ಗುರುವಾರ , ಮೇ 13, 2021
40 °C
ಹಕ್ಕುಬಾಧ್ಯತಾ ಸಮಿತಿ ಶಿಫಾರಸು

`ಪ್ರಜಾವಾಣಿ'ಗೆ ವಾಗ್ದಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪ್ರಜಾವಾಣಿ', `ಡೆಕ್ಕನ್ ಹೆರಾಲ್ಡ್' ಹಾಗೂ `ಉದಯವಾಣಿ' ಪತ್ರಿಕೆಗಳಿಗೆ ಮೂರು ವರ್ಷ ಜಾಹೀರಾತು ನೀಡಬಾರದು. ಆ ಪತ್ರಿಕೆಗಳಿಗೆ ಗರಿಷ್ಠ ವಾಗ್ದಂಡನೆ ವಿಧಿಸಬೇಕು ಎಂದು ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿ ಶಿಫಾರಸು ಮಾಡಿದೆ.ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯ 2011-12ನೇ ಸಾಲಿನ ಹಕ್ಕುಬಾಧ್ಯತಾ ಸಮಿತಿ ಕಳೆದ ಮಾರ್ಚ್ 19ರಂದು ಸಭಾಧ್ಯಕ್ಷರಿಗೆ ನೀಡಿರುವ ವರದಿಯನ್ನು ವಿಧಾನಸಭೆಯ ಕಾರ್ಯದರ್ಶಿ ಓಂಪ್ರಕಾಶ್ ಅವರು ಶುಕ್ರವಾರ ಸದನದಲ್ಲಿ ಮಂಡಿಸಿದರು.ತಮ್ಮ  ಕ್ಷೇತ್ರಗಳ ಗುತ್ತಿಗೆದಾರರಿಗೆ ಅನುಕೂಲವಾಗುವ ಹಾಗೆ ಕಾಮಗಾರಿಗಳ ಅಂದಾಜುಗಳನ್ನು ಅಕ್ರಮವಾಗಿ ತಯಾರಿಸಲು ನಗರದ ಮೂವರು ಶಾಸಕರು ಸಹಕರಿಸಿದ್ದಾರೆ ಎಂದು ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಈ ಮೂರೂ ಪತ್ರಿಕೆಗಳು ಪ್ರಕಟ ಮಾಡಿದ್ದವು.ದಾಸರಹಳ್ಳಿ, ಸರ್ವಜ್ಞನಗರ ಹಾಗೂ ಶಾಂತಿನಗರ ಕ್ಷೇತ್ರಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೆತ್ತಿಕೊಂಡಿರುವ ರಸ್ತೆ ಹಾಗೂ ಮಳೆ ನೀರಿನ ಚರಂಡಿ ಕಾಮಗಾರಿಗಳ ಅಂದಾಜುಗಳನ್ನು ಶಾಸಕರ ಸೂಚನೆಯಂತೆ, ಗುತ್ತಿಗೆದಾರರಿಗೆ ಅನುಕೂಲವಾಗುವ ಹಾಗೆ ಅಕ್ರಮವಾಗಿ ತಯಾರಿಸಲಾಗಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿತ್ತು.ದಾಸರಹಳ್ಳಿ ಕ್ಷೇತ್ರವನ್ನು ಬಿಜೆಪಿಯ ಎಸ್.ಮುನಿರಾಜು, ಶಾಂತಿನಗರ ಮತ್ತು ಸರ್ವಜ್ಞ ನಗರ ಕ್ಷೇತ್ರವನ್ನು ಕಾಂಗ್ರೆಸ್‌ನ ಎನ್.ಎ.ಹ್ಯಾರಿಸ್ ಹಾಗೂ ಕೆ.ಜೆ.ಜಾರ್ಜ್ ಪ್ರತಿನಿಧಿಸುತ್ತಿದ್ದಾರೆ; ಆಗಲೂ ಪ್ರತಿನಿಧಿಸುತ್ತಿದ್ದರು. ಶಾಸಕರ ಹೆಸರು ಉಲ್ಲೇಖಿಸಿರುವುದು ಪತ್ರಿಕಾ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಪರಿಗಣಿಸಿರುವ ಸಮಿತಿ ಈ ಮೂರೂ ಪತ್ರಿಕೆಗಳಿಗೆ ಮೂರು ವರ್ಷಗಳ ಕಾಲ ಯಾವುದೇ ರೀತಿಯ ಜಾಹೀರಾತು, ಪತ್ರಿಕಾ ಸೂಚನೆ ಮತ್ತಿತರ ಸೌಲಭ್ಯಗಳನ್ನು ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಯಾವುದೇ ಸಂಸ್ಥೆಗಳಿಂದ ನೀಡಬಾರದು ಎಂದು ಶಿಫಾರಸು ಮಾಡಿದೆ. ಅಷ್ಟೇ ಅಲ್ಲದೆ ಪತ್ರಿಕೆಗಳ ವರದಿಯನ್ನು ಉತ್ಪ್ರೇಕ್ಷಿತ ಎಂದು ಸಮಿತಿ ಅರ್ಥೈಸಿದೆ.ಇದೇ ಸುದ್ದಿ ಪ್ರಕಟಿಸಿದ್ದ `ವಿಜಯ ಕರ್ನಾಟಕ' ಪತ್ರಿಕೆಯು ವಿಷಾದ ವ್ಯಕ್ತಪಡಿಸಿ ಸ್ಪಷ್ಟೀಕರಣ ಪ್ರಕಟಿಸಿದೆ. ಆದರೆ, ಶೀರ್ಷಿಕೆಯಲ್ಲಿ `ಮೂವರು ಶಾಸಕರಿಗೆ ಸಿಎಜಿ ಕ್ಲೀನ್ ಚಿಟ್' ಎಂದು ಸುದ್ದಿ ಪ್ರಕಟಿಸಿದೆ. ಸಿಎಜಿ ವರದಿಯಲ್ಲಿ ಶಾಸಕರ ವಿರುದ್ಧ ಯಾವುದೇ ಆಪಾದನೆ ಮಾಡಿಲ್ಲ. ಹೀಗಾಗಿ ಕ್ಲಿನ್ ಚಿಟ್ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆ ಪತ್ರಿಕೆ ನೀಡಿರುವ ಸ್ಪಷ್ಟೀಕರಣ ಸೂಕ್ತವಾಗಿಲ್ಲ. ಈ ರೀತಿಯ ಮನೋಭಾವ ಆರೋಗ್ಯಕರವಾಗಿಲ್ಲ. ಹೀಗಾಗಿ ಆ ಪತ್ರಿಕೆಗೂ ಸೂಕ್ತ ಎಚ್ಚರಿಕೆ ನೀಡಬೇಕು ಎಂದು ಹಕ್ಕುಚ್ಯುತಿ ಸಮಿತಿ ಶಿಫಾರಸು ಮಾಡಿದೆ.ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳಿಂದ ತಮ್ಮ ಹಕ್ಕು ಚ್ಯುತಿಯಾಗಿದೆ ಎಂದು ಎನ್.ಎ.ಹ್ಯಾರಿಸ್ ಸದನದಲ್ಲಿ ಸೂಚನೆ ಮಂಡಿಸಿದ್ದರು. ಮಹಾಲೇಖಪಾಲರೊಂದಿಗೆ ಹಕ್ಕುಚ್ಯುತಿ ಸಮಿತಿ ಸಮಾಲೋಚನೆ ನಡೆಸಲು ಅನುಕೂಲವಾಗುವಂತೆ ಸಿಎಜಿ ವರದಿ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸದನ ಸೂಚಿಸಿತು.ಸಿಎಜಿ ವರದಿಯಲ್ಲಿ ಶಾಸಕರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಎಂದು ಲೆಕ್ಕಪತ್ರ ಸಮಿತಿ ವರದಿ ನೀಡಿತು. ಈ ಹಿನ್ನೆಲೆಯಲ್ಲಿ ಮೂರೂ ಪತ್ರಿಕೆಗಳ ಸಂಪಾದಕರುಗಳನ್ನು ಹಕ್ಕು ಬಾಧ್ಯತಾ ಸಮಿತಿ ವಿಚಾರಣೆಗೆ ಕರೆಸಿತು. `ಪ್ರಜಾವಾಣಿ' ಸಂಪಾದಕರು ಹಾಜರಾಗಿ ತಾವು ಸಿಎಜಿ ವರದಿಯಲ್ಲಿನ ಅಂಶಗಳನ್ನೇ ಯಥಾವತ್ತಾಗಿ ಪ್ರಕಟಿಸಿದ್ದು ಶಾಸಕರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಪ್ರಕಟಿಸಿಲ್ಲ ಎಂದು ತಿಳಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.