಗಳ ಕುರಿತಾದ ಸಹಮತ ತಾಳಿದ್ದೇವೆ ಎಂಬ ಅರ್ಥ ಸಾಧ್ಯವಾಗಿ ಬಿಡುತ್ತದೆ. ಅದರಲ್ಲಿಯೂ ವ್ಯಕ್ತಿ ರಾಜ್ಯದ ಮುಂಚೂಣಿಯಲ್ಲಿರುವ ನಾಯಕನೂ ಆಗಿದ್ದರೆ ಅವನ ವೈಯಕ್ತಿಕ ಆತಂಕ, ಭಯ, ಸ್ವಾರ್ಥದಿಂದ ಕೂಡಿದ ಭವಿಷ್ಯದ ಬಗೆಗಿನ ಕಳವಳಗಳು ಇಡೀ ಜನತೆಯ ಮೇಲೆ ಪರಿಣಾಮ ಬೀರಿ ಬಿಡುತ್ತವೆ. ಎಂದೇ ಇಲ್ಲಿ ಭಾವುಕತನ ಒಪ್ಪಲಾಗದ ಭಾವ. ಕಟುವಾದ ಖಂಡನೆ ಮತ್ತು ಪರಿಸ್ಥಿತಿಯ ಹತೋಟಿ ಇವು ಪ್ರಜಾತಂತ್ರದಲ್ಲಿನ ಜನಗಳ ಕರ್ತವ್ಯ.ನಮ್ಮ ಮುಖ್ಯಮಂತ್ರಿಗಳದು ವೈಯಕ್ತಿಕ ಭಯಗಳಿರಬಹುದು. ಆದರೆ ನಾವು ಎಚ್ಚರತಪ್ಪಿದರೆ ಅವರ ಮಾಟ ಮಂತ್ರದ ಭಯ, ಜೀವ ಭಯ ಎಲ್ಲವೂ ನಮ್ಮದೇ ಆಗಿಬಿಡುತ್ತದೆ. ಮಾಟ ಮಂತ್ರಗಳನ್ನು ಎಚ್ಚರ ತಪ್ಪದ ಜನತೆಯ ಮೇಲೆ ವ್ಯವಸ್ಥೆ ಭಾರಿ ಸಂಭ್ರಮದಲ್ಲಿ ಪ್ರಯೋಗಿಸಿ ಯಶಸ್ವಿಯಾಗಿ ಬಿಡಬಹುದು. ಆದರೆ ಸಿಎಂ ಅವರಿಗೆ ಒಂದು ವಿನಯಪೂರ್ವಕ ಎಚ್ಚರಿಕೆಯ ಮಾತು: ಹೀಗೆ ಮಾಟ, ಮಂತ್ರ ಎಂದು ಹೇಳುತ್ತ ಜೀವಭಯದಲ್ಲಿ ತಲ್ಲಣಿಸುತ್ತಿರುವ ತಮ್ಮ ನಾಯಕನನ್ನು ಕಂಡು ಜನಕ್ಕೆ ಗುಟ್ಟಾಗಿ ಈ ಮನುಷ್ಯನಿಗಿಂತ ಬೇರೆ ಯಾರನ್ನಾದರೂ ನಮ್ಮ ಮುಖ್ಯಮಂತ್ರಿಯನ್ನಾಗಿ ಮಾಡಿಕೊಳ್ಳಬಹುದಲ್ಲವೆ ಎಂದೆನಿಸಿಬಿಡಬಹುದು. ಎಂದೇ ತಮ್ಮ ಭಯಗಳನ್ನು ಎಲ್ಲೆ ಮೀರದ ಹಾಗೆ ನೋಡಿಕೊಳ್ಳುವುದು ಒಳ್ಳೆಯದು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry