`ಪ್ರಜಾಪ್ರಭುತ್ವವೇ ಉತ್ತಮ ವ್ಯವಸ್ಥೆ'

7

`ಪ್ರಜಾಪ್ರಭುತ್ವವೇ ಉತ್ತಮ ವ್ಯವಸ್ಥೆ'

Published:
Updated:

ಬೆಂಗಳೂರು: `ಪ್ರಜಾಪ್ರಭುತ್ವಕ್ಕೆ ಪರ್ಯಾಯ ವ್ಯವಸ್ಥೆಯನ್ನು ಹುಡುಕುವುದು ಅಪಾಯಕಾರಿ ಬೆಳವಣಿಗೆಯಾಗಿದೆ' ಎಂದು ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಜಾಗೃತಿ ಸೇವಾ ಟ್ರಸ್ಟ್ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ `ಚುನಾವಣಾ ಸುಧಾರಣೆ-ಅನಿವಾರ್ಯತೆ ಮತ್ತು ಸವಾಲುಗಳು' ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.`ಪ್ರಜಾಪ್ರಭುತ್ವವು ಒಂದು ಉತ್ತಮ ವ್ಯವಸ್ಥೆಯಾಗಿದೆ. ಅದನ್ನು ಧಿಕ್ಕರಿಸಿ ನಡೆಯುವ ಹಲವು ಕಾರ್ಯಗಳು ಇಂದು ನಡೆಯುತ್ತಿವೆ. ಆದರೆ, ಜಗತ್ತಿನ ಬೇರೆ ವ್ಯವಸ್ಥೆಗಳಿಗಿಂತ ಪ್ರಜಾಪ್ರಭುತ್ವ ವ್ಯವಸ್ಥೆಯು ಉತ್ತಮವಾಗಿದೆ, ಅದರಲ್ಲಿ ಕೆಲವು ಲೋಪ ದೋಷಗಳಿವೆ. ಆದರೆ, ಅವುಗಳನ್ನು ನಿವಾರಿಸಿಕೊಂಡು ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯಿದೆ' ಎಂದು ಸಲಹೆ ನೀಡಿದರು.`ಪ್ರಜಾಪ್ರಭುತ್ವವವನ್ನು ಕೇವಲ ಸರ್ಕಾರವು ನಿಭಾಯಿಸಿದರೆ ಸಾಲದು, ಸಾರ್ವಜನಿಕರು ಸ್ವ ಹಿತಾಸಕ್ತಿಯಿಂದ ಇದು ನಮ್ಮ ದೇಶ, ನಮ್ಮ ಪ್ರಜಾಪ್ರಭುತ್ವವೆಂದು ಗೌರವಿಸಿ ಪ್ರತಿಯೊಬ್ಬರು ಮತದಾನ ಮಾಡಬೇಕು' ಎಂದರು.

`ಜನರು ಸಂವಿಧಾನದಲ್ಲಿರುವ ಹಕ್ಕುಗಳನ್ನು ಮಾತ್ರ ಕೇಳುತ್ತಾರೆ. ಅದೇ ಸಂವಿಧಾನದಲ್ಲಿ ಕೆಲವು ಕರ್ತವ್ಯಗಳನ್ನು ಕೂಡ ನೀಡಲಾಗಿದೆ. ಅದರ ಕಡೆಗೂ ಗಮನವನ್ನು ಹರಿಸಬೇಕು' ಎಂದು ಹೇಳಿದರು.`ಮತ ಚಲಾಯಿಸುವುದು ಪ್ರಜೆಗಳ ಹಕ್ಕು. ಆ ಹಕ್ಕನ್ನು ಕೆಲವು ಆಮಿಷಗಳಿಗೆ ಮಾರಾಟ ಮಾಡುವಂತಹ ಪರಿಸ್ಥಿತಿಗೆ ನಮ್ಮ ಇಂದಿನ ಪ್ರಜೆಗಳು ಬಂದಿದ್ದಾರೆ. ಇದು ಪ್ರಜಾಪ್ರಭುತ್ವದ ದುರಂತವಾಗಿದೆ. ಆದ್ದರಿಂದ ಪ್ರಜೆಗಳು ಮತವನ್ನು ಮಾರಿಕೊಳ್ಳದೆ ತಮ್ಮ ಗೌರವವನ್ನು ತಾವೇ ಕಾಪಾಡಿಕೊಳ್ಳಬೇಕು' ಎಂದರು.ರಂಗಭೂಮಿ ಕಲಾವಿದ `ಮಾಸ್ಟರ್' ಹಿರಣ್ಣಯ್ಯ ಮಾತನಾಡಿ, `ದೇಶದ ಸಿಯಾಚಿನ್‌ನಲ್ಲಿ ನಮ್ಮ ಸೈನಿಕರು 6,600 ಕಿ.ಮೀ. ಪ್ರದೇಶವನ್ನು ತಮ್ಮ ಕುಟುಂಬ ಮತ್ತು ಪ್ರಾಣದ ಹಂಗು ತೊರೆದು ಕಾಯುತ್ತಿದ್ದಾರೆ. ಆದರೆ, ಇಲ್ಲಿ ನಮ್ಮ ರಾಜಕಾರಣಿಗಳು ನಮ್ಮ ದೇಶವನ್ನೇ ಮೇಯುತ್ತಿದ್ದಾರೆ' ಎಂದು ಹೇಳಿದರು.`ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬಹುದು ಅದರ ಮೊದಲು ನಾವು ನಮ್ಮಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ನಾವು ಭಾರತವನ್ನು ನಮ್ಮ ರಾಷ್ಟ್ರವೆಂದು ಪರಿಗಣಿಸಿಲ್ಲ. ನಾವು ಇಲ್ಲಿ ಹೋಟೆಲ್‌ನಲ್ಲಿ ಬಂದು ಹೋಗುವ ಗಿರಾಕಿಗಳಂತೆ ವರ್ತಿಸುತ್ತೇವೆ. ಇದರಿಂದ ಯಾರಿಗೆ ನಷ್ಟ ಎಂಬುದು ನಮಗೆ ಅರ್ಥವಾಗುವುದಿಲ್ಲ' ಎಂದು ವ್ಯಂಗ್ಯವಾಡಿದರು.`ಚುನಾವಣೆಯಲ್ಲಿರುವ ಅಭ್ಯರ್ಥಿಗಳಲ್ಲಿ ಯಾರಿಗೆ ಮತ ಹಾಕುವುದು. ಏಕೆಂದರೆ, ಎಲ್ಲರೂ ಅಪ್ರಾಮಾಣಿರಾಗಿದ್ದಾರೆ. ಆದ್ದರಿಂದ, ಚುನಾಯಿತ ಪ್ರತಿನಿಧಿಗಳನ್ನು ತಿದ್ದುವ ಕಾರ್ಯವಾಗಬೇಕು. ಒಂದು ವರ್ಷವಾದರೂ ಲೋಕಾಯುಕ್ತ ನೇಮಕವಾಗಿಲ್ಲ. ಇದು ನಮ್ಮ ನಾಡಿನ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry