ಪ್ರಜಾವಾಣಿ ಒಂದು ಸಾಂಸ್ಕೃತಿಕ ಧಾರೆ: ಕಾರ್ನಾಡ

7

ಪ್ರಜಾವಾಣಿ ಒಂದು ಸಾಂಸ್ಕೃತಿಕ ಧಾರೆ: ಕಾರ್ನಾಡ

Published:
Updated:
ಪ್ರಜಾವಾಣಿ ಒಂದು ಸಾಂಸ್ಕೃತಿಕ ಧಾರೆ: ಕಾರ್ನಾಡ

ಹುಬ್ಬಳ್ಳಿ: `ನವ್ಯಕಾಲದ ಸಾಹಿತ್ಯ ಬೆಳವಣಿಗೆಗೆ ಪ್ರಚೋದನಾ ಶಕ್ತಿಯಾಗಿ ನಿಂತಿದ್ದ `ಪ್ರಜಾವಾಣಿ~, ಕೇವಲ ವಾರ್ತಾ ಪತ್ರವಾಗಿ ಉಳಿಯದೆ ಸಾಂಸ್ಕೃತಿಕ ಧಾರೆಯಾಗಿ ಬೆಳೆದಿದೆ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಾಟಕಕಾರ ಗಿರೀಶ ಕಾರ್ನಾಡ ಅಭಿಪ್ರಾಯಪಟ್ಟರು.ನಗರದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ `ಪ್ರಜಾವಾಣಿ~ ದೀಪಾವಳಿ ವಿಶೇಷಾಂಕದ ಕಥೆ, ಕವನ ಹಾಗೂ ಮಕ್ಕಳ ವರ್ಣಚಿತ್ರ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.`ನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿ ಬೆಳವಣಿಗೆಗೆ `ಪ್ರಜಾವಾಣಿ~ ಕೊಡುಗೆ ಅಪಾರ~ ಎಂದು ಕೊಂಡಾಡಿದ ಅವರು, `ಒಂದು ವೃತ್ತಪತ್ರಿಕೆ ಮಾಡಬೇಕಾದ ಕರ್ತವ್ಯವನ್ನು ಅದು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸುತ್ತಿದೆ~ ಎಂದು ಮೆಚ್ಚುಗೆಯಿಂದ ಹೇಳಿದರು.`ಕರ್ನಾಟಕದ ಏಕೀಕರಣದ ಮುನ್ನ ಬೆಂಗಳೂರೇ ನಮಗೆ ವಿದೇಶವಾಗಿತ್ತು. ಅಲ್ಲಿಂದ ಪ್ರಕಟವಾಗುತ್ತಿದ್ದ `ಪ್ರಜಾವಾಣಿ~ ವಿಷಯವಾಗಿ ಕೇವಲ ಕೇಳಿ ತಿಳಿದುಕೊಂಡಿದ್ದೆ. ಆದರೆ, ಏಕೀಕರಣದ ನಂತರ ದಿನಗಳಲ್ಲಿ ಪತ್ರಿಕೆ ನನಗೆ ತುಂಬಾ ಹತ್ತಿರವಾಯಿತು. ಟಿ.ಎಸ್.ರಾಮಚಂದ್ರರಾವ್ ಹಾಗೂ ವೈಎನ್ಕೆ ಅವರಂತಹ ದಿಗ್ಗಜರ ಸ್ನೇಹಭಾಗ್ಯ ಸಿಕ್ಕಿತು~ ಎಂದು ನೆನೆದರು.ಬೆಂಗಳೂರಿನ ಎಂ.ಜಿ. ರಸ್ತೆಯ ಪತ್ರಿಕಾ ಕಚೇರಿಯಲ್ಲಿ ವೈಎನ್ಕೆ, ಪಿ.ಲಂಕೇಶ್, ಬಿ.ವಿ. ವೈಕುಂಠರಾಜು ಸೇರಿದಂತೆ ಹಲವು ಸಾಹಿತಿಗಳ ಜೊತೆ ಹರಟೆ ಹೊಡೆಯುತ್ತಿದ್ದ ದಿನಗಳನ್ನು ಅವರು ಮೆಲಕು ಹಾಕಿದರು. `ನನ್ನ ಸಾಂಸ್ಕೃತಿಕ ಬೆಳವಣಿಗೆಗೆ ಬೆಂಗಳೂರಿನ ಪ್ರಜಾವಾಣಿ ಹಾಗೂ ಧಾರವಾಡದ ಮನೋಹರ ಗ್ರಂಥಮಾಲಾದಲ್ಲಿ ನಡೆದ ಚರ್ಚೆಗಳು ನೀಡಿದ ಕೊಡುಗೆಯನ್ನು ಮರೆಯುವಂತೆಯೇ ಇಲ್ಲ~ ಎಂದರು.ದಶಕಗಳ ಹಿಂದೆ `ಪ್ರಜಾವಾಣಿ~ ದೀಪಾವಳಿ ವಿಶೇಷಾಂಕದಲ್ಲಿ ರಾಮಾಯಣ ಕುರಿತ ತಮ್ಮ `ಮಾನಿಷಾದ~ ನಾಟಕ ಪ್ರಕಟವಾಗಿದ್ದನ್ನು ಅವರು ಹೆಮ್ಮೆಯಿಂದ ನೆನಪು ಮಾಡಿಕೊಂಡರು. ತಮ್ಮ ಆತ್ಮ ಕಥನ `ಆಡಾಡತ ಆಯುಷ್ಯ~ ಕೃತಿಯನ್ನು ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿಸುವ ಮೂಲಕ ದೊಡ್ಡ ವಾಚಕ ವರ್ಗವನ್ನು ಕಲ್ಪಿಸಿಕೊಟ್ಟದ್ದೂ ಇದೇ ಪತ್ರಿಕೆ ಎಂದು ಅವರು ಹೇಳಿದರು.`ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಪತ್ರಿಕೆ ನಿಲುವು ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪಕ್ಷಾತೀತ, ಧರ್ಮಾತೀತ ಹಾಗೂ ಜಾತ್ಯತೀತ ತತ್ವಗಳನ್ನು ಪ್ರತಿಪಾದಿಸುವ ಮೂಲಕ ಅದು ಮೌಲ್ಯಗಳನ್ನು ಎತ್ತಿ ಹಿಡಿದಿದೆ~ ಎಂದು ಅಭಿಮಾನ ವ್ಯಕ್ತಪಡಿಸಿದರು.`ಬರೆದಿದ್ದನ್ನು ತಿದ್ದುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಒಳ್ಳೆಯದು. ಇದರಿಂದ ಬರಹಕ್ಕೆ ಒಳ್ಳೆಯ ರೂಪ ಕೊಡಲು ಸಾಧ್ಯ~ ಎಂದು ಯುವ ಲೇಖಕರಿಗೆ ಸಲಹೆ ನೀಡಿದರು. `ಕವಿ ಆಗಬೇಕು ಎಂಬ ನನ್ನ ಮಹತ್ವಾಕಾಂಕ್ಷೆ ಕೈಗೂಡದಿದ್ದಕ್ಕೆ ಒಂದು ದಿನ ಅತ್ತುಬಿಟ್ಟೆ~ ಎಂದ ಅವರು, `ಕಾವ್ಯ ನನಗೆ ಎಂದಿಗೂ ಒಲಿಯಲಿಲ್ಲ. ಆದ್ದರಿಂದಲೇ ಕವಿಗಳನ್ನು ಕಂಡರೆ ನನಗೆ ಹೊಟ್ಟೆಕಿಚ್ಚು~ ಎಂದು ಚಟಾಕಿ ಹಾರಿಸಿದರು.ಮತ್ತೊಬ್ಬ ಮುಖ್ಯ ಅತಿಥಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಬಿ ವಾಲೀಕಾರ ಮಾತನಾಡಿ, `ಐದನೇ ತರಗತಿವರೆಗೆ ಮಕ್ಕಳಿಗೆ ಭಾಷೆ ಹಾಗೂ ಗಣಿತ ಎರಡು ವಿಷಯಗಳನ್ನು ಮಾತ್ರ ಕಲಿಸಬೇಕು~ ಎಂದು ಅಭಿಪ್ರಾಯಪಟ್ಟರು. `ಗಣಿತ ಮಕ್ಕಳನ್ನು ತಾರ್ತಿಕ ಚಿಂತನೆಗೆ ಹಚ್ಚಿದರೆ, ಭಾಷೆ ಅದರ ಅಭಿವ್ಯಕ್ತಿಗೆ ಸಹಾಯ ಮಾಡುತ್ತದೆ. ಬಹಳ ವರ್ಷಗಳಿಂದ ನಾನು ಈ ಸಂಗತಿಯನ್ನು ಪ್ರತಿಪಾದಿಸುತ್ತಾ ಬಂದರೂ ಶಿಕ್ಷಣ ತಜ್ಞರು ಹಾಗೂ ಆಡಳಿತಗಾರರು ಇತ್ತ ಇದುವರೆಗೆ ಗಮನವನ್ನೇ ಹರಿಸಿಲ್ಲ~ ಎಂದು ಅವರು ವಿಷಾದಿಸಿದರು.ಸಾಹಿತ್ಯವನ್ನು ಕಾಲದ ತಕ್ಕಡಿಯಲ್ಲಿಟ್ಟು ತುಲನೆ ಮಾಡಿದ ಅವರು, `ಸಾಹಿತ್ಯವು ಭಾಷೆಯ ಬಂಧನವನ್ನು ಹರಿದು ಒಗೆದಂತಹ ಕಾಲ ಇದು. ಭಾಷೆಗಿಂತ ಭಾವನೆಗಳೇ ಮುಖ್ಯ ಎಂಬುದು ಇಂದಿನ ಸಾಹಿತ್ಯ ಕೃತಿಗಳಲ್ಲಿ ಎದ್ದು ಕಾಣುತ್ತದೆ~ ಎಂದು ಹೇಳಿದರು. `ಸುದ್ದಿಯ ಜೊತೆ ಸಾಂಸ್ಕೃತಿಕ ಲೋಕವನ್ನೂ ಹೊತ್ತು ತರುವ ಪತ್ರಿಕೆ `ಪ್ರಜಾವಾಣಿ~ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.`ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಘರ್ಷಕ್ಕೆ ಹೆಸರಾಗಿದ್ದ ಧಾರವಾಡ ಈಚಿನ ದಿನಗಳಲ್ಲಿ ಸಪ್ಪೆಯಾಗಿದೆ. ಇದರಿಂದ ನನಗೂ ನೋವಾಗಿದೆ. ತಿಂಗಳಿಗೊಂದು ಸಾಹಿತ್ಯ ಚಟುವಟಿಕೆ ನಡೆಸುವ ಯತ್ನವನ್ನು ವಿಶ್ವವಿದ್ಯಾಲಯದಿಂದ ಮಾಡಲಾಗುವುದು. `ಡೆಕ್ಕನ್ ಹೆರಾಲ್ಡ್~ ನಾಟಕೋತ್ಸವವನ್ನು ಧಾರವಾಡದಲ್ಲಿ ನಡೆಸುವುದಾದರೆ ಅಗತ್ಯ ಸಹಕಾರ ನೀಡಲಾಗುವುದು~ ಎಂದು ವಾಲೀಕಾರ ತಿಳಿಸಿದರು.ಪತ್ರಿಕೆ ಸಂಪಾದಕ ಕೆ.ಎನ್.ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯ ನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಪತ್ರಿಕೆಯ ಸಾಹಿತ್ಯ ಪರಂಪರೆಯನ್ನು ಮೆಲಕು ಹಾಕಿದರು. ಮುಖ್ಯ ಉಪ ಸಂಪಾದಕ ರಘುನಾಥ ಚ.ಹ. ನಿರೂಪಿಸಿದರು. ಸಹ ಸಂಪಾದಕ ಗೋಪಾಲಕೃಷ್ಣ ಹೆಗಡೆ ವಂದಿಸಿದರು.ಬಹುಮಾನ ವಿಜೇತರ ಪರವಾಗಿ ಕೆ.ಅಲಕಾ, ಸಂತೋಷ ಗುಡ್ಡಿಯಂಗಡಿ, ಕೆ.ಎಸ್. ಶೈಲಜಾ, ರಶ್ಮಿ ಮಾತನಾಡಿದರು. ಸಮಾರಂಭಕ್ಕೂ ಮುನ್ನ ರೇಖಾ ಹೆಗಡೆ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry