ಬುಧವಾರ, ನವೆಂಬರ್ 13, 2019
28 °C

`ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಅಗತ್ಯ'

Published:
Updated:

ಕೋಲಾರ: ಚುನಾವಣಾ ಆಯೋಗವು ನ್ಯಾಯಯುತ ಹಾಗೂ ಮುಕ್ತ ಮತದಾನಕ್ಕೆ ಅವಕಾಶ ಮಾಡಿದೆ.  ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಲು ಅಧಿಕಾರಿ-ಸಿಬ್ಬಂದಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಮತದಾನದಿಂದ ಮಾತ್ರ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ ಎಂದು ತಹಶೀಲ್ದಾರ್ ಡಾ.ವೆಂಕಟೇಶ ಮೂರ್ತಿ ಹೇಳಿದರು.ಮತದಾನದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ವಿವಿಧ ಇಲಾಖೆಗಳ ಅಧಿಕಾರಿ- ಸಿಬ್ಬಂದಿಗೆ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,  ಯಾವುದೇ ಆಮಿಷಗಳಿಗೆ ಒಳಗಾಗದೆ, ಪ್ರಜಾಪ್ರಭುತ್ವ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್.ಭಟ್, ಮತದಾನ ನಮ್ಮ ಹಕ್ಕು ಎಂಬುದರ ಬಗ್ಗೆ ಜನಜಾಗೃತಿ ಉಂಟು ಮಾಡಲು ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಸಹಕರಿಸಬೇಕು ಎಂದರು.ಹಣ, ಉಡುಗೊರೆಗಳನ್ನು ಪಡೆಯುವುದು, ನೀಡುವುದೂ ಸೇರಿದಂತೆ ಚುನಾವಣೆಯಲ್ಲಿ ನಿಷಿದ್ಧ ವಿಷಯಗಳ ಬಗ್ಗೆ ಶಿಶು ಅಭಿವದ್ಧಿ ಕಲ್ಯಾಣಾಧಿಕಾರಿ ಕಿರಣ್ ತಿಳಿಸಿದರು.ಮತದಾನದ ನೋಂದಣಿ, ಮತದಾನದಲ್ಲಿ ಭಾಗವಹಿಸಲು ಅಗತ್ಯ ಪ್ರೇರಣೆಯನ್ನು ಆಶಾ ಕಾರ್ಯಕರ್ತೆಯರು ಜನರಲ್ಲಿ ಮೂಡಿಸಬೇಕು ಎಂದು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲತಾ ಪ್ರಮೀಳಾ ತಿಳಿಸಿದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯಿತ್ರಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ನರಸಿಂಹಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಜಿ.ಎಂ. ಗೋಪಿಕೃಷ್ಣನ್, ಸಿ. ನಾರಾಯಣಸ್ವಾಮಿ,  ತಾಲ್ಲೂಕು ಪಂಚಾಯಿತಿ ನಿರ್ಮಲ ಭಾರತ ಅಭಿಯಾನ ಸಂಯೋಜಕ ಜಿ. ಶ್ರೀನಿವಾಸ್, ಅರಹಳ್ಳಿ ಮುಖ್ಯ ಶಿಕ್ಷಕ ವೆಂಕಟೇಶ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ, ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.

ಪ್ರತಿಕ್ರಿಯಿಸಿ (+)