ಪ್ರಜಾಪ್ರಭುತ್ವ ದೇಶದ ನಾಗರಿಕರ ಅಸ್ತ್ರ

7

ಪ್ರಜಾಪ್ರಭುತ್ವ ದೇಶದ ನಾಗರಿಕರ ಅಸ್ತ್ರ

Published:
Updated:

ಇಳಕಲ್: `ಪ್ರಜಾಪ್ರಭುತ್ವ ವ್ಯವಸ್ಥೆ ದೇಶದ ನಾಗರಿಕರಿಗೆ ದೊರೆತ ಬಹುದೊಡ್ಡ ಅಸ್ತ್ರ. ಈ ಅಸ್ತ್ರ ಬಳಸಿ, ಯೋಗ್ಯರನ್ನು ಆಯ್ಕೆ ಮಾಡಿ, ಇಲ್ಲದಿದ್ದರೇ ಕೆಟ್ಟ ಪ್ರತಿಫಲ ಪಡೆಯಬೇಕಾಗುತ್ತದೆ~ ಎಂದು ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ಷರೀಫ್ ಎಚ್ಚರಿಸಿದರು.



 ನಗರದಲ್ಲಿ ಆಯೋಜಿಸಿದ್ದ ಸೋಮವಾರ ಬೆಳಗಾವಿ ವಿಭಾಗದ ಜಿಲ್ಲೆಗಳ ಮುಸ್ಲಿಂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.



ಅಧಿಕಾರ ಶಾಶ್ವತ ಅಲ್ಲ. ಮುಸ್ಲಿಂ ಸಮಾಜ ಸಂಘಟಿತಗೊಂಡರೇ ರಾಜಕೀಯ ಅಧಿಕಾರ ಪಡೆಯುವುದು ಕಷ್ಟವೂ ಅಲ್ಲ.  ಇತರರೊಂದಿಗೆ ವಿಶ್ವಾಸ, ನಮ್ಮಳಗಿನ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವದಕ್ಕೆ ಆದ್ಯತೆ ನೀಡಬೇಕು. ಮುಸ್ಲಿಂ ಬಾಂಧವರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ತಾಯಿಯಿಂದ ಮಗು ಸಾಕಷ್ಟು ಕಲಿಯುತ್ತದೆ. ಕಲಿತ ಮಕ್ಕಳು ಸಮಾಜದ, ದೇಶದ ಸಂಪತ್ತಾಗುತ್ತಾರೆ. ಕಾರಣ ಮಕ್ಕಳ ಶಿಕ್ಷಣದ ಬಗ್ಗೆ ಅಲಕ್ಷ ಮಾಡಬಾರದು ಎಂದು ತಿಳಿಸಿದರು.



`ಧರ್ಮದ ಹೆಸರಿನಲ್ಲಿ ನಮ್ಮ ನಡುವಳಿಕೆಗಳು ಮನುಷತ್ವದಿಂದ ವಿಮುಖವಾದರೇ ಅದು ದೇವರಿಗೆ ಪ್ರಿಯವಾಗುವುದಿಲ್ಲ. ಮನುಷ್ಯತ್ವವೇ ಧರ್ಮ, ಗಂಡ ಮತ್ತು ಹೆಣ್ಣು ಎರಡೇ ಜಾತಿಗಳು. ಇನ್ನುಳಿದದ್ದು ಎಲ್ಲವೂ ದುರ್ಬಲರ ಶೋಷಣೆಗೆ ಪ್ರಬಲರು ಮಾಡಿರುವ ನೀಚ ವ್ಯವಸ್ಥೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.



ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, `ಮುಸ್ಲಿಂ ಸಮಾಜ ಇನ್ನೂ ಆರ್ಥಿಕ, ಸಾಮಾಜಿಕ  ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಸಾಕಷ್ಟು ಶ್ರಮಜೀವಿಗಳಾದರೂ ಶಿಕ್ಷಣಕ್ಕೆ ಹೆಚ್ಚು ಮಹತ್ವದ ನೀಡದ ಪರಿಣಾಮ ಇದು. ಚಿಕ್ಕ ಮಕ್ಕಳನ್ನು ಕೆಲಸಕ್ಕೆ ತೊಡಗಿಸದೇ ಶಾಲೆಗೆ ಕಳುಹಿಸಿ~ ಎಂದ ಸಲಹೆ ನೀಡಿದರು.



ರಾಜಕೀಯದಲ್ಲಿ ಮುಸ್ಲಿಂ ಬಾಂಧವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ, ಸ್ಥಾನಮಾನ ಸಿಗುತ್ತಿಲ್ಲ. ಇದನ್ನು ದೊರೆಕಿಸಿಕೊಳ್ಳಬೇಕಾದರೇ ರಾಜಕೀಯವಾಗಿ ಜಾಗೃತಿಗೊಂಡು, ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು. ಜಾಫರ್‌ಷರೀಫ್‌ರಂತಹ ಅನುಭವಿ, ಹಿರಿಯ ನಾಯಕರ ಸೇವೆಯನ್ನು ಕಾಂಗ್ರೆಸ್ ಪಕ್ಷ ಹಾಗೂ ಕೇಂದ್ರ ಸರಕಾರ ಸರಿಯಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.



ವಿಜಾಪುರ ದರ್ಗಾದ ಸಜ್ಜಾದ ನಸೀನ್ ಸೈಯದ್ ಷಾ ಮುರ್ತುಜಾ ಹುಸೇನಿ ಹಾಸ್ಮಿ ಸಾನ್ನಿಧ್ಯ ವಹಿಸಿದ್ದರು. ಇಳಕಲ್ ಕಾಂಗ್ರೆಸ್ ಬ್ಲಾಕ್ ಕಮಿಟಿ  ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ, ದರ್ಗಾ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಮಾತನಾಡಿದರು.



ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಕೆಪಿಸಿಸಿ ಸದಸ್ಯ ವಿಜಯಾನಂದ ಕಾಶಪ್ಪನವರ, ಜಮಾತೆ ಇಸ್ಲಾಮಿ ಹಿಂದ್‌ನ ಗುಲ್ಬರ್ಗಾ ವಲಯ ಸಂಚಾಲಕ ಮಹಮ್ಮದ್ ಯುಸೂಫ್ ಕನ್ನಿ, ಕುಷ್ಟಗಿ ಮಾಜಿ ಶಾಸಕ ಹಸನ್‌ಸಾಬ ದೋಟಿಹಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮೆಹಬೂಬ ಸೌದಾಗರ, ಎಸ್.ಎಂ.ಪಾಟೀಲ ಗಣಿಯಾರ್, ಇಲಾಹಿ ಕನ್ನೊಳ್ಳಿ, ಮೈನುದ್ದೀನ್ ನಬಿವಾಲೆ ಅಬ್ದುಲ್‌ರಜಾಕ್ ತಟಗಾರ, ಜಬ್ಬಾರ್ ಕಲಬುರ್ಗಿ, ಅಬ್ದುಲ್‌ಗಣಿ ಬೇಪಾರಿ ಉಪಸ್ಥಿತರಿರುವರು.



ಇದೇ ಸಂದರ್ಭದಲ್ಲಿ ಉಸ್ಮಾನಗಣಿ ಹುಮನಾಬಾದ ಅವರು ತೊಂಡಿಹಾಳದಲ್ಲಿ 3 ಕೋಟಿ ವೆಟ್ಟದಲ್ಲಿ ಆರಂಭಿಸಿದ ಹಬೀಬ ಕುರಿ ಸಾಕಾಣಿಕೆ ಕೇಂದ್ರವನ್ನು ಸಿ.ಕೆ.ಜಾಫರ್‌ಷರೀಫ್ ಉದ್ಘಾಟಿಸಿದರು. ಈ ಕುರಿ ಕೇಂದ್ರದಲ್ಲಿ ವಿದೇಶಿಯ 2 ಸಾವಿರ ಕುರಿಗಳನ್ನೂ ಸಾಕುವ ಯೋಜನೆ ಇದ್ದು, ಇದರಿಂದ ಕೃಷಿಯ ಬೆಳವಣಿಗೆಗೂ ಸಹಾಯವಾಗುವು ಎಂದು ಉಸ್ಮಾನಗಣಿ ಹುಮನಾಬಾದ ನುಡಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry