ಪ್ರಜಾಪ್ರಭುತ್ವಕ್ಕೆ ಪರ್ಯಾಯ ಬೇರೆ ಇಲ್ಲ

7

ಪ್ರಜಾಪ್ರಭುತ್ವಕ್ಕೆ ಪರ್ಯಾಯ ಬೇರೆ ಇಲ್ಲ

Published:
Updated:

ಕಡೂರು (ಲಕ್ಷ್ಮೀಶ ವೇದಿಕೆ): `ಪ್ರಜಾಪ್ರತಿನಿಧಿಗಳ ತಪ್ಪನ್ನು ಎತ್ತಿ ಹೇಳುವ ಅಭಿವ್ಯಕ್ತಿ ಸ್ವಾತಂತ್ರ್ಯವಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರ್ಯಾಯ ಬೇರೊಂದಿಲ್ಲ~ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅಭಿಪ್ರಾಯಪಟ್ಟರು.ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನ ಮಂಗಳವಾರ `ಪ್ರಜಾಪ್ರಭುತ್ವ ದಿಕ್ಕು-ದೆಸೆ~ ವಿಷಯ ಕುರಿತು ಅವರು ಮಾತನಾಡಿದರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಟೀಕಿಸಿ ಅಮೆರಿಕ ಮತ್ತು ಯುರೋಪ್‌ನ ರಾಜಕೀಯ ವ್ಯವಸ್ಥೆಗೆ ಹೆಗ್ಗಳಿಕೆ ನೀಡುವ ಚಿಂತಕರು, ಅಮೆರಿಕ ಸ್ವಾತಂತ್ರ್ಯಾನಂತರ 131 ವರ್ಷಗಳ ಕಾಲ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿರಲಿಲ್ಲ ಮತ್ತು ಎಲ್ಲರಿಗೆ ಮಾದರಿ ಎಂದು ಬಿಂಬಿತವಾಗಿರುವ ಲಿಖಿತ ಸಂವಿಧಾನ ಹೊಂದಿರುವ ಬ್ರಿಟನ್ ಕೂಡಾ 110 ವರ್ಷಗಳವರೆಗೆ ಇದಕ್ಕೆ ಹೊರತಾಗಿರಲಿಲ್ಲ.ಆದರೆ, ಭಾರತ ಸ್ವಾತಂತ್ರ್ಯ ಗಳಿಸಿದ ಆರು ದಶಕಗಳಲ್ಲಿ ಎಂದಿಗೂ ಮಹಿಳೆಯರನ್ನು ಅವರ ಮತದಾನದ ಹಕ್ಕಿನಿಂದ ವಿಮುಖಗೊಳಿಸಿರಲಿಲ್ಲ ಎಂಬ ಅಂಶವನ್ನು ಗಮನಿಸಬೇಕು ಎಂದು ನುಡಿದರು.

ಗ್ರಾಮಗಳು ಪ್ರಮುಖವಾಗಿರುವ ಭಾರತದಲ್ಲಿ 5,68,000 ಸಾವಿರ ಹಳ್ಳಿಗಳು, 10ಲಕ್ಷ ಮತಗಟ್ಟೆಗಳು, 1,618 ಭಾಷೆಗಳು, 52ಬುಡಕಟ್ಟುಗಳು, 1,200 ರಾಜಕೀಯ ಪಕ್ಷಗಳಿದ್ದು ವಿವಿಧತೆಯಲ್ಲಿ ಏಕತೆ ಹೊಂದಿರುವ ನಾವು ಯುರೋಪ್ ಮತ್ತು ಅಮೆರಿಕ ಖಂಡಗಳ ಜನಸಂಖ್ಯೆಗಿಂತ ಹೆಚ್ಚಿನ ಮತದಾರರನ್ನು ಹೊಂದಿದ್ದೇವೆ.

 

ಅನೇಕ ಅಡೆತಡೆಗಳು ಬಂದರೂ, ನ್ಯೂನತೆ ಮತ್ತು ತಪ್ಪುಗಳಿದ್ದರೂ ಕಳೆದ 6 ದಶಕಗಳಲ್ಲಿ ನಮ್ಮಲ್ಲಿ ಪ್ರಜಾಪ್ರಭುತ್ವ ಬಲವಾಗಿ ಬೇರೂರಿದೆ.  ನಮ್ಮ ದೇಶಕ್ಕೆ ಅಧ್ಯಕ್ಷೀಯ ಆಡಳಿತ ಬೇಕೋ ಅಥವಾ ಜನಸಾಮಾನ್ಯರ ಅಭಿವ್ಯಕ್ತಿಗೆ ತಕ್ಕಂತೆ ವರ್ತಿಸುವ ಜನ ಪ್ರತಿನಿಧಿಗಳ ಸಂಸತ್ ಬೇಕೋ ಎಂಬ ಕುರಿತು ಸಂವಿಧಾನ ತಜ್ಞ ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಸುಮಾರು ಒಂದು ಸಾವಿರ ಸಭೆಗಳು ನಡೆದು 30ದಿನಗಳ ಸುದೀರ್ಘ ಚರ್ಚೆ ನಡೆದು ಪ್ರಜಾಪ್ರಭುತ್ವವೇ ಸೂಕ್ತ ಎಂದು ನಿರ್ಣಯ ಕೈಗೊಳ್ಳಲಾಯಿತು ಎಂದು ವಿವರಿಸಿದರು.ನಮ್ಮ ನೆರೆ ದೇಶಗಳಾದ ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಶ್ರೀಲಂಕಾ ಮತ್ತು ಬರ್ಮಾ, ಚೀನಾಗಳು ಕೂಡಾ ಅಧ್ಯಕ್ಷೀಯ ಆಡಳಿತ ಹೊಂದಿ ಸರ್ವಾಧಿಕಾರದ ಅನುಭವ ಹೊಂದಿದ್ದು ನಮ್ಮ ದೇಶ ಇದಕ್ಕೆ ಹೊರತಾಗಿದ್ದು ಪ್ರಜಾಪ್ರಭುತ್ವವೇ ಸರ್ವಶ್ರೇಷ್ಠ ಎಂದು ಜಗತ್ತಿಗೆ ಮಾದರಿಯಾಗಿ ತೋರಿಸಿ ಕೊಟ್ಟಿದೆ ಎಂದು ವಿಶ್ಲೇಷಿಸಿದರು.

ಇನ್ನು ಜಾಗತೀಕರಣ ಮತ್ತು ಖಾಸಗೀಕರಣದಿಂದ ಸರ್ಕಾರಗಳ ಹೊಣೆಗಾರಿಕೆ ಕಡಿಮೆಯಾಗುತ್ತಿದ್ದು ಇದು ದೇಶದ ಬಡವರ ಮತ್ತು ಮಧ್ಯಮ ವರ್ಗದವರ ಜೀವನದ ಮೇಲೆ ಪರಿಣಾಮ ಬೀರಲಿದೆ ಎನ್ನುವುದನ್ನು ಜನಪ್ರತಿನಿಧಿಗಳು ಅರಿತು ನಡೆಯಬೇಕು.

 

ಕಳೆದೆರಡು ದಶಕದ ರಾಜಕಾರಣ `ಧನ-ಜಾತಿ-ಬಾಹುಬಲ~ದ ಮೇಲೆ ಕೇಂದ್ರೀಕೃತಗೊಂಡು ಕಠಿಣ ವಿಮರ್ಶೆಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ ಎಂದು ಶಂಕರ್ ವಿಷಾದಿಸಿದರು.

 ಮಾಜಿ ಸಚಿವ ಎಚ್.ಕೆ. ಪಾಟೀಲ್, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನಿರ್ಮಲಾದೇವಿ ಉಪನ್ಯಾಸ ನೀಡಿದರು.ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಿದ್ಧಗಂಗಾ ಕ್ಷೇತ್ರದ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮಿ, ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ವೇದಮೂರ್ತಿ, ಶಾಸಕ ಎಂ.ಪಿ. ಕುಮಾರಸ್ವಾಮಿ, ಡಾ.ವಿಶ್ವನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry