ಪ್ರಜಾಪ್ರಭುತ್ವ ಕುಸಿದು ಬೀಳುವ ಅಪಾಯ: ಭಾರದ್ವಾಜ್ ಆತಂಕ

7

ಪ್ರಜಾಪ್ರಭುತ್ವ ಕುಸಿದು ಬೀಳುವ ಅಪಾಯ: ಭಾರದ್ವಾಜ್ ಆತಂಕ

Published:
Updated:

ಬೆಂಗಳೂರು: ‘ಧರ್ಮದಲ್ಲಿ ರಾಜಕಾರಣ ಸೇರ್ಪಡೆಯಾದಂತೆ ಚುನಾವಣೆಯಲ್ಲೂ ರಾಜಕಾರಣ ಸೇರುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕುಸಿದು ಬೀಳುವ ಅಪಾಯವಿದೆ’ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಆತಂಕ ವ್ಯಕ್ತಪಡಿಸಿದರು.

ನಗರದ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ನಡೆದ ತಮ್ಮ ‘ಇಂಡಿಯಾ: ಎ ಫೆಲೋಶಿಪ್ ಆಫ್ ಫೇತ್ಸ್’ ಕೃತಿ ಕನ್ನಡಾನುವಾದ ‘ಭಾರತ ಧರ್ಮಗಳ ಮೈತ್ರಿಯ ನಾಡು’ (ಅನುವಾದ- ಪ್ರೊ.ಎಚ್.ವಿ. ನಾಗರಾಜರಾವ್) ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾನೂನಾತ್ಮಕ ಆಡಳಿತವಾದ ಧರ್ಮವೇ ರಾಜಕಾರಣದ ಜೊತೆಗೆ ಮಿಶ್ರಿತಗೊಂಡಿದೆ. ಈಚಿನ ವರ್ಷಗಳಲ್ಲಿ ಚುನಾವಣೆ ಪ್ರಕ್ರಿಯೆಯಲ್ಲೂ ರಾಜಕಾರಣ ಸೇರುತ್ತಿದೆ. ಇದು ತೀವ್ರವಾದರೆ ಸಂಸತ್ತು, ವಿಧಾನಸಭೆ, ಇಡೀ ವ್ಯವಸ್ಥೆಯೇ ಹಾಳಾಗಲಿದೆ. ಈ ಸಂಬಂಧ ಸದ್ಯದಲ್ಲೇ ಕಾನೂನು ಸಚಿವರೊಂದಿಗೆ ಚರ್ಚಿಸುತ್ತೇನೆ’ ಎಂದರು.

ಕೃತಿ ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ‘ರಾಜ್ಯಪಾಲ ಭಾರದ್ವಾಜ್ ಅವರು ತಮ್ಮ 50 ವರ್ಷಗಳ ಸಾರ್ವಜನಿಕ ಜೀವನದ ಅನುಭವದ ವಿವರ ನೀಡಿದ್ದಾರೆ. ಹಿಂದು, ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ ಧರ್ಮ ಸೇರಿದಂತೆ ಹಲವು ಧರ್ಮಗಳ ಸಾರವನ್ನು ಸಂಕ್ಷಿಪ್ತವಾಗಿ ಹಾಗೂ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ’ ಎಂದರು.

ಐಐಎಂಬಿ ಸಂಸ್ಥಾಪಕ ನಿರ್ದೇಶಕ ಪ್ರೊ.ಎನ್.ಎಸ್. ರಾಮಸ್ವಾಮಿ, ‘ಎಲ್ಲ ಧರ್ಮಗಳ ಸಂದೇಶ ಹಾಗೂ ಅವುಗಳ ನಡುವಿನ ಸಾಮ್ಯತೆಯನ್ನು ಭಾರದ್ವಾಜ್ ವಿವರವಾಗಿ ತೋರಿಸಿದ್ದಾರೆ. ರಾಷ್ಟ್ರೀಯ ಐಕ್ಯತೆಗಿಂತ ಪ್ರಾದೇಶಿಕತೆಯೇ ಮಹತ್ವ ಪಡೆದಿರುವ ಈ ಸಂದರ್ಭದಲ್ಲಿ ಐಕ್ಯತೆಯ ಭಾವ ಮೂಡಿಸುವ ಅಂಶಗಳನ್ನೊಳಗೊಂಡ ಕೃತಿ ಬಿಡುಗಡೆಯಾಗಿರುವುದು ಉತ್ತಮವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾಭವನದ ನಿರ್ದೇಶಕ ಡಾ.ಮತ್ತೂರು ಕೃಷ್ಣಮೂರ್ತಿ, ಅಧ್ಯಕ್ಷ ಎನ್. ರಾಮಾನುಜ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry