ಮಂಗಳವಾರ, ನವೆಂಬರ್ 19, 2019
29 °C

ಪ್ರಜಾವಾಣಿ 50 ವರ್ಷಗಳ ಹಿಂದೆ

Published:
Updated:

ಪ್ರಶ್ನೆ ಪತ್ರಿಕೆ ಬಯಲು ಪ್ರಕರಣ: ಐವರ ದಸ್ತಗಿರಿ

ಬೆಂಗಳೂರು, ಏ. 6 -  ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಬಯಲಾದ ಪ್ರಕರಣದ ಸಂಬಂಧದಲ್ಲಿ ತೀವ್ರ ತನಿಖೆ ನಡೆಸುತ್ತಿರುವ ಸಿ. ಐ. ಡಿ. ಪೊಲೀಸರು ಇಲ್ಲಿಯವರೆಗೆ 5 ಮಂದಿಯನ್ನು ಬಂಧಿಸಿದ್ದಾರೆ.ಇದರಲ್ಲಿ ಸರ್ಕಾರಿ ಮುದ್ರಣಾಲಯದ ನೌಕರ ಶ್ರೀ ಬಿ. ಎಸ್. ಜಗದೀಶ್ ಹಾಗೂ ವಿದ್ಯಾ ಇಲಾಖೆ ಮುಖ್ಯಾಧಿಕಾರಿ ಕಚೇರಿಯ ಶ್ರೀ ಹಿರಾದಾಸ್ ನಾಯಕ್ ಅವರುಗಳನ್ನು ನಗರ ನ್ಯಾಯಾಧೀಶರಾದ ಶ್ರೀ ಕೆ. ಎಸ್. ಪಾಟೀಲ್ ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಪರೀಕ್ಷೆಗಳ ಕಮೀಷನರ್ ಕಚೇರಿಯ ಜವಾನರಾದ ಶ್ರೀ ಜವರಯ್ಯ, ಸರ್ಕಾರಿ ಮುದ್ರಣಾಲಯದ ನೌಕರ ಶ್ರೀ ಗುಂಡಣ್ಣ ಮತ್ತು ಈ ಸಾರಿ ಖಾಸಗಿಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕುಳಿತಿದ್ದ 22 ವರ್ಷ ವಯಸ್ಸಿನ ವಿದ್ಯಾರ್ಥಿ ಹಿರಾಲಾಲ್ ಅವರುಗಳು ನ್ಯಾಯಾಧೀಶರ ಮುಂದೆ ಹಾಜರ‌್ಪಡಿಸಿ ರಿಮಾಂಡ್ ಪಡೆಯಲಾಗಿದೆ.ಕೆಂಗಲ್‌ರ ವಾದಕ್ಕೆ ಉಗ್ರ ಖಂಡನೆ

ನವದೆಹಲಿ, ಏ. 6 - ರಾಷ್ಟ್ರದ ತಾಟಸ್ಥ್ಯ ನೀತಿ ವಿಫಲಗೊಂಡಿದೆಯೆಂದು ಇಂದು ಎ.ಐ.ಸಿ.ಸಿ. ಸಭೆಯಲ್ಲಿ ವಾದಿಸಿದ ಮೈಸೂರಿನ ಮಾಜಿ ಮುಖ್ಯಮಂತ್ರಿ ಶ್ರೀ ಕೆ. ಹನುಮಂತಯ್ಯನವರು, ಹೆಚ್ಚು ಕಡಿಮೆ ಸಭೆಯ ಎಲ್ಲ ಸದಸ್ಯರ ತೀವ್ರ ಖಂಡನೆಗೆ ಗುರಿಯಾಗಬೇಕಾಯಿತು.ಚೀಣ ಆಕ್ರಮಣ ಕುರಿತು ಸಭೆ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯವೊಂದರ ಬಗ್ಗೆ ಚರ್ಚೆ ಹೆಚ್ಚು ಕಡಿಮೆ ರಾಷ್ಟ್ರದ ತಾಟಸ್ಥ್ಯ ನೀತಿ ಹಾಗೂ ಸಮಾಜವಾಗಿ ಧೋರಣೆಗಳನ್ನು ಕುರಿತೇ ಆಗಿದ್ದಿತು.

ಚಂದ್ರಗ್ರಹವನ್ನು ಯಶಸ್ವಿಯಾಗಿ ದಾಟಿದ ಲ್ಯೂನಿಕ್

ಮಾಸ್ಕೊ, ಏ. 6 - ಕಳೆದ ಮಂಗಳವಾರ ರಷ್ಯ ಪ್ರಯೋಗಿಸಿದ `ಲ್ಯೂನಿಕ್ - 4' ಚಂದ್ರಗ್ರಹ ರಾಕೆಟ್ ಇಂದು ಸಂಜೆ ಭಾರತೀಯ ವೇಳೆ 6-45ರ ಹೊತ್ತಿಗೆ ಚಂದ್ರಗ್ರಹದ ಮೇಲುಭಾಗದಲ್ಲಿ ಸುಮಾರು 5300 ಮೈಲಿಗಳ ಎತ್ತರದಲ್ಲಿ ದಾಟಿ ಹೋಯಿತೆಂದು `ಟಾಸ್' ವಾರ್ತಾ ಸಂಸ್ಥೆ ವರದಿ ಮಾಡಿತು.ಈ ರಾಕೆಟ್ ಚಂದ್ರಗ್ರಹವನ್ನು ದಾಟಿ ಮುಂದುವರಿಯುವುದೆಂದೂ, ಚಂದ್ರಗ್ರಹದ ಸುತ್ತ ಸುತ್ತುವುದಿಲ್ಲವೆಂದೂ ಎರಡು ದಿನಗಳ ಕೆಳಗೆ ರಷ್ಯ ವಲಯಗಳು ತಿಳಿಸಿದ್ದವು.

ರಾಷ್ಟ್ರಪಕ್ಷಿ ನವಿಲಿಗೆ ರಕ್ಷಣೆ

ಬೆಂಗಳೂರು, ಏ. 6 - ಭಾರತದ `ರಾಷ್ಟ್ರಪಕ್ಷಿ' ನವಿಲಿನ ಹತ್ಯೆಯನ್ನು ನಿಷೇಧಿಸಲು ಶಿಫಾರಸು ಮಾಡಲಾಗಿದೆ.

ರಾಜ್ಯದ ಅರಣ್ಯ ಮಸೂದೆಯನ್ನು ಪರಿಶೀಲಿಸಿದ ಜಂಟಿ ಸೆಲೆಕ್ಟ್ ಸಮಿತಿಯು, ತನ್ನ ವರದಿಯಲ್ಲಿ ರಕ್ಷಿತ ವನ್ಯಮೃಗಗಳ ಪಟ್ಟಿಯಲ್ಲಿ ರಾಷ್ಟ್ರಪಕ್ಷಿಯನ್ನು ಸೇರಿಸಿದೆ. ರೇಷ್ಮೆ ಮೊಟ್ಟೆಯನ್ನು ತೆಗೆದು ಹಾಕಿದೆ.

ಪ್ರತಿಕ್ರಿಯಿಸಿ (+)